ADVERTISEMENT

T20 WC: ಭಾರತ–ಪಾಕ್ ಪಂದ್ಯ ನಡೆಯದೇ ಇದ್ದಿದ್ದರೆ ಅಪಾರ ನಷ್ಟ; ಯಾರಿಗೆ ಎಷ್ಟು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಫೆಬ್ರುವರಿ 2026, 5:31 IST
Last Updated 12 ಫೆಬ್ರುವರಿ 2026, 5:31 IST
ಪಾಕಿಸ್ತಾನ ಮತ್ತು ಭಾರತ ಕ್ರಿಕೆಟ್‌ ತಂಡದ ಅಭಿಮಾನಿಗಳು (ಸಂಗ್ರಹ ಚಿತ್ರ)
ಪಾಕಿಸ್ತಾನ ಮತ್ತು ಭಾರತ ಕ್ರಿಕೆಟ್‌ ತಂಡದ ಅಭಿಮಾನಿಗಳು (ಸಂಗ್ರಹ ಚಿತ್ರ)   ಪಿಟಿಐ ಚಿತ್ರ

ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್‌ ಪಂದ್ಯಾವಳಿ, ಕೇವಲ ಕ್ರೀಡಾ ಸ್ಪರ್ಧೆಯಾಗಿ ಮಾತ್ರ ಉಳಿದಿಲ್ಲ. ಬದಲಾಗಿ, ಅದೊಂದು ವಿಶ್ವದ ಅತೀ ದೊಡ್ಡ ವಾಣಿಜ್ಯ ವಹಿವಾಟಿನ ಕೇಂದ್ರವಾಗಿದೆ. ಉಭಯ ದೇಶಗಳ ನಡುವಿನ ರಾಜಕೀಯ ಕಾರಣದಿಂದಾಗಿ ಭಾರತ–ಪಾಕ್ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆಯುವುದಿಲ್ಲ. ಆದರೆ, ವಿಶ್ವಕಪ್, ಏಷ್ಯಾಕಪ್, ಚಾಂಪಿಯನ್ಸ್‌ ಟ್ರೋಫಿಯಂತ ಟೂರ್ನಿಗಳಲ್ಲಿ ಮಾತ್ರ ಉಭಯ ತಂಡಗಳು ಮುಖಾಮುಖಿಯಾಗುತ್ತಿವೆ.

ಈ ಪಂದ್ಯಾವಳಿಯ ಸಂದರ್ಭದಲ್ಲಿ ಬಿಸಿಸಿಐ, ಐಸಿಸಿ ಮತ್ತು ‍ಪಿಸಿಬಿ ಕೋಟಿ ಕೋಟಿ ಆದಾಯ ಗಳಿಸುತ್ತವೆ. ಆದರೆ, 2026ರ ಟಿ20 ವಿಶ್ವಕಪ್‌ನಲ್ಲಿ ಆಯೋಜನೆಯಾಗಿದ್ದ ಭಾರತ–ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ರದ್ದಾಗುವ ಆತಂಕ ಎದುರಾಗಿತ್ತು.

ಪಾಕಿಸ್ತಾನ ತಂಡ ಬಾಂಗ್ಲಾದೇಶಕ್ಕೆ ತನ್ನ ಬೆಂಬಲ ನೀಡುವ ಉದ್ದೇಶದ ಭಾಗವಾಗಿ ಪಾಕಿಸ್ತಾನ ತಂಡ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ನಿರ್ಧರಿಸಿತ್ತು. ಒಂದುವೇಳೆ ಈ ಪಂದ್ಯ ರದ್ದಾಗಿದ್ದರೆ, ಪಾಕಿಸ್ತಾನ ಕ್ರಿಕೆಟ್ ಬೋರ್ಡ್, ಐಸಿಸಿ ಹಾಗೂ ಭಾರತ ಕ್ರಿಕೆಟ್ ಬೋರ್ಡ್‌ಗೆ ಅಪಾರ ನಷ್ಟ ಉಂಟಾಗುವ ಸಂಭವ ಇತ್ತು.

ADVERTISEMENT

ಭಾರತ–ಪಾಕ್ ಪಂದ್ಯದದಿಂದ ಬರುವ ಆದಾಯ

ಅಂದಾಜಿನ ಪ್ರಕಾರ, ಐಸಿಸಿ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯದಿಂದ ಸುಮಾರು ₹2,200 ಕೋಟಿಗೂ (250 ಮಿಲಿಯನ್ ಯುಎಸ್ ಡಾಲರ್) ಅಧಿಕ ಆದಾಯ ಹರಿದು ಬರುತ್ತದೆ ಎಂದು ವರದಿಯಾಗಿದೆ. ಒಂದುವೇಳೆ ಈ ಪಂದ್ಯ ನಡೆಯದೇ ಇದ್ದಿದ್ದರೆ, ಐಸಿಸಿಗೆ ಸುಮಾರು ₹1,460 ಕೋಟಿ ( 174 ಮಿಲಿಯನ್ ಡಾಲರ್) ನಷ್ಟ ಉಂಟಾಗುವ ಸಂಭವ ಇತ್ತು ಎಂದು ಅಂದಾಜಿಸಲಾಗಿದೆ.

ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ರದ್ದಾದರೆ, ಕೇವಲ ಜಾಹೀರಾತು ಒಂದರಿದಂಲೇ ಬರೋಬ್ಬರಿ ₹200ರಿಂದ ₹250 ಕೋಟಿ ಆರ್ಥಿಕ ನಷ್ಟ ಉಂಟಾಗಲಿದೆ ಎಂದು ವರದಿಯಾಗಿದೆ. ಈ ಪಂದ್ಯದ ಪ್ರತಿ 10 ಸೆಕೆಂಡ್‌ ಜಾಹೀರಾತಿಗೆ ₹25ರಿಂದ ₹40 ಲಕ್ಷ ಶುಲ್ಕ ವಿಧಿಸಲಾಗುತ್ತದೆ.

ಇದರಿಂದ ಭಾರತ ಕ್ರಿಕೆಟ್ ಮಂಡಳಿ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಗಳು ನೇರ ಮತ್ತು ಪರೋಕ್ಷ ಆದಾಯದಲ್ಲಿ ₹200 ಕೋಟಿ ಹಣವನ್ನು ಕಳೆದುಕೊಳ್ಳುವ ಸಂಭವ ಇತ್ತು.

ಭವಿಷ್ಯದ ಪರಿಣಾಮ:

ಭಾರತ–ಪಾಕಿಸ್ತಾನ ತಂಡಗಳ ನಡುವಿನ ಟೂರ್ನಿಯ ಮೊತ್ತದ ಮೌಲ್ಯ ಕುಸಿಯಲಿದೆ. ಮುಂಬರುವ ವರ್ಷಗಳಲ್ಲಿ ಮುಂದಿನ ಮಾಧ್ಯಮ ಹಕ್ಕುಗಳ ಮೌಲ್ಯವೂ ಕಡಿಮೆಯಾಗುತ್ತಿತ್ತು.

ಐಸಿಸಿಯು ಟಿ20 ವಿಶ್ವಕಪ್ 2026ರ ಟೂರ್ನಿಯಿಂದ ಸುಮಾರು ₹6,339.2 ಕೋಟಿ ಆದಾಯ ನಿರೀಕ್ಷಿಸುತ್ತಿತ್ತು. ಇದರಲ್ಲಿ ಶೇ 15-20 ಕುಸಿತ ಸಂಭವಿಸುವ ಸಾಧ್ಯತೆ ಇತ್ತು.

ಭಾರತ ಪಾಕಿಸ್ತಾನ ನಡುವಿನ ಪಂದ್ಯ ನಡೆಯದೇ ಇದ್ದಿದ್ದರೆ, ಪಂದ್ಯ ಆಯೋಜನೆ ಹೊಣೆ ಹೊತ್ತಿದ್ದ ಶ್ರೀಲಂಕಾ ಕ್ರಿಕೆಟ್‌ ಮಂಡಳಿಗೆ ಐಸಿಸಿ ಪರಿಹಾರ ನೀಡಬೇಕಾಗುವ ಸಂಭವವಿತ್ತು. ಐಸಿಸಿ ಸದಸ್ಯ ರಾಷ್ಟ್ರಗಳು ಹಾಗೂ ಐಸಿಸಿ ಟೂರ್ನಿಯ ಆದಾಯವನ್ನೇ ನಂಬಿಕೊಂಡಿರುವ ವೆಸ್ಟ್ ಇಂಡೀಸ್ ವಿಂಡೀಸ್‌, ಸ್ಕಾಟ್ಲೆಂಡ್‌, ಜಿಂಬಾಬ್ವೆ, ನಮೀಬಿಯಾ, ಆಫ್ಗಾನಿಸ್ತಾನ ತಂಡಗಳಿಗೂ ನಷ್ಟ ಉಂಟಾಗುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.