
ಭಾರತ ತಂಡ
ಚಿತ್ರ ಎಕ್ಸ್
ಚೆನ್ನೈ: ಟಿ20 ವಿಶ್ವಕಪ್ 2026ರ ಅತ್ಯಂತ ಮಹತ್ವದ ಪಂದ್ಯದಲ್ಲಿ ಇಂದು (ಗುರುವಾರ) ಭಾರತ ಹಾಗೂ ಜಿಂಬಾಂಬ್ವೆ ತಂಡಗಳು ಚೆನ್ನೈನ ಎಂ. ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದ ಗೆಲುವು ಉಭಯ ತಂಡಗಳಿಗೂ ಮಹತ್ವದ್ದಾಗಿದೆ. ವಿಶೇಷವಾಗಿ ಭಾರತ ಈ ಪಂದ್ಯವನ್ನು ದೊಡ್ಡ ಅಂತರದಿಂದ ಗೆಲ್ಲಬೇಕಾದ ಒತ್ತಡದಲ್ಲಿದೆ.
ಅಹಮದಾಬಾದ್‌ನಲ್ಲಿ ಮುಕ್ತಾಯಗೊಂಡ ಸೂಪರ್–8ರ ಹಂತದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಹೀನಾಯವಾಗಿ ಸೋತ ಬಳಿಕ ಭಾರತ ತಂಡವು ಬಾಕಿ ಉಳಿದಿರುವ ಎರಡೂ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಸೂಪರ್–8ರ ಹಂತದಲ್ಲಿ ಗ್ರೂಪ್–1ರಲ್ಲಿ ಉಳಿದ ತಂಡಗಳಿಗೆ ಹೋಲಿಸಿದರೆ, ಸ್ವಲ್ಪ ದುರ್ಬಲ ತಂಡ ಎನಿಸಿಕೊಂಡಿರುವ ಜಿಂಬಾಂಬ್ವೆ ತಂಡದ ಎದುರು ಬೃಹತ್ ಅಂತರದಲ್ಲಿ ಗೆಲ್ಲುವ ಮೂಲಕ ಭಾರತ ತಂಡವು ಕುಸಿದಿರುವ ರನ್‌ರೇಟ್ ಅನ್ನು ಹೆಚ್ಚಿಸಿಕೊಳ್ಳಬೇಕಿದೆ. ಪ್ರಸ್ತುತ ಭಾರತದ ರನ್‌ರೇಟ್ (–3.800) ರಷ್ಟಿದೆ.
ಚೆನ್ನೈನಲ್ಲಿ ಹೇಗಿದೆ ಭಾರತದ ದಾಖಲೆ:
ಚೆನ್ನೈನ ಚೆಪಾಕ್ ಮೈದಾನವು ಸ್ಪಿನ್ ಸ್ನೇಹಿಯಾಗಿದ್ದು, ವೇಗದ ಬೌಲರ್‌ಗಳಿಗೆ ಹೋಲಿಸಿದರೆ, ಸ್ಪಿನ್ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡಲಿದೆ. ಆದರೂ ಈ ಬಾರಿಯ ವಿಶ್ವಕಪ್‌ನಲ್ಲಿ ವೇಗಿಗಳು ಕೂಡ ಗಮನಾರ್ಹ ಪ್ರದರ್ಶನ ತೋರಿದ್ದಾರೆ. ಈ ಮೈದಾನದಲ್ಲಿ ಭಾರತವು ಇದುವರೆಗೆ ಮೂರು ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 2 ಗೆಲುವು ಹಾಗೂ 1ರಲ್ಲಿ ಸೋಲು ಅನುಭವಿಸಿದೆ.
ಎಂ. ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ 2012ರಲ್ಲಿ ಮೊದಲ ಬಾರಿಗೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಟಿ20 ಪಂದ್ಯ ಆಯೋಜನೆಗೊಂಡಿತ್ತು. ಆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 168 ರನ್‌ಗಳ ಗುರಿ ನೀಡಿತ್ತು. ಆದರೆ, 166 ರನ್ ಗಳಿಸಿದ ಭಾರತ 1 ರನ್‌ನಿಂದ ಸೋಲು ಅನುಭವಿಸಿತ್ತು.
2018ರಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ, ಭಾರತ ತಂಡವು ವಿಂಡೀಸ್ ನೀಡಿದ್ದ 182 ರನ್‌ಗಳನ್ನು ಬೆನ್ನಟ್ಟಿ ಗೆಲುವು ಸಾಧಿಸಿತ್ತು.
ಇತ್ತೀಚೆಗೆ 2025ರ ಜನವರಿಯಲ್ಲಿ ನಡೆದ ಪಂದ್ಯದಲ್ಲಿ, ಇಂಗ್ಲೆಂಡ್ ನೀಡಿದ್ಧ 166 ರನ್‌ಗಳ ಗುರಿ ಬೆನ್ನಟ್ಟಿ ಗೆಲುವು ದಾಖಲಿಸಿತ್ತು.
2026ರ ಟಿ20 ವಿಶ್ವಕಪ್‌ನಲ್ಲಿ ಎಂ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯಗಳು
ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಇದುವರೆ ಒಟ್ಟು 6 ಪಂದ್ಯಗಳು ನಡೆದಿವೆ. ಇದರಲ್ಲಿ ಮೊದಲು ಬ್ಯಾಟಿಂಗ್ ಮಾಡುವ ತಂಡದ ಸರಾಸರಿ ಸ್ಕೋರ್ 187 ಆಗಿದ್ದರೆ, ಗುರಿ ಬೆನ್ನಟ್ಟುವಾಗ ಸರಾಸರಿ ಸ್ಕೋರ್ 153 ಆಗಿದೆ.
ಯಾವ ತಂಡಕ್ಕೆ ಎಷ್ಟು ಗೆಲುವು–ಸೋಲು
ಈ ಬಾರಿಯ ವಿಶ್ವಕಪ್‌ನಲ್ಲಿ ಇದುವರೆಗೆ ಇದೇ ಮೈದಾನದಲ್ಲಿ ಒಟ್ಟು 6 ಪಂದ್ಯಗಳು ನಡೆದಿದ್ದು, ಇದರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡವು 3 ಪಂದ್ಯಗಳನ್ನು ಮತ್ತು ಎರಡನೆಯದಾಗಿ ಬ್ಯಾಟಿಂಗ್ ಮಾಡಿದ ತಂಡವು 3 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.