
ಭಾರತ ಮಹಿಳಾ ಕ್ರಿಕೆಟ್ ತಂಡ
ಚಿತ್ರ: ಬಿಸಿಸಿಐ
ಮಹಿಳಾ ಏಕದಿನ ವಿಶ್ವಕಪ್ 2025ರಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿರುವ ಭಾರತ ತಂಡಕ್ಕೆ ಕ್ರಿಕೆಟ್ ದಿಗ್ಗಜರು ಸೇರಿದಂತೆ ಪ್ರಮುಖ ರಾಜಕೀಯ ನಾಯಕರು ಶುಭಾಶಯ ತಿಳಿಸಿದ್ದಾರೆ.
ಎಕ್ಸ್ ಮೂಲಕ ಅಭಿನಂದನೆ ಸಲ್ಲಿಸಿರುವ ಸಚಿನ್ ತೆಂಡೂಲ್ಕರ್, ‘ಅದ್ಭುತ ಗೆಲುವು, ಜೆಮಿಮಾ ರಾಡ್ರಿಗಸ್ ಹಾಗೂ ಹರ್ಮನ್‌ಪ್ರೀತ್ ಕೌರ್ ಉತ್ತಮವಾಗಿ ಆಡಿದ್ದೀರಿ. ಶ್ರೀಚರಣಿ ಮತ್ತು ದೀಪ್ತಿ ಶರ್ಮ ಉತ್ತಮ ಬೌಲಿಂಗ್‌ನೊಂದಿಗೆ ಆಟವನ್ನು ಜೀವಂತವಾಗಿರಿಸಿದ್ದೀರಿ. ತ್ರಿವರ್ಣ ಧ್ವಜವನ್ನು ಎತ್ತರಕ್ಕೆ ಹಾರಿಸುತ್ತೀರಿ’ ಎಂದು ಶ್ಲಾಘಿಸಿದ್ದಾರೆ.
ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ‘ಸ್ಕೋರ್‌ಬೋರ್ಡ್‌ನಲ್ಲಿ ಒತ್ತಡವನ್ನು ಮೀರಿರುವ ಅನೇಕ ಗೆಲುವುಗಳಲ್ಲಿ ಇದೂ ಒಂದು. ಒತ್ತಡದಲ್ಲಿ ಜಗತ್ತು ನೋಡುತ್ತಿತ್ತು. ಹರ್ಮನ್‌ಪ್ರೀತ್ ಕೌರ್ ಅವರ ನಾಯಕತ್ವ ಹಾಗೂ ಜಮೀಮಾ ರಾಡ್ರಿಗಸ್ ಅವರ ಸಮಯೋಚಿತ ಬ್ಯಾಟಿಂಗ್ ಗೆಲುವಿಗೆ ಕಾರಣವಾಗಿದೆ. ಜೆಮಿಮಾ ವೃತ್ತಿ ಜೀವನದ ಅತ್ಯುತ್ತಮ ಇನಿಂಗ್ಸ್ ಆಡಿದ್ದಾರೆ‘.
‘ಕೌರ್ ಹಾಗೂ ಜೆಮಿಮಾ ಜೊತೆಯಾಟ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಆಟದ ಜೊತೆಗೆ ಪರಸ್ಪರರ ಮೇಲಿನ ನಂಬಿಕೆಯಿಂದ ಈ ತಂಡ ಏನು ಬೇಕಾದರು ಸಾಧಿಸುತ್ತದೆ. ಸೆಮಿಫೈನಲ್ ಗೆದ್ದು ಫೈನಲ್‌ಗೆ ತಲುಪಿರುವ ನಿಮಗೆ ಅಭಿನಂದನೆಗಳು’ ಎಂದು ಬರೆದಿದ್ದಾರೆ.
ಇನ್ನೂ, ಭಾರತ ಪುರುಷ ತಂಡದ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಆಸೀಸ್ ವಿರುದ್ಧ ಗೆದ್ದ ತಂಡವನ್ನು ಪ್ರಶಂಸಿಸಿದ್ದಾರೆ.
ಕನಸು, ನಂಬಿಕೆ. ಸಾಧಿಸಿ. ನಮ್ಮ ಮಹಿಳೆಯರು ನಿಜವಾದ ಚಾಂಪಿಯನ್‌ಗಳು ಹೇಗಿರುತ್ತಾರೆ ಎಂಬುದನ್ನು ಜಗತ್ತಿಗೆ ತೋರಿಸಿದ್ದಾರೆ. ಈಗ ಇತಿಹಾಸ ಸೃಷ್ಟಿಯಾಗಿದೆ. ಭಾರತ ಇತಿಹಾಸ ಸೃಷ್ಠಿಸಿದೆ ಎಂದು ನಟ ಸೋನು ಸೂದ್ ಅಭಿನಂದನೆ ಸಲ್ಲಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಎಕ್ಸ್ ಮೂಲಕ ‘ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿ ವಿಶ್ವಕಪ್ ಫೈನಲ್ ಪ್ರವೇಶಿಸಿರುವ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಜೆಮಿಮಾ ರಾಡ್ರಿಗಸ್ ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್ ಅದ್ಭುತ ಇನಿಂಗ್ಸ್ ಆಡಿದ್ದಾರೆ’ ಎಂದು ಬರೆದಿದ್ದಾರೆ.
‘ಇಡೀ ತಂಡದ ಒಗ್ಗಟ್ಟಿನ ಪ್ರದರ್ಶನದಿಂದಾಗಿ ಮಹಿಳಾ ಕ್ರಿಕೆಟ್‌ನಲ್ಲಿ ಶ್ರೇಷ್ಠ ರನ್ ಚೇಸ್ ಮಾಡಲು ಸಾಧ್ಯವಾಗಿದೆ. ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿರುವ ನಿಮಗೆ ನನ್ನ ಶುಭಾಶಯಗಳು. ವಿಶ್ವಕಪ್ ಗೆದ್ದು ದೇಶವೇ ಹೆಮ್ಮೆಪಡುವಂತೆ ಮಾಡಿ’ ಎಂದು ಶುಭ ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.