ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ
(ಚಿತ್ರ ಕೃಪೆ: X@imlt20official)
ರಾಯಪುರ: ಚೊಚ್ಚಲ ಇಂಟರ್‌ನ್ಯಾಷನಲ್ ಮಾಸ್ಟರ್ಸ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿರುವ ವೆಸ್ಟ್‌ಇಂಡೀಸ್ ಮಾಸ್ಟರ್ಸ್ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿದೆ.
ಆ ಮೂಲಕ ಟ್ರೋಫಿ ಗೆಲ್ಲಲು ಇಂಡಿಯಾ ಮಾಸ್ಟರ್ಸ್ ಗೆಲುವಿಗೆ 149 ರನ್‌ಗಳ ಗುರಿ ಒಡ್ಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ವಿಂಡೀಸ್‌ಗೆ ಡ್ವೇಯ್ನ್ ಸ್ಮಿತ್ ಆಸರೆಯಾದರು. ಒಂದೆಡೆ ವಿಕೆಟ್ ಪತನವಾಗುತ್ತಿದ್ದರೂ ಆಕ್ರಮಣಕಾರಿ ಆಟವಾಡುವ ಮೂಲಕ ಗಮನ ಸೆಳೆದರು. ಸ್ಮಿತ್ 45 ರನ್ (35 ಎಸೆತ, 6 ಬೌಂಡರಿ, 2 ಸಿಕ್ಸರ್) ಗಳಿಸಿ ಔಟ್ ಆದರು.
ನಾಯಕ ಬ್ರಿಯಾನ್ ಲಾರಾ (6) ವೈಫಲ್ಯ ಅನುಭವಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದ ಲಿಂಡ್ಲ್ ಸಿಮನ್ಸ್ ಬಿರುಸಿನ ಅರ್ಧಶತಕ ಗಳಿಸುವ ಮೂಲಕ ಸವಾಲಿನ ಮೊತ್ತ ಪೇರಿಸಲು ನೆರವಾದರು.
ಕೇವಲ 41 ಎಸೆತಗಳನ್ನು ಎದುರಿಸಿದ ಸಿಮನ್ಸ್, ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 57 ರನ್ ಗಳಿಸಿದರು. ದಿನೇಶ್ ರಾಮದಿನ್ ಅಜೇಯ 12 ರನ್ ಗಳಿಸಿದರು.
ಭಾರತದ ಪರ ಕರ್ನಾಟಕದ ವಿನಯ್ ಕುಮಾರ್ ಮೂರು ಮತ್ತು ಶಹಬಾಜ್ ನದೀಂ ಎರಡು ವಿಕೆಟ್ ಗಳಿಸಿದರು.
ಸಚಿನ್ vs ಲಾರಾ...
ಈ ಮೊದಲು ಟಾಸ್ ಗೆದ್ದ ವೆಸ್ಟ್ ಇಂಡೀಸ್ ಮಾಸ್ಟರ್ಸ್ ತಂಡದ ನಾಯಕ ಬ್ರಿಯಾನ್ ಲಾರಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.
ರಾಯಪುರದ ಶಾಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಮೈದಾನದಲ್ಲಿ ಕ್ರಿಕೆಟ್ ದಿಗ್ಗಜರ ಈ ಪಂದ್ಯ ನಡೆಯುತ್ತಿದೆ.
ಇಂಡಿಯಾ ಮಾಸ್ಟರ್ಸ್ ತಂಡವನ್ನು ಕ್ರಿಕೆಟ್‌ನ ಆರಾಧ್ಯ ದೈವ ಸಚಿನ್ ತೆಂಡೂಲ್ಕರ್ ಮುನ್ನಡೆಸುತ್ತಿದ್ದಾರೆ. ಇದರೊಂದಿಗೆ ಮಗದೊಂದು ಸಲ ಸಚಿನ್ ಹಾಗೂ ಲಾರಾ ನಡುವೆ ಮೈದಾನದಲ್ಲಿ ಪೈಪೋಟಿ ಏರ್ಪಟ್ಟಿದೆ.
ಸಚಿನ್ ಪಡೆಯು ಲೀಗ್ ಹಂತದಲ್ಲಿ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಗೆದ್ದು ಎಂಟು ಅಂಕ ಪಡೆದು, ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದೊಂದಿಗೆ ಸೆಮಿಫೈನಲ್ ತಲುಪಿತ್ತು. ಆಸ್ಟ್ರೇಲಿಯಾ ಮಾಸ್ಟರ್ಸ್ ತಂಡವನ್ನು ಮಣಿಸಿ ಸಚಿನ್ ಬಳಗ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿತು.
ಮತ್ತೊಂದೆಡೆ ಲಾರಾ ಬಳಗವು ಲೀಗ್ ಹಂತದಲ್ಲಿ ಐದು ಪಂದ್ಯಗಳ ಪೈಕಿ ಮೂರರಲ್ಲಿ ಗೆದ್ದು ಆರು ಅಂಕ ಗಳಿಸಿ, ನಾಲ್ಕನೇ ಸ್ಥಾನದೊಂದಿಗೆ ನಾಲ್ಕರ ಘಟ್ಟ ಪ್ರವೇಶಿಸಿತ್ತು.
ಮೊದಲ ಆವೃತ್ತಿಯ ಟೂರ್ನಿಯಲ್ಲಿ ಒಟ್ಟು ಐದು ತಂಡಗಳು ಕಣದಲ್ಲಿದ್ದವು. ಶ್ರೀಲಂಕಾ ಮಾಸ್ಟರ್ಸ್ ಹಾಗೂ ಆಸ್ಟ್ರೇಲಿಯಾ ಮಾಸ್ಟರ್ಸ್ ಸೆಮೀಸ್‌ನಲ್ಲಿ ಹೊರಬಿದ್ದರೆ ದಕ್ಷಿಣ ಆಫ್ರಿಕಾ ಮಾಸ್ಟರ್ಸ್ ಹಾಗೂ ಇಂಗ್ಲೆಂಡ್ ಮಾಸ್ಟರ್ಸ್ ಲೀಗ್ ಹಂತದಿಂದಲೇ ನಿರ್ಗಮಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.