ADVERTISEMENT

IPL 2021: ಪಂತ್‌ರನ್ನು ಕೊಹ್ಲಿ, ವಿಲಿಯಮ್ಸ‌ನ್‌ಗೆ ಹೋಲಿಸಿದ ಆಸೀಸ್ ದಿಗ್ಗಜ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಏಪ್ರಿಲ್ 2021, 13:14 IST
Last Updated 15 ಏಪ್ರಿಲ್ 2021, 13:14 IST
ರಿಷಭ್ ಪಂತ್
ರಿಷಭ್ ಪಂತ್   

ಮುಂಬೈ: ವಿರಾಟ್ ಕೊಹ್ಲಿ ಹಾಗೂ ಕೇನ್ ವಿಲಿಯಮ್ಸನ್ ಅವರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಅವರನ್ನು ಹೋಲಿಕೆ ಮಾಡಿರುವ ಆಸ್ಟ್ರೇಲಿಯಾದ ಮಾಜಿ ದಿಗ್ಗಜ ರಿಕಿ ಪಾಂಟಿಂಗ್, ಅವರೊಬ್ಬ 'ಮ್ಯಾಚ್ ವಿನ್ನರ್' ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಂತ್ ಮುಂದಾಳತ್ವದ ಡೆಲ್ಲಿ ತಂಡದ ಮುಖ್ಯ ತರಬೇತುದಾರನ ಹೊಣೆಯನ್ನು ರಿಕಿ ಪಾಂಟಿಂಗ್ ನಿಭಾಯಿಸುತ್ತಿದ್ದಾರೆ. ಅತ್ತ ನಾಯಕರಾಗಿ ಪದಾರ್ಪಣೆ ಪಂದ್ಯದಲ್ಲೇ ರಿಷಭ್ ಪಂತ್ ಗೆಲುವು ದಾಖಲಿಸಿದ್ದರು.

'ಈ ಬಾರಿಯ ಐಪಿಎಲ್‌ನಲ್ಲಿ ನಾವು ಸರಿಯಾಗಿ ಆಳವಡಿಸಬೇಕಾದ ದೊಡ್ಡ ಟ್ರಿಕ್ ಏನೆಂದರೆ ರಿಷಭ್ ಪಂತ್ ಅವರ ಬ್ಯಾಟಿಂಗ್ ಕ್ರಮಾಂಕವಾಗಿದೆ. ಸಾಧ್ಯವಾದಷ್ಟು ಬೇಗನೇ ಅವರನ್ನು ಪಂದ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ರಿಷಭ್ ಪಂತ್ ಅವರು ವಿರಾಟ್ ಕೊಹ್ಲಿ ಅಥವಾ ಕೇನ್ ವಿಲಿಯಮ್ಸನ್ ಅವರಂತಹ ಆಟಗಾರನಾಗಿದ್ದು, ಕೊನೆಯ ವರೆಗೂ ಕ್ರೀಸಿನಲ್ಲಿ ನೆಲೆಯೂರಿದರೆ ಹೆಚ್ಚಿನ ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗಲಿದೆ' ಎಂದು ವಿವರಿಸಿದ್ದಾರೆ.

ADVERTISEMENT

'ಕಳೆದ ಋತುವಿನಲ್ಲಿ ನಮ್ಮ ಪಾಲಿಗೆ ಪಂತ್ ನಿರಾಶಾದಾಯಕ ಪ್ರದರ್ಶನ ನೀಡಿದ್ದರು. ಭಾರತದಲ್ಲಿ ಲಾಕ್‌ಡೌನ್ ಆಗಿದ್ದರಿಂದ ತೂಕ ವೃದ್ಧಿಸಿಕೊಂಡು ಟೂರ್ನಿಗೆ ಆಗಮಿಸಿದ್ದರು. ಇದರಿಂದಾಗಿ ಸ್ವಲ್ಪ ದುರ್ಬಲರಾದರು. ಬಳಿಕ ಸ್ನಾಯುಸೆಳೆತವೂ ಕಾಡಿತ್ತು. ನಾವು ನಿರೀಕ್ಷಿಸಿದಷ್ಟು ಉತ್ತಮವಾದ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಆದರೆ ಅವರನ್ನೀಗ ನೋಡಿ, ಅವರು ಫಿಟ್ ಆಗಿರುವುದನ್ನು ನೀವು ನೋಡಬಹುದು. ಅವರು ಭಾರತಕ್ಕಾಗಿ ಪಂದ್ಯಗಳನ್ನು ಗೆಲ್ಲಿಸುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಿಗೂ ಉತ್ತಮವಾಗಿ ಪರಿಣಮಿಸಲಿದ್ದಾರೆ' ಎಂದಿದ್ದಾರೆ.

'ರಿಷಭ್ ಪಂತ್ ವಿಕೆಟ್ ಕೀಪಿಂಗ್ ಕೌಶಲ್ಯದ ಬಗ್ಗೆಯೂ ಯಾವಾಗಲೂ ಪ್ರಶ್ನೆಗಳು ಎದ್ದಿವೆ. ಆದರೆ ಕೀಪಿಂಗ್‌ನತ್ತವೂ ಕಠಿಣ ಪರಿಶ್ರಮ ವಹಿಸುತ್ತಿದ್ದಾರೆ. ಬ್ಯಾಟಿಂಗ್ ಅಂತೂ ಅದ್ಭುತ. ಇಂಗ್ಲೆಂಡ್ ವಿರುದ್ಧ ಟರ್ನಿಂಗ್ ಪಿಚ್‌ನಲ್ಲಿ ನಾನು ನಿರೀಕ್ಷೆ ಮಾಡಿದಕ್ಕಿಂತಲೂ ಅತ್ಯುತ್ತಮವಾಗಿ ವಿಕೆಟ್ ಕೀಪಿಂಗ್ ಮಾಡಿದ್ದಾರೆ. ಇದೇ ರೀತಿ ಸುಧಾರಣೆ ತಂದರೆ ಮುಂದಿನ 10-12 ವರ್ಷಗಳಲ್ಲಿ ಭಾರತದ ಪ್ರಮುಖ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಮುಂದುವರಿಯಲಿದ್ದಾರೆ' ಎಂದು ಭವಿಷ್ಯ ನುಡಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.