ADVERTISEMENT

ಪ್ಲೇ-ಆಫ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಕೊಹ್ಲಿ, ಫಫ್, ಮ್ಯಾಕ್ಸ್‌ವೆಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಮೇ 2022, 15:45 IST
Last Updated 25 ಮೇ 2022, 15:45 IST
   

ಕೋಲ್ಕತ್ತ: ಕೋಲ್ಕತ್ತದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್ 2022 ಟೂರ್ನಿಯ ಪ್ಲೇ-ಆಫ್‌ ಹಂತದ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರರು ಬ್ಯಾಟಿಂಗ್ ವೈಫಲ್ಯವನ್ನು ಅನುಭವಿಸಿದ್ದಾರೆ.

ಬುಧವಾರ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಆರ್‌ಸಿಬಿ ನಾಯಕ ಫಫ್ ಡುಪ್ಲೆಸಿ, ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್‌ನಲ್ಲಿ ಮಿಂಚುವಲ್ಲಿ ವಿಫಲರಾದರು.

ಮಳೆಯಿಂದಾಗಿ ಪಂದ್ಯ 40 ನಿಮಿಷ ವಿಳಂಬವಾಗಿ ಆರಂಭವಾಗಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ಆರಂಭ ಉತ್ತಮವಾಗಿರಲಿಲ್ಲ.

ಮೊದಲ ಓವರ್‌ನಲ್ಲೇ ಖಾತೆ ತೆರೆಯುವ ಮುನ್ನವೇ ಡುಪ್ಲೆಸಿ ಪೆವಿಲಿಯನ್ ಸೇರಿದರು.

ಬಳಿಕ ಮಾಜಿ ನಾಯಕ ವಿರಾಟ್ ಕೊಹ್ಲಿ 25 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. ಅಲ್ಲದೆ ರಜತ್ ಪಾಟಿದಾರ್ ಜೊತೆಗೆ ಮಹತ್ವದ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು.

ಆದರೆ ಉತ್ತಮವಾಗಿ ಆಡುತ್ತಿದ್ದ ಕೊಹ್ಲಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. ಅತ್ತ ಪಾಟಿದಾರ್ 28 ಎಸೆತಗಳಲ್ಲಿ ಅರ್ದಶತಕ ಗಳಿಸಿ ತಂಡಕ್ಕೆ ನೆರವಾದರು.

ಇನ್ನೊಂದೆಡೆ ದೊಡ್ಡ ಹೊಡತಕ್ಕೆ ಮುಂದಾದ ಮ್ಯಾಕ್ಸ್‌ವೆಲ್ ಕೇವಲ 9 ರನ್ ಗಳಿಸಿ ಔಟ್ ಆದರು. ಇದರಿಂದಾಗಿ ಆರ್‌ಸಿಬಿ 86ಕ್ಕೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಯಿತು.

ಈ ಪಂದ್ಯದಲ್ಲಿ ಸೋತರೆ ಐಪಿಎಲ್ ಟ್ರೋಫಿ ಕನಸು ಭಗ್ನಗೊಳ್ಳಲಿದೆ. ಇಲ್ಲಿ ಗೆದ್ದ ತಂಡವು ಶುಕ್ರವಾರ ನಡೆಯಲಿರುವ ಎರಡನೇ ಕ್ವಾಲಿ‌ಫೈಯರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಸವಾಲನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.