ಟ್ವಿಟರ್ ಸ್ಕ್ರೀನ್‌ಶಾಟ್
ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ರೋಚಕ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 27 ರನ್ ಅಂತರದ ಗೆಲುವು ದಾಖಲಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇ-ಆಫ್‌ಗೆ ಪ್ರವೇಶಿಸಿತ್ತು.
ಕೊನೆಯ ಓವರ್‌ನಲ್ಲಿ ಚೆನ್ನೈ ತಂಡದ ತಾರೆ ಮಹೇಂದ್ರ ಸಿಂಗ್ ಧೋನಿ ಔಟ್ ಆಗುವುದರೊಂದಿಗೆ ಹಾಲಿ ಚಾಂಪಿಯನ್ ಚೆನ್ನೈ ತಂಡದ ಕನಸು ಅಸ್ತಮಿಸಿತ್ತು.
ಈ ಪಂದ್ಯಕ್ಕೆ ಸಂಬಂಧಪಟ್ಟಂತೆ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿವಾದಕ್ಕೆ ಕಾರಣವಾಗಿದೆ.
ಪಂದ್ಯದ ಬಳಿಕ ಇತ್ತಂಡಗಳ ಆಟಗಾರರು ಪರಸ್ಪರ ಗೌರವದೊಂದಿಗೆ ಹಸ್ತಲಾಘವ ಮಾಡುವುದು ವಾಡಿಕೆಯಾಗಿದೆ. ಆದರೆ ಈ ಪಂದ್ಯದ ಬಳಿಕ ಮೈದಾನದ ಅರ್ಧದವರೆಗೆ ಹೆಜ್ಜೆಯನ್ನಿಟ್ಟು ಬಂದ ಧೋನಿ ದಿಢೀರ್ ಹಿಂತಿರುಗಿ ತೆರಳುತ್ತಾರೆ. ಆರಂಭದಲ್ಲಿ ಗೆಲುವಿನ ಸಂಭ್ರಮಾಚರಣೆಯಲ್ಲಿದ್ದ ಆರ್‌ಸಿಬಿ ಆಟಗಾರರು ಹಸ್ತಲಾಘವ ಮಾಡಲು ವಿಳಂಬ ಮಾಡಿರುವುದು ಧೋನಿ ಕೋಪಕ್ಕೆ ಕಾರಣವಾಗಿತ್ತು ಎನ್ನಲಾಗಿತ್ತು.
ಆದರೆ ಘಟನೆಗೆ ಸಂಬಂಧಿಸಿದಂತೆ ಮಗದೊಂದು ವಿಡಿಯೊ ಈಗ ಹರಿದಾಡುತ್ತಿದ್ದು, ಆರ್‌ಸಿಬಿ ಆಟಗಾರರು ಬರುತ್ತಿದ್ದಂತೆಯೇ ಧೋನಿ ಏಕಾಏಕಿ ಹಿಂತಿರುಗಿ ತೆರಳುತ್ತಿರುವ ದೃಶ್ಯ ಕಂಡುಬಂದಿದೆ. ಇದರಿಂದಾಗಿ ನಿಜವಾಗಿಯೂ ಇಲ್ಲಿ ತಪ್ಪು ಯಾರದ್ದು ಎಂಬುದು ಚರ್ಚೆಗೆ ಗ್ರಾಸವಾಗಿದೆ.
ಮಗದೊಂದು ವಿಡಿಯೊದಲ್ಲಿ ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಧೋನಿ ಅವರನ್ನು ಹುಡುಕಿಕೊಂಡು ಡ್ರೆಸ್ಸಿಂಗ್ ಕೊಠಡಿಗೆ ತೆರಳುತ್ತಿರುವುದು ಕಂಡುಬಂದಿದೆ.
ಈ ಎಲ್ಲ ಘಟನೆಗಳ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಇದುವರೆಗೆ ಬಿಡುಗಡೆಯಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.