ಎಂ.ಎಸ್. ಧೋನಿ
-ಪಿಟಿಐ ಚಿತ್ರ
ಗುವಾಹಟಿ: ಮಹೇಂದ್ರ ಸಿಂಗ್ ಧೋನಿ ಅವರು ಮೊಣಕಾಲು ನೋವಿನಿಂದ ಬಳಲುತ್ತಿರುವುದರಿಂದ ಪಂದ್ಯದ ಪರಿಸ್ಥಿತಿಯನ್ನು ಆಧರಿಸಿ ತಮ್ಮ ಬ್ಯಾಟಿಂಗ್ ಕ್ರಮಾಂಕವನ್ನು ನಿರ್ಧರಿಸುತ್ತಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಕೋಚ್ ಸ್ಟೀಫನ್ ಫ್ಲೆಮಿಂಗ್ ತಿಳಿಸಿದ್ದಾರೆ.
ಕಳೆದ ವಾರ ಚೆಪಾಕ್‌ನಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸಿಎಸ್‌ಕೆ 50 ರನ್‌ಗಳ ಅಂತರದಿಂದ ಸೋಲು ಕಂಡಿತ್ತು. ಈ ಪಂದ್ಯದಲ್ಲಿ 43 ವರ್ಷದ ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಕ್ಕಾಗಿ ಟೀಕೆಗೆ ಗುರಿಯಾಗಿದ್ದರು.
ನಿನ್ನೆ (ಭಾನುವಾರ) ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 6 ರನ್ ಅಂತರದಿಂದ ಸೋಲು ಅನುಭವಿಸಿತ್ತು. ಈ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಧೋನಿ 11 ಎಸೆತಗಳಲ್ಲಿ ಕೇವಲ 16 ರನ್ ಗಳಿಸಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದರು.
ಪಂದ್ಯದ ಫಲಿತಾಂಶ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸ್ಟೀಫನ್ ಫ್ಲೆಮಿಂಗ್, ‘ಇದು ಸಮಯದ ವಿಷಯವಾಗಿರುವುದರಿಂದ ಧೋನಿ ಅವರೇ ಅದನ್ನು ನಿರ್ಣಯಿಸುತ್ತಾರೆ. ಧೋನಿ ಅವರ ದೇಹ, ಮೊಣಕಾಲುಗಳು ಮೊದಲಿನಂತೆ ಸ್ಪಂದಿಸುತ್ತಿಲ್ಲ. ಅವರು ಚೆನ್ನಾಗಿ ಓಡುತ್ತಾರೆ. ಆದರೆ, ಪೂರ್ಣ ಸಾಮರ್ಥ್ಯದೊಂದಿಗೆ 10 ಓವರ್ ಬ್ಯಾಟಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದ್ದಾರೆ.
‘ಧೋನಿ ಅವರು ಸ್ವಲ್ಪ ಮುಂಚಿತವಾಗಿ ಆಡಲು ಬಯಸುತ್ತಾರೆ. ಆದರೂ ಇತರ ಆಟಗಾರರನ್ನು ಬೆಂಬಲಿಸುವಲ್ಲಿ ಅವರು ಒಂದು ಹೆಜ್ಜೆ ಮುಂದಿರುತ್ತಾರೆ. ಧೋನಿ ಅವರು ನಾಯಕತ್ವ ಮತ್ತು ವಿಕೆಟ್ ಕೀಪಿಂಗ್ ಮೂಲಕ ತಂಡದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ ಎಂದು ನಾನು ಕಳೆದ ವರ್ಷವೇ ಹೇಳಿದ್ದೆ’ ಎಂದು ಫ್ಲೆಮಿಂಗ್ ಸ್ಮರಿಸಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡವು ಪವರ್‌ಪ್ಲೇನಲ್ಲಿ 1 ವಿಕೆಟ್ ನಷ್ಟಕ್ಕೆ 79 ರನ್ ಗಳಿಸಿತ್ತು. ನಿತೀಶ್ ರಾಣಾ ನಿಜವಾಗಿಯೂ ಚೆನ್ನಾಗಿ ಆಟವಾಡಿದ್ದಾರೆ. ಆದರೆ, ನಮ್ಮ ತಂಡ ಈ ಹಂತದಲ್ಲಿ 1 ವಿಕೆಟ್ ನಷ್ಟಕ್ಕೆ 42 ರನ್ ಗಳಿಸಿತ್ತು. ರಿಯಾನ್ ಪರಾಗ್ ಅವರು ಶಿವಂ ದುಬೆ ಕ್ಯಾಚ್ ಪಡೆದಿದ್ದು, ಪಂದ್ಯಕ್ಕೆ ತಿರುವು ನೀಡಿತು ಎಂದು ನಾನು ಭಾವಿಸುತ್ತೇನೆ. ಜತೆಗೆ, ಪ್ರಮುಖ 4 ವಿಕೆಟ್‌ಗಳನ್ನು ಪಡೆಯುವ ಮೂಲಕ ವನಿಂದು ಹಸರಂಗ ಮೋಡಿ ಮಾಡಿದರು ಎಂದು ಫ್ಲೆಮಿಂಗ್ ಹೇಳಿದ್ದಾರೆ.
ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಸಿಎಸ್‌ಕೆ 3 ಪಂದ್ಯಗಳಲ್ಲಿ ಒಂದರಲ್ಲಿ ಗೆಲುವು ಎರಡರಲ್ಲಿ ಸೋಲು ಕಂಡಿದೆ. ಏ.5ರಂದು ಡೆಲ್ಲಿ ಕ್ಯಾಪಿಟಲ್ಸ್ ಎದುರು 4ನೇ ಪಂದ್ಯ ಆಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.