ಶ್ರೇಯಸ್ ಅಯ್ಯರ್, ಪ್ರೀತಿ ಜಿಂಟಾ
ಬೆಂಗಳೂರು: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಟ್ರೋಫಿ ಕನಸು ಸ್ವಲ್ಪದರಲ್ಲೇ ಕಮರಿತ್ತು.
ಜೂನ್ 3ರಂದು ನಡೆದ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸೋಲು ಕಂಡಿದ್ದ ಶ್ರೇಯಸ್ ಅಯ್ಯರ್ ಸಾರಥ್ಯದ ಪಂಜಾಬ್ ಕಿಂಗ್ಸ್ ರನ್ನರ್-ಅಪ್ ಆಗಿತ್ತು.
ಈಗ ಪಂಜಾಬ್ ಕಿಂಗ್ಸ್ ತಂಡದ ಸಹ ಮಾಲಕಿ ಪ್ರೀತಿ ಜಿಂಟಾ, ಆಟಗಾರರಿಗೆ ವಿಶೇಷ ಸಂದೇಶ ರವಾನಿಸಿದ್ದು, ಮುಂದಿನ ವರ್ಷ ಮತ್ತಷ್ಟು ಬಲಿಷ್ಠರಾಗಿ ಬರುವ ಭರವಸೆ ನೀಡಿದ್ದಾರೆ.
'ಈ ಅಭಿಯಾನವು ನಾವು ಬಯಸಿದ ರೀತಿಯಲ್ಲಿ ಕೊನೆಗೊಂಡಿಲ್ಲ. ಆದರೂ ಪಯಣ ಅದ್ಭುತವಾಗಿತ್ತು. ಉತ್ಸಾಹ, ಮನರಂಜನೆ ಹಾಗೂ ಸ್ಫೂರ್ತಿಯಿಂದ ಕೂಡಿತ್ತು. ಟೂರ್ನಿಯುದ್ಧಕ್ಕೂ ನಮ್ಮ ತಂಡದ ಹೋರಾಟ ಮನೋಭಾವದ ಕುರಿತು ನನಗೆ ಹೆಮ್ಮೆಯಿದೆ. ನಮ್ಮ ನಾಯಕ ಮುಂದೆ ನಿಂತು ತಂಡವನ್ನು ಮುನ್ನಡೆಸಿದರು. ಅನ್‌ಕ್ಯಾಪ್ಡ್ ಆಟಗಾರರು ಪ್ರಾಬಲ್ಯವನ್ನು ಮೆರೆದರು' ಎಂದು ಅವರು ತಿಳಿಸಿದ್ದಾರೆ.
'ಈ ವರ್ಷ ನಮ್ಮ ಪಾಲಿಗೆ ವಿಶಿಷ್ಟವೆನಿಸಿತ್ತು. ಗಾಯ, ರಾಷ್ಟ್ರೀಯ ಕರ್ತವ್ಯದಿಂದಾಗಿ ಪ್ರಮುಖ ಆಟಗಾರರ ಅಲಭ್ಯತೆ ಕಾಡಿದರೂ, ಟೂರ್ನಿಯ ಮಧ್ಯೆ ವಿರಾಮ ಬಿದ್ದರೂ, ತವರಿನ ಪಂದ್ಯಗಳು ವರ್ಗಾವಣೆಗೊಂಡರೂ, ಪಂದ್ಯ ಮಧ್ಯೆ ಸ್ಟೇಡಿಯಂ ತೆರವುಗೊಳಿಸಿದ ಘಟನೆ ನಡೆದರೂ ನಮ್ಮ ತಂಡವು ಅನೇಕ ದಾಖಲೆಗಳನ್ನು ಬರೆದಿವೆ. ಒಂದು ದಶಕದ ಬಳಿಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದೇವೆ. ಫೈನಲ್‌ನಲ್ಲಿ ಕೊನೆಯವರೆಗೂ ಹೋರಾಡಿದ್ದೇವೆ' ಎಂದು ಉಲ್ಲೇಖಿಸಿದ್ದಾರೆ.
'ಪಂಜಾಬ್ ತಂಡದ ಪ್ರತಿಯೊಬ್ಬ ಆಟಗಾರನ ಬಗ್ಗೆಯೂ ನನಗೆ ಹೆಮ್ಮೆಯಿದೆ. ಸಹಾಯಕ ಸಿಬ್ಬಂದಿ ಸೇರಿದಂತೆ ತಂಡದೆಲ್ಲರಿಗೂ ನನ್ನ ಧನ್ಯವಾದಗಳು. ಎಲ್ಲಕ್ಕಿಂತ ಹೆಚ್ಚಾಗಿ ಕಷ್ಟದ ಸಮಯದಲ್ಲಿ ನಮ್ಮ ಬೆನ್ನಿಗೆ ನಿಂತ ಅಭಿಮಾನಿಗಳಿಗೆ ಧನ್ಯವಾದಗಳು. ನಿಮ್ಮಿಂದಾಗಿಯೇ ನಾವು ಈ ಹಂತಕ್ಕೆ ತಲುಪಿದ್ದೇವೆ. ಕೆಲಸ ಅರ್ಧ ಮುಗಿದಿದೆ. ಮುಂದಿನ ವರ್ಷ ಅದನ್ನು ಪೂರ್ಣಗೊಳಿಸುತ್ತೇವೆ ಎಂಬ ನಂಬಿಕೆಯಿದೆ. ಮುಂದಿನ ವರ್ಷ ಭೇಟಿಯಾಗೋಣ. ಅಲ್ಲಿಯವರೆಗೆ ಸುರಕ್ಷಿತರಾಗಿರಿ. 'ಲವ್ ಯೂ ಆಲ್' ಎಂದು ಸಂದೇಶ ರವಾನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.