ADVERTISEMENT

RR vs LSG Highlights: ಮಿಂಚಿದ 14ರ ಪೋರ, ಕೊನೇ ಓವರ್‌ನಲ್ಲಿ ಗೆದ್ದ ಜೈಂಟ್ಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಏಪ್ರಿಲ್ 2025, 2:56 IST
Last Updated 20 ಏಪ್ರಿಲ್ 2025, 2:56 IST
<div class="paragraphs"><p>ರಾಜಸ್ಥಾನ ರಾಯಲ್ಸ್‌ ತಂಡದ 14 ವರ್ಷದ ಆಟಗಾರ ವೈಭವ್‌ ಸೂರ್ಯವಂಶಿ ಹಾಗೂ&nbsp;ಲಖನೌ ಸೂಪರ್‌ ಜೈಂಟ್ಸ್‌ ತಂಡ</p></div>

ರಾಜಸ್ಥಾನ ರಾಯಲ್ಸ್‌ ತಂಡದ 14 ವರ್ಷದ ಆಟಗಾರ ವೈಭವ್‌ ಸೂರ್ಯವಂಶಿ ಹಾಗೂ ಲಖನೌ ಸೂಪರ್‌ ಜೈಂಟ್ಸ್‌ ತಂಡ

   

ಪಿಟಿಐ ಚಿತ್ರ

ಜೈಪುರ: ಇಲ್ಲಿನ ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಐಪಿಎಲ್‌ ಪಂದ್ಯದಲ್ಲಿ ಲಖನೌ ಸೂಪರ್‌ ಜೈಂಟ್ಸ್‌ (ಎಲ್‌ಎಸ್‌ಜಿ) ತಂಡವು ಆತಿಥೇಯ ರಾಜಸ್ಥಾನ ರಾಯಲ್ಸ್‌ (ಆರ್‌ಆರ್‌) ವಿರುದ್ಧ ಕೇವಲ ಎರಡು ರನ್‌ ಅಂತರದ ರೋಚಕ ಜಯ ಸಾಧಿಸಿತು.

ADVERTISEMENT

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜೈಂಟ್ಸ್‌ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 180 ರನ್‌ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ರಾಯಲ್ಸ್‌ ಕೂಡ ಇಷ್ಟೇ ವಿಕೆಟ್‌ಗಳನ್ನು ಕಳೆದುಕೊಂಡು 178 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಈ ಪಂದ್ಯದ ಪ್ರಮುಖಾಂಶಗಳು ಇಲ್ಲಿವೆ..

ಟಾಸ್ ವೇಳೆ ಪಂತ್ ಎಡವಟ್ಟು
ಕಳೆದ ಪಂದ್ಯದ ವೇಳೆ ಗಾಯಗೊಂಡಿದ್ದ ನಾಯಕ ಸಂಜು ಸ್ಯಾಮ್ಸನ್‌ ಬದಲು ಈ ಪಂದ್ಯದಲ್ಲಿ ರಿಯಾನ್‌ ಪರಾಗ್‌ ರಾಜಸ್ಥಾನ ತಂಡವನ್ನು ಮುನ್ನಡೆಸಿದರು. ಅವರು ಹಾಗೂ ಲಖನೌ ನಾಯಕ ರಿಷಭ್‌ ಪಂತ್‌ ಟಾಸ್‌ಗೆ ಬಂದಾಗ ಹಾಸ್ಯಮಯ ಪ್ರಸಂಗ ನಡೆಯಿತು.

ಟಾಸ್‌ ರೆಫ್ರಿ ಸಮ್ಮುಖದಲ್ಲಿ ಪರಾಗ್‌ ನಾಣ್ಯ ಚಿಮ್ಮಿಸಿದರು. ಆದರೆ, ಪಂತ್‌ ತಮ್ಮ ಆಯ್ಕೆ ಏನೆಂದು ಘೋಷಿಸಲಿಲ್ಲ. ತಮ್ಮ ಆಯ್ಕೆ ಏನೆಂಬುದನ್ನು ಮರೆತರೋ ಅಥವಾ ಗೊಂದಲಕ್ಕೀಡಾದರೋ ಗೊತ್ತಾಗಲಿಲ್ಲ. ಆದರೆ, ಟಾಸ್‌ ರೆಫ್ರಿ ಮತ್ತೊಮ್ಮೆ ನಾಣ್ಯ ಚಿಮ್ಮಿಸುವಂತೆ ಪರಾಗ್‌ಗೆ ಹೇಳಿದರು. ಆಗ, ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರು ಪಂತ್‌.

ಜೈಂಟ್ಸ್‌ಗೆ ಸಮದ್ ಬಲ
ಮೊದಲು ಬ್ಯಾಟಿಂಗ್‌ ಮಾಡಿದ ಜೈಂಟ್ಸ್‌ 19 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್‌ ಕಳೆದುಕೊಂಡು 163 ರನ್‌ ಗಳಿಸಿತ್ತು. ಹೀಗಾಗಿ, ಆತಿಥೇಯ ತಂಡ ಸಾಧಾರಣ ಗುರಿಯ ನಿರೀಕ್ಷೆಯಲ್ಲಿತ್ತು. ಆದರೆ, ಆ ಲೆಕ್ಕಾಚಾರವನ್ನು ಅಬ್ದುಲ್‌ ಸಮದ್‌ ತಲೆಕೆಳಗಾಗಿಸಿದರು.

ಸಂದೀಪ್‌ ಶರ್ಮಾ ಎಸೆದ ಕೊನೇ ಓವರ್‌ನ ಅಂತಿಮ 5 ಎಸೆತಗಳನ್ನು ಎದುರಿಸಿದ ಅವರು ನಾಲ್ಕು ಸಿಕ್ಸರ್‌ ಸಹಿತ 26 ರನ್‌ ಚಚ್ಚಿದರು. ಈ ಓವರ್‌ನಲ್ಲಿ ಒಟ್ಟು 27 ರನ್‌ ಬಂದವು. ಹೀಗಾಗಿ, ಜೈಂಟ್ಸ್‌ ಮೊತ್ತ 180ಕ್ಕೇರಿತು.

14ರ ಬಾಲಕ ಕಣಕ್ಕೆ
ರಾಯಲ್ಸ್‌ ತಂಡದ 14 ವರ್ಷದ ಆಟಗಾರ ವೈಭವ್‌ ಸೂರ್ಯವಂಶಿ ಈ ಪಂದ್ಯದ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದರು.  ಇದರೊಂದಿಗೆ ಅವರು, ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಆಡಿದ ಅತಿ ಕಿರಿಯ ಆಟಗಾರ ಎನಿಸಿಕೊಂಡರು. ಸೂರ್ಯವಂಶಿ ವಯಸ್ಸು ಶನಿವಾರಕ್ಕೆ 14 ವರ್ಷ 23 ದಿನಗಳು.

ಐಪಿಎಲ್‌ಗೆ ಪದಾರ್ಪಣೆ ಮಾಡಿದ ಅತಿ ಕಿರಿಯ ಎಂಬ ದಾಖಲೆ ಈವರೆಗೆ ಪ್ರಯಾಸ್‌ ರಾಯ್‌ ಬರ್ಮನ್‌ ಹೆಸರಲ್ಲಿತ್ತು. ಅವರು 16 ವರ್ಷ 157 ದಿನದವರಾಗಿದ್ದಾಗ ಆರ್‌ಸಿಬಿ ಪರ 2019ರಲ್ಲಿ ಪದಾರ್ಪಣೆ ಮಾಡಿದ್ದರು.

ಮೊದಲ ಎಸೆತದಲ್ಲೇ ಸಿಕ್ಸರ್‌
ಐಪಿಎಲ್‌ನ ಅತ್ಯಂತ ಕಿರಿಯ ಆಟಗಾರ ಎಂಬ ಖ್ಯಾತಿಯೊಂದಿಗೆ ಮೈದಾನಕ್ಕಿಳಿದ ವೈಭವ್‌, ತಾವೆದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟಿದರು. ಆ ಮೂಲಕ ದಿಗ್ಗಜರ ಸಾಲಿಗೆ ಸೇರಿಕೊಂಡರು.

ಒಟ್ಟು 20 ಎಸೆತಗಳನ್ನು ಎದುರಿಸಿದ ಅವರು 2 ಬೌಂಡರಿ ಹಾಗೂ 3 ಸಿಕ್ಸರ್‌ ಸಹಿತ 34 ರನ್‌ ಕಲೆಹಾಕಿದರು.

ಐಪಿಎಲ್‌ನಲ್ಲಿ ತಾವೆದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ಗಟ್ಟಿದವರು

  1. ರಾಕ್‌ ಕ್ವೀನೇ – ರಾಜಸ್ಥಾನ ರಾಯಲ್ಸ್‌

  2. ಕೆವೊನ್‌ ಕೂಪರ್‌ – ರಾಜಸ್ಥಾನ ರಾಯಲ್ಸ್‌

  3. ಆ್ಯಂಡ್ರೆ ರಸೆಲ್‌ – ಕೋಲ್ಕತ್ತ ನೈಟ್‌ರೈಡರ್ಸ್‌

  4. ಕಾರ್ಲೋಸ್‌ ಬ್ರಾಥ್‌ವೈಟ್‌ – ಡೆಲ್ಲಿ ಡೇರ್‌ಡೆವಿಲ್ಸ್‌

  5. ಅಂಕಿತ್‌ ಚೌಧರಿ – ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

  6. ಜವೊನ್‌ ಸೀರ್ಲೆಸ್‌ – ಕೋಲ್ಕತ್ತ ನೈಟ್‌ರೈಡರ್ಸ್‌

  7. ಸಿದ್ದೇಶ್‌ ಲಾಡ್‌ – ಮುಂಬೈ ಇಂಡಿಯನ್ಸ್‌

  8. ಮಹೇಶ್‌ ತೀಕ್ಷಣ – ಚೆನ್ನೈ ಸೂಪರ್‌ ಕಿಂಗ್ಸ್‌

  9. ಸಮೀರ್‌ ರಿಜ್ವಿ – ಚೆನ್ನೈ ಸೂಪರ್‌ ಕಿಂಗ್ಸ್‌

  10. ವೈಭವ್‌ ಸೂರ್ಯವಂಶಿ – ರಾಜಸ್ಥಾನ ರಾಯಲ್ಸ್‌

ಜೈಸ್ವಾಲ್‌ಗೆ ನಾಲ್ಕನೇ ಅರ್ಧಶತಕ
ಅಮೋಘ ಬ್ಯಾಟಿಂಗ್ ಮುಂದುವರಿಸಿರುವ ಯಶಸ್ವಿ ಜೈಸ್ವಾಲ್‌, ಟೂರ್ನಿಯಲ್ಲಿ ಆಡಿದ ಕಳೆದ ಐದು ಪಂದ್ಯಗಳಲ್ಲಿ ನಾಲ್ಕನೇ ಅರ್ಧಶತಕ ಬಾರಿಸಿದರು. ಒಟ್ಟು 8 ಪಂದ್ಯ ಆಡಿರುವ ಅವರು, 139 ಸ್ಟ್ರೈಕ್‌ರೇಟ್‌ನಲ್ಲಿ 307 ರನ್‌ ಕಲೆಹಾಕಿದ್ದಾರೆ.

ಈ ಫಂದ್ಯದಲ್ಲಿ 52 ಎಸೆತಗಳನ್ನು ಎದುರಿಸಿದ ಅವರು, 4 ಸಿಕ್ಸ್‌ ಹಾಗೂ 5 ಬೌಂಡರಿ ಸಹಿತ 74 ರನ್‌ ಗಳಿಸಿದರು.

ಜಯ ಕಸಿದುಕೊಂಡ ಆವೇಶ್‌
181 ರನ್‌ಗಳ ಗುರಿ ಬೆನ್ನತ್ತಿದ ರಾಯಲ್ಸ್‌ 17 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್‌ ಕಳೆದುಕೊಂಡು 166 ರನ್‌ ಗಳಿಸಿ, ಸುಸ್ಥಿತಿಯಲ್ಲಿತ್ತು. ಗೆಲ್ಲಲು 18 ಎಸೆತಗಳಲ್ಲಿ 25 ರನ್‌ ಬೇಕಿತ್ತು. 8 ವಿಕೆಟ್‌ಗಳು ಕೈಯಲ್ಲಿದ್ದವು. ಆದರೆ, ಈ ಹಂತದಲ್ಲಿ ಪರಿಣಾಮಕಾರಿ ದಾಳಿ ಮಾಡಿದ ಆವೇಶ್‌ ಖಾನ್‌, ಜಯವನ್ನು ಕಸಿದುಕೊಂಡರು.

ತಮ್ಮ ನಾಲ್ಕು ಓವರ್‌ಗಳ ಕೋಟಾದ ಮೊದಲ ಎರಡು ಓವರ್‌ಗಳಲ್ಲಿ ವಿಕೆಟ್‌ ಇಲ್ಲದೆ 26 ರನ್‌ ಚಚ್ಚಿಸಿಕೊಂಡಿದ್ದ ಅವರು, ನಂತರದ ಎರಡು ಓವರ್‌ಗಳಲ್ಲಿ 3 ವಿಕೆಟ್‌ ಸಹಿತ ಕೇವಲ 11 ರನ್‌ ಬಿಟ್ಟುಕೊಟ್ಟರು.

18ನೇ ಓವರ್‌ನ ಮೊದಲ ಎಸೆತದಲ್ಲೇ ಜೈಸ್ವಾಲ್‌ ಅವರನ್ನು ಪೆವಿಲಿಯನ್‌ಗೆ ಅಟ್ಟಿದ ಆವೇಶ್‌, ನಂತರದ ನಾಲ್ಕು ಎಸೆತಗಳಲ್ಲಿ ಬಿಟ್ಟುಕೊಟ್ಟದ್ದು 5 ರನ್‌ (1, 1, 2, 1) ಮಾತ್ರ. ಕೊನೇ ಎಸೆತದಲ್ಲಿ ರಿಯಾನ್‌ ಪರಾಗ್‌ (39 ರನ್‌) ಅವರನ್ನೂ ಔಟ್‌ ಮಾಡಿದರು.

ಈ ಓವರ್‌ ಪಂದ್ಯಕ್ಕೆ ತಿರುವು ನೀಡಿತು.

19ನೇ ಓವರ್‌ ಎಸೆದ ಪ್ರಿನ್ಸ್‌ ಯಾದವ್‌ 11 ರನ್‌ ಕೊಟ್ಟರು. ಹೀಗಾಗಿ, ಆವೇಶ್‌ ಎಸೆದ ಕೊನೇ ಓವರ್‌ನಲ್ಲಿ ಗೆಲ್ಲಲು 9 ರನ್‌ ಬೇಕಿತ್ತು. ಬೀಸಾಟಕ್ಕೆ ಹೆಸರಾದ್ ಶಿಮ್ರೋನ್‌ ಹೆಟ್ಮೆಯರ್‌ ಮತ್ತು ಧ್ರುವ್‌ ಜುರೇಲ್‌ ಕ್ರೀಸ್‌ನಲ್ಲಿದ್ದರು.

ಮೊದಲ ಎಸೆತದಲ್ಲಿ ಧ್ರುವ್‌ 1 ರನ್‌ ಗಳಿಸಿದರು. ನಂತರದ ಎಸೆತದಲ್ಲಿ ಎರಡು ರನ್‌ ಓಡಿದ ಹೆಟ್ಮೆಯರ್‌ (12 ರನ್‌), ಮೂರನೇ ಎಸೆತದಲ್ಲಿ ಔಟಾದರು. ಯಾರ್ಕರ್‌ ಅನ್ನು ಫ್ಲಿಕ್‌ ಮಾಡಿದ ಹೆಟ್ಮೆಯರ್‌, ಬ್ಯಾಕ್‌ವರ್ಡ್‌ ಪಾಯಿಂಟ್‌ನಲ್ಲಿದ್ದ ಶಾರ್ದೂಲ್‌ ಠಾಕೂರ್‌ಗೆ ಕ್ಯಾಚ್‌ ಆದರು. ಕೊನೇ ಮೂರು ಎಸೆತದಲ್ಲಿ ಕೇವಲ 3 (0, 2, 1) ರನ್‌ ಬಿಟ್ಟುಕೊಟ್ಟ ಆವೇಶ್‌, ರಾಯಲ್ಸ್‌ ಅವನ್ನು 178ಕ್ಕೆ ನಿಯಂತ್ರಿಸಿದರು.

ಅಲ್ಪ ಅಂತರದ ಸೋಲು
ಇದು ಐಪಿಎಲ್‌ನಲ್ಲಿ ರಾಯಲ್ಸ್‌ಗೆ ಎದುರಾದ ಮೂರನೇ ಅತ್ಯಲ್ಪ ಅಂತರದ ಸೋಲಾಯಿತು. 2012ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ ಹಾಗೂ 2024ರಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಎದುರು ಕೇವಲ 1 ರನ್‌ ಅಂತರದಲ್ಲಿ ಸೋಲು ಕಂಡಿತ್ತು.

ಕಡಿಮೆ ಅಂತರದ ಜಯ
ಜೈಂಟ್ಸ್‌ ತಂಡ ಕೇವಲ ಎರಡು ರನ್‌ ಅಂತರದಲ್ಲಿ ಗೆದ್ದ ಎರಡನೇ ಪಂದ್ಯವಿದು. 2022ರಲ್ಲಿ ಕೋಲ್ಕತ್ತ ನೈಟ್‌ರೈಡರ್ಸ್‌ (ಕೆಕೆಆರ್‌) ವಿರುದ್ಧವೂ ಇಷ್ಟೇ ಅಂತರದಿಂದ ಗೆದ್ದಿತ್ತು.

ಕೆಕೆಆರ್‌ ವಿರುದ್ಧವೇ 2023ರಲ್ಲಿ ಕೇವಲ 1 ರನ್‌ ಅಂತರದಿಂದ ಗೆಲುವು ಕಂಡಿದ್ದು, ಜೈಂಟ್ಸ್‌ ಪರ ದಾಖಲೆಯಾಗಿದೆ.

ಇದೇ ವರ್ಷ ಕೆಕೆಆರ್‌ ವಿರುದ್ಧ 4 ರನ್‌ ಹಾಗೂ 2023ರಲ್ಲಿ ಮುಂಬೈ ವಿರುದ್ಧ 5 ರನ್‌ ಅಂತರದಿಂದ ಜಯ ಸಾಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.