ಚೆನ್ನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆಪಾಕ್ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ 17 ವರ್ಷಗಳು ಕಳೆದುಹೋಗಿವೆ. ಈ ದೀರ್ಘ ಅವಧಿಯಲ್ಲಿ ಚೆನ್ನೈ ತಂಡವನ್ನು ಅದರ ತವರಿನಲ್ಲಿಯೇ ಸೋಲಿಸಲು ಆರ್‌ಸಿಬಿಗೆ ಸಾಧ್ಯವಾಗಿಲ್ಲ.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿಯೂ ಆಗದ ಈ ಸಾಧನೆಯನ್ನು ಸಾಕಾರ ಮಾಡುವ ಛಲದಲ್ಲಿ ನವನಾಯಕ ರಜತ್ ಪಾಟೀದಾರ್ ಅವರಿದ್ದಾರೆ. ಮಹೇಂದ್ರಸಿಂಗ್ ಧೋನಿಯ ನಂತರ ತಂಡವನ್ನು ಮುನ್ನಡೆಸುತ್ತಿರುವ ಋತುರಾಜ್ ಗಾಯಕವಾಡ ಅವರು ಕೂಡ ಆರ್‌ಸಿಬಿ ಎದುರಿನ ‘ಅಜೇಯ’ ಇತಿಹಾಸವನ್ನು ಮುಂದುವರಿಸುವತ್ತ ಚಿತ್ತ ನೆಟ್ಟಿದ್ದಾರೆ. ಹೀಗಾಗಿ ಉಭಯ ತಂಡಗಳೂ ಶುಕ್ರವಾರ ಮುಖಾಮುಖಿಯಾಗಲಿರುವ ಪಂದ್ಯವು ಕುತೂಹಲ ಕೆರಳಿಸಿದೆ. 2008ರಲ್ಲಿ ಚೆನ್ನೈ ಎದುರು ಇಲ್ಲಿ ಗೆದ್ದಾಗ ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ಅವರಿದ್ದರು. ಈಗಲೂ ತಂಡದಲ್ಲಿದ್ದಾರೆ.
ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಈಚೆಗಷ್ಟೇ ತನ್ನ ಮೊದಲ ಪಂದ್ಯವಾಡಿದ್ದ ಚೆನ್ನೈ ಬಳಗವು ಮುಂಬೈ ಇಂಡಿಯನ್ಸ್ ಎದುರು ಭರ್ಜರಿ ಜಯ ಸಾಧಿಸಿತ್ತು. ಅದರಿಂದಾಗಿ ಅಪಾರ ಆತ್ಮವಿಶ್ವಾಸದಲ್ಲಿದೆ. ಇನ್ನೊಂದೆಡೆ ಬೆಂಗಳೂರು ತಂಡವು ‘ಹಾಲಿ ಚಾಂಪಿಯನ್’ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಅವರ ತವರು ಈಡನ್‌ಗಾರ್ಡನ್‌ನಲ್ಲಿ ಸೋಲಿಸಿ, ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು.
ಕೋಲ್ಕತ್ತ ಎದುರಿನ ಪಂದ್ಯದಲ್ಲಿ ಆರ್‌ಸಿಬಿಯು ಎಲ್ಲ ವಿಭಾಗಗಳಲ್ಲಿಯೂ ಉತ್ತಮ ಸಾಮರ್ಥ್ಯ ಮೆರೆದಿತ್ತು. ಇದೇ ಮೊದಲ ಬಾರಿ ತಂಡಕ್ಕೆ ಸೇರ್ಪಡೆಯಾಗಿರುವ ಎಡಗೈ ಸ್ಪಿನ್ನರ್ ಕೃಣಾಲ್ ಪಾಂಡ್ಯ ಆ ಪಂದ್ಯದಲ್ಲಿ ಮಿಂಚಿದ್ದರು. ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾಗುವ ಚೆಪಾಕ್ ಮೈದಾನದ ಪಿಚ್‌ನಲ್ಲಿಯೂ ಅವರು ತಮ್ಮ ಕೈಚಳಕ ಮೆರೆಯಲು ಸಿದ್ಧರಾಗಿದ್ದಾರೆ.
ಆದರೆ ಆತಿಥೇಯ ತಂಡದ ಸ್ಪಿನ್ ವಿಭಾಗವು ಆರ್‌ಸಿಬಿಗಿಂತಲೂ ಉತ್ತಮವಾಗಿದೆ. ಆಫ್‌ಸ್ಪಿನ್ನರ್ ಆರ್. ಅಶ್ವಿನ್, ಎಡಗೈ ಸ್ಪಿನ್–ಆಲ್‌ರೌಂಡರ್ ರವೀಂದ್ರ ಜಡೇಜ ಹಾಗೂ ಅಫ್ಗನ್ ಎಡಗೈ ಸ್ಪಿನ್ನರ್ ನೂರ್ ಅಹಮದ್ ಅವರು ಈಚೆಗೆ ಮುಂಬೈ ತಂಡಕ್ಕೆ ಸೋಲುಣಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆರ್‌ಸಿಬಿ ತಂಡದಲ್ಲಿ ಕೃಣಾಲ್ ಅವರೊಂದಿಗೆ ಸುಯಶ್ ಶರ್ಮಾ ಭರವಸೆಯ ಸ್ಪಿನ್ನರ್ ಆಗಿದ್ದಾರೆ. ವೇಗದ ವಿಭಾಗದಲ್ಲಿ ಜೋಶ್ ಹ್ಯಾಜಲ್‌ವುಡ್, ರಸಿಕ್ ಸಲಾಂ ಹಾಗೂ ಯಶ್ ದಯಾಳ್ ಅವರ ಮೇಲೆ ಹೆಚ್ಚು ನಿರೀಕ್ಷೆ ಇಡಬೇಕಿದೆ. ಭುವನೇಶ್ವರ್ ಕುಮಾರ್ ಅವರು ಫಿಟ್‌ನೆಸ್ ಇನ್ನೂ ಖಚಿತವಾಗಿಲ್ಲ. ಆದ್ದರಿಂದ ಉಳಿದ ಬೌಲರ್‌ಗಳ ಮೇಲೆ ಒತ್ತಡ ಹೆಚ್ಚಿದೆ.
ಚೆನ್ನೈ ಬ್ಯಾಟರ್‌ಗಳಾದ ಋತುರಾಜ್, ರಚಿನ್ ರವೀಂದ್ರ, ರಾಹುಲ್ ತ್ರಿಪಾಠಿ, ಶಿವಂ ದುಬೆ ಅವರನ್ನು ಕಟ್ಟಿಹಾಕುವ ಸವಾಲು ಆರ್‌ಸಿಬಿ ಬೌಲರ್‌ಗಳಿಗೆ ಇದೆ.
ಬೆಂಗಳೂರು ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಅವರು ಉತ್ತಮ ಲಯದಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ರಜತ್ ಕೂಡ ಬ್ಯಾಟ್ ಬೀಸಿದ್ದರು. ದೇವದತ್ತ ಪಡಿಕ್ಕಲ್ ಮತ್ತು ಲಿಯಾಮ್ ಲಿವಿಂಗ್ ಸ್ಟೋನ್ ಅವರು ಮಧ್ಯಮ ಕ್ರಮಾಂಕದಲ್ಲಿ ಬಲ ತುಂಬಿದರೆ ಚೆನ್ನೈ ತಂಡಕ್ಕೆ ಸವಾಲೊಡ್ಡಬಹುದು.
ಹೋದ ವರ್ಷದ ಟೂರ್ನಿಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಆರ್‌ಸಿಬಿಯು ಚೆನ್ನೈ ಎದುರು ಗೆದ್ದು ನಾಕೌಟ್ ಪ್ರವೇಶಿಸಿತ್ತು. ಆ ಸೋಲಿನ ಮುಯ್ಯಿ ತೀರಿಸಿಕೊಳ್ಳಲು ಋತುರಾಜ್ ಬಳಗ ಸಿದ್ಧವಾಗಿದೆ.
ರಜತ್ ಪಾಟೀದಾರ್ (ನಾಯಕ) ವಿರಾಟ್ ಕೊಹ್ಲಿ ದೇವದತ್ತ ಪಡಿಕ್ಕಲ್ ಫಿಲಿಪ್ ಸಾಲ್ಟ್ ಲಿಯಾಮ್ ಲಿವಿಂಗ್‌ಸ್ಟೋನ್ ಜಿತೇಶ್ ಶರ್ಮಾ ಟಿಮ್ ಡೇವಿಡ್ ಕೃಣಾಲ್ ಪಾಂಡ್ಯ ರಸಿಕ್ ದಾರ್ ಸಲಾಂ ಸುಯಶ್ ಶರ್ಮಾ ಜೋಶ್ ಹ್ಯಾಜಲ್‌ವುಡ್ ಯಶ್ ದಯಾಳ್ ಲುಂಗಿ ಗಿಡಿ ಸ್ವಪ್ನಿಲ್ ಸಿಂಗ್ ನುವಾನ ತುಷಾರ್ ಮೋಹಿತ್ ರಾಠಿ ಮನೋಜ್ ಭಾಂಡಗೆ.
ಋತುರಾಜ್ ಗಾಯಕವಾಡ್ (ನಾಯಕ) ರಚಿನ್ ರವೀಂದ್ರ ರಾಹುಲ್ ತ್ರಿಪಾಠಿ ಶಿವಂ ದುಬೆ ದೀಪಕ್ ಹೂಡಾ ಸ್ಯಾಮ್ ಕರನ್ ರವೀಂದ್ರ ಜಡೇಜ ಮಹೇಂದ್ರಸಿಂಗ್ ಧೋನಿ ಆರ್. ಅಶ್ವಿನ್ ನೂರ್ ಅಹಮದ್ ನೇಥನ್ ಎಲಿಸ್ ಖಲೀಲ್ ಅಹಮದ್ ಕಮಲೇಶ್ ನಾಗರಕೋಟಿ ವಿಜಯಶಂಕರ್ ಡೆವೊನ್ ಕಾನ್ವೆ ಮಥೀಷ್ ಪಥಿರಾಣ ಶ್ರೇಯಸ್ ಗೋಪಾಲ್ ಪಂದ್ಯ ಆರಂಭ: ರಾತ್ರಿ 7.30 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಜಿಯೊ ಹಾಟ್‌ಸ್ಟಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.