ADVERTISEMENT

IPL 2025 | ಬೆಂಗಳೂರಿಗೆ ಪ್ಲೇಆಫ್‌ ಹಾದಿ ಕಷ್ಟವಲ್ಲ!

ಕುತೂಹಲ ಕೆರಳಿಸಿದ ಪುನರಾರಂಭದ ಹಂತ; ಹಾಲಿ ಚಾಂಪಿಯನ್‌ ಕೋಲ್ಕತ್ತ ಮೇಲೆ ತೂಗುಗತ್ತಿ

​ಪ್ರಜಾವಾಣಿ ವಾರ್ತೆ
Published 16 ಮೇ 2025, 0:30 IST
Last Updated 16 ಮೇ 2025, 0:30 IST
<div class="paragraphs"><p>ರಜತ್ ಪಾಟೀದಾರ್</p></div>

ರಜತ್ ಪಾಟೀದಾರ್

   
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ ಬಹಳಷ್ಟು ಸಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇಆಫ್‌ ಹಂತವನ್ನು ಪ್ರವೇಶಿಸಲು ಪ್ರಯಾಸಪಟ್ಟಿದೆ. ಅಂಕ ಮತ್ತು ನೆಟ್‌ ರನ್‌ರೇಟ್‌ ಏರಿಳಿತಗಳ ಲೆಕ್ಕಾಚಾರದ ಮೇಲೆ ಅವಲಂಬಿತವಾಗಿದ್ದೇ ಹೆಚ್ಚು. ಆದರೆ ಈ ಬಾರಿ ಪರಿಸ್ಥಿತಿ ತದ್ವಿರುದ್ಧವಾಗಿದೆ. ಆರ್‌ಸಿಬಿ ತಂಡದ ಪ್ಲೇ ಆಫ್‌ ಹಾದಿ ಮೇಲ್ನೋಟಕ್ಕೆ ಸರಳವಾಗಿ ಕಾಣುತ್ತಿದೆ. ಅಲ್ಲದೇ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ‘ದುಬಾರಿ’ ಮೌಲ್ಯ ಪಡೆದ ರಿಷಭ್ ಪಂತ್ ನಾಯಕತ್ವದ ಲಖನೌ ಸೂಪರ್ ಜೈಂಟ್ಸ್‌ ತಂಡಗಳ ಹಣೆಬರಹ ನಿರ್ಧರಿಸುವ ಸ್ಥಾನದಲ್ಲಿ ಈಗ ಬೆಂಗಳೂರು ತಂಡವಿದೆ. ಭಾರತ ಮತ್ತು ಪಾಕಿಸ್ತಾನ ಸಂಘರ್ಷದ ಕಾರಣದಿಂದ ಒಂದು ವಾರ ಸ್ಥಗಿತಗೊಂಡಿದ್ದ ಟೂರ್ನಿ ಶನಿವಾರ ಪುನರಾರಂಭವಾಗಲಿದೆ. ಒಟ್ಟು 13 ಲೀಗ್ ಪಂದ್ಯಗಳು ಈ ಸುತ್ತಿನಲ್ಲಿ ನಡೆಯಲಿವೆ. ಈಗಾಗಲೇ ಸನ್‌ರೈಸರ್ಸ್ ಹೈದರಾಬಾದ್, ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪ್ಲೇ ಆಫ್‌ ಹಾದಿಯಿಂದ ಹೊರಬಿದ್ದಿವೆ. ಉಳಿದ ಏಳು ತಂಡಗಳಲ್ಲಿ ಗುಜರಾತ್ ಟೈಟನ್ಸ್ ಮತ್ತು ಆರ್‌ಸಿಬಿ ತಂಡಗಳು ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿವೆ. ಆದರೂ ಪ್ಲೇ ಆಫ್‌ ಖಚಿತವಾಗಿಲ್ಲ. ಅದರಿಂದಾಗಿಯೇ ಲೀಗ್‌ ಹಂತದ ಉಳಿದ ಪಂದ್ಯಗಳು ಕುತೂಹಲ ಕೆರಳಿಸಿವೆ.

1. ಗುಜರಾತ್ ಟೈಟನ್ಸ್

ಬಾಕಿ ಪಂದ್ಯಗಳು: ಡೆಲ್ಲಿ, ಲಖನೌ, ಚೆನ್ನೈ 

ADVERTISEMENT

ಶುಭಮನ್ ಗಿಲ್ ನಾಯಕತ್ವದ ಗುಜರಾತ್ ತಂಡವು ಈಗ ಪಾಯಿಂಟ್‌ಪಟ್ಟಿಯ ಅಗ್ರಸ್ಥಾನದಲ್ಲಿದೆ. ತನ್ನ 11ನೇ ಪಂದ್ಯದಲ್ಲಿ ಮುಂಬೈ ಎದುರು ರೋಚಕ ಜಯ ಸಾಧಿಸುವ ಮೂಲಕ ಮೊದಲ ಸ್ಥಾನಕ್ಕೇರಿತ್ತು. ಈಗ ತನ್ನ ಪಾಲಿನ 3 ಪಂದ್ಯಗಳಲ್ಲಿ ಒಂದರಲ್ಲಿ ಜಯಿಸಿದರೂ 18 ಅಂಕ ಮುಟ್ಟಲಿದೆ. ಆ ಮೂಲಕ ಅಗ್ರ 4ರಲ್ಲಿ ಸ್ಥಾನ ಖಚಿತಪಡಿಸಿಕೊಳ್ಳುವ ಅವಕಾಶ ಇದೆ. ಎಲ್ಲ ಪಂದ್ಯಗಳಲ್ಲಿ ಗೆದ್ದರಂತೂ ಅಗ್ರಸ್ಥಾನಕ್ಕೆ ಲಗ್ಗೆ ಇಡುವ ಸಾಧ್ಯತೆ ಇದೆ. ಆದರೆ ಈ ಹಂತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಲಖನೌ ತಂಡಗಳಿಗೂ ಪೈಪೋಟಿಯಲ್ಲಿ ಉಳಿಯಲು ಗುಜರಾತ್ ಎದುರು ಜಯಿಸಲೇಬೇಕು. ಚೆನ್ನೈ ತಂಡವು ಈಗಾಗಲೇ ಹೊರಬಿದ್ದಿದ್ದರೂ ಗಿಲ್ ಬಳಗದ ಓಟಕ್ಕೆ ಅಡ್ಡಿಪಡಿಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. 

ಶುಭಮನ್ ಗಿಲ್

2 ರಾಯಲ್ ಚಾಲೆಂಜರ್ಸ್ ಬೆಂಗಳೂರು

ಬಾಕಿ ಪಂದ್ಯ: ಲಖನೌ, ಹೈದರಾಬಾದ್, ಕೋಲ್ಕತ್ತ 

ಬಿಡುವಿಗೂ ಮುನ್ನ ಸತತ ನಾಲ್ಕು ಪಂದ್ಯಗಳಲ್ಲಿ ಆರ್‌ಸಿಬಿ ಜಯಿಸಿತ್ತು. ಅದರಿಂದಾಗಿ ಭರ್ತಿ
ಆತ್ಮವಿಶ್ವಾಸದಲ್ಲಿದೆ. ಇನ್ನೊಂದು ಪಂದ್ಯದಲ್ಲಿ ಗೆದ್ದರೆ 18 ಅಂಕ ಪೂರೈಸಿ ಪ್ಲೇ ಆಫ್‌ ಪ್ರವೇಶಿಸಬಹುದು. ಒಂದೊಮ್ಮೆ ತನ್ನ ಪಾಲಿನ ಎಲ್ಲ ಪಂದ್ಯಗಳನ್ನು ಸೋತರೆ ಸ್ಪರ್ಧೆಯಿಂದ ಹೊರಬೀಳುವ ಆತಂಕವೂ ಇದೆ. ಆರ್‌ಸಿಬಿಯು ಇನ್ನುಳಿದಿರುವ ಎರಡು ಪಂದ್ಯಗಳನ್ನು ತವರಿನಲ್ಲಿ ಆಡಲಿದೆ. ಮತ್ತೊಂದು ಲಖನೌನಲ್ಲಿ  ನಡೆಯಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದುವರೆಗೆ ಆಡಿರುವ ಐದು ಪಂದ್ಯಗಳ ಪೈಕಿ ಆರ್‌ಸಿಬಿಯು ಎರಡರಲ್ಲಿ ಜಯಿಸಿ, ಉಳಿದ ದ್ದರಲ್ಲಿ ಸೋತಿದೆ. ಆದರೆ ತವರಿನಾಚೆ ಅಜೇಯವಾಗಿದೆ. ಪುನರಾರಂಭದ ಮೊದಲ ಪಂದ್ಯವು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿಯು ಕೋಲ್ಕತ್ತ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಗೆದ್ದರೆ ಬೆಂಗಳೂರು ಹಾದಿ ಸುಗಮ. ಕೋಲ್ಕತ್ತ ಕತೆ ಮುಕ್ತಾಯ. 

3 ಪಂಜಾಬ್ ಕಿಂಗ್ಸ್‌ 

ಬಾಕಿ ಪಂದ್ಯಗಳು: ಡೆಲ್ಲಿ, ಮುಂಬೈ, ರಾಜಸ್ಥಾನ 

ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡಕ್ಕೆ ಪ್ಲೇ ಆಫ್ ಹಾದಿ ಕಷ್ಟವೇನಲ್ಲ. ಸದ್ಯ ಮೂರನೇ ಸ್ಥಾನದಲ್ಲಿರುವ ತಂಡವು ಇನ್ನೊಂದು ಪಂದ್ಯ ಗೆದ್ದರೂ 17 ಅಂಕ ಮುಟ್ಟಲಿದೆ. ಇದರಿಂದ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವುದು ನಿಚ್ಚಳವಾಗಲಿದೆ. ಪಂಜಾಬ್ ತಂಡವು ತನ್ನ ಮೂರು ಪಂದ್ಯಗಳನ್ನೂ ಜೈಪುರದಲ್ಲಿ ಆಡಲಿದೆ. ಪಂಜಾಬ್‌ ತನ್ನ ತವರಿನ ತಾಣಗಳಾಗಿರುವ ಚಂಡೀಗಡ ಮತ್ತು ಧರ್ಮಶಾಲಾದಲ್ಲಿ  ಪಂದ್ಯಗಳನ್ನು (ಭಾರತ–ಪಾಕ್ ಗಡಿ ಸಂಘರ್ಷದ ಕಾರಣ) ನಡೆಸುವಂತಿಲ್ಲ. ಆದ್ದರಿಂದ ಕಿಂಗ್ಸ್‌ ತಟಸ್ಥ ತಾಣದಲ್ಲಿ ಆಡಲಿದೆ. ಡೆಲ್ಲಿ ಮತ್ತು ಮುಂಬೈ ತಂಡಗಳು ಕಠಿಣ ಪೈಪೋಟಿಯನ್ನೂ ಒಡ್ಡುವ ನಿರೀಕ್ಷೆ ಇದೆ.  

ಶ್ರೇಯಸ್ ಅಯ್ಯರ್‌

4 ಮುಂಬೈ ಇಂಡಿಯನ್ಸ್

ಬಾಕಿ ಪಂದ್ಯ: ಪಂಜಾಬ್ ಮತ್ತು ಡೆಲ್ಲಿ 

ಟೂರ್ನಿಯ ಆರಂಭಿಕ ಹಂತದಲ್ಲಿ ನಾಲ್ಕು ಪಂದ್ಯ ಸೋತಿದ್ದ ಮುಂಬೈ ನಂತರದಲ್ಲಿ ಪುಟಿದೆದ್ದ ರೀತಿ ಅಮೋಘ. ಸತತ ಆರು ಪಂದ್ಯಗಳನ್ನು ಜಯಿಸಿದ್ದ ಹಾರ್ದಿಕ್ ಪಾಂಡ್ಯ ಬಳಗವು ಈಚೆಗೆ ಗುಜರಾತ್ ಟೈಟನ್ಸ್ ಎದುರು ಸೋತಿತ್ತು. ಆದರೆ ಇದರಿಂದ ಮುಂಬೈ ತಂಡದ ಪ್ಲೇಆಫ್‌ ಅವಕಾಶ ಕೈತಪ್ಪಿಲ್ಲ. ತಂಡಕ್ಕೆ ಇನ್ನುಳಿದಿರುವುದು ಎರಡು ಪಂದ್ಯಗಳು ಮಾತ್ರ. ಈ ಪಂದ್ಯಗಳಲ್ಲಿ ಜಯಿಸಿದರೆ ಒಟ್ಟು 18 ಅಂಕ ಗಳಿಸಬಹುದು. ಇದರಿಂದ ಅಗ್ರ 4ರಲ್ಲಿ ಸ್ಥಾನ ಖಚಿತವಾಗಬಹುದು. ಆದರೆ ಒಂದರಲ್ಲಿ ಗೆದ್ದು, ಇನ್ನೊಂದು ಸೋತರೆ ಉಳಿದ ತಂಡಗಳ ಪಾಯಿಂಟ್ ಲೆಕ್ಕಾಚಾರದ ಮೇಲೆ
ಅವಲಂಬಿತವಾಗಬಹುದು. ಆದರೆ ಎರಡೂ ಸೋತರೆ ಹೊರಬೀಳುವುದು ಖಚಿತ.

ಹಾರ್ದಿಕ್ ಪಾಂಡ್ಯ

5 ಡೆಲ್ಲಿ ಕ್ಯಾಪಿಟಲ್ಸ್‌

ಬಾಕಿ ಪಂದ್ಯಗಳು: ಗುಜರಾತ್, ಮುಂಬೈ, ಪಂಜಾಬ್‌

ಅಕ್ಷರ್ ಪಟೇಲ್ ನಾಯಕತ್ವದ ತಂಡವು ಟೂರ್ನಿಯ ಆರಂಭವನ್ನು ಚೆನ್ನಾಗಿಯೇ ಮಾಡಿತ್ತು. ಮಧ್ಯದ ಹಂತದಲ್ಲಿ ಕೆಲವು ಸೋಲು ಮತ್ತು ಮಳೆಯಿಂದಾಗಿ ಅಂಕಗಳನ್ನು ಕಳೆದುಕೊಂಡಿತು. ಸದ್ಯ ಐದನೇ ಸ್ಥಾನದಲ್ಲಿದೆ.  ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಬೇಕಾದರೆ ಇನ್ನುಳಿದಿರುವ ಮೂರು ಪಂದ್ಯಗಳನ್ನೂ ಜಯಿಸುವ ಒತ್ತಡದಲ್ಲಿದೆ. ಎರಡರಲ್ಲಿ ಜಯಿಸಿದರೆ, ಬೇರೆ ತಂಡಗಳ ಅಂಕಗಳ ಲೆಕ್ಕಾಚಾರವನ್ನು ಕಾಯಬೇಕಾಗುತ್ತದೆ. ಅದೃಷ್ಟದ ಮೊರೆ ಹೋಗಬೇಕು. ಎರಡರಲ್ಲಿ ಸೋತರೆ ನಾಕೌಟ್ ಬಾಗಿಲು ಮುಚ್ಚಲಿದೆ.  

ಅಕ್ಷರ್ ಪಟೇಲ್

6 ಕೋಲ್ಕತ್ತ ನೈಟ್ ರೈಡರ್ಸ್

ಬಾಕಿ ಪಂದ್ಯ: ಆರ್‌ಸಿಬಿ, ಸನ್‌ರೈಸರ್ಸ್

ಹಾಲಿ ಚಾಂಪಿಯನ್ ತಂಡಕ್ಕೆ ಈಗ ಉಳಿದಿರುವ ಎರಡೂ ಪಂದ್ಯಗಳಲ್ಲಿ ಜಯಿಸಿದರೂ ಪ್ಲೇಆಫ್‌ ಖಚಿತವಿಲ್ಲ.  ಏಕೆಂದರೆ 11 ಅಂಕ ಗಳಿಸಿರುವ ತಂಡವು ಇನ್ನೆರಡೂ ಪಂದ್ಯಗಳನ್ನು ಗೆದ್ದರೆ 15ಕ್ಕೆ ಮುಟ್ಟಬಹುದು. ಆದರೆ ಅಗ್ರ ನಾಲ್ಕು ತಂಡಗಳು ಈಗಾಗಲೇ 14 ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿದ್ದು ರನ್‌ರೇಟ್‌ನಲ್ಲಿಯೂ ಕೋಲ್ಕತ್ತಕ್ಕಿಂತ ಉತ್ತಮ ಸ್ಥಿತಿಯಲ್ಲಿವೆ. 

ಅಜಿಂಕ್ಯ ರಹಾನೆ

7 ಲಖನೌ ಸೂಪರ್‌ ಜೈಂಟ್ಸ್‌ 

ಬಾಕಿ: ಸನ್‌ರೈಸರ್ಸ್, ಗುಜರಾತ್, ಆರ್‌ಸಿಬಿ 

ರಿಷಭ್ ಪಂತ್ ನಾಯಕತ್ವದ ಲಖನೌ ತಂಡವು ತನ್ನ ಪಾಲಿನ ಎಲ್ಲ ಪಂದ್ಯಗಳನ್ನೂ ಗೆದ್ದುಬಿಟ್ಟರೆ ಒಟ್ಟು 16 ಅಂಕ ಗಳಿಸಬಹುದು.  ಆಗ ಒಂದೊಮ್ಮೆ ಪಂಜಾಬ್, ಮುಂಬೈ ಮತ್ತು ಡೆಲ್ಲಿ ತಂಡಗಳು ತಮ್ಮ ಪಾಲಿನ ಎಲ್ಲ ಪಂದ್ಯಗಳನ್ನೂ ಸೋತರೆ ಲಖನೌಗೆ ಅದೃಷ್ಟ ಒಲಿಯಬಹುದು. 

l ಈ ಅವಧಿಯಲ್ಲಿ ಮಳೆಯಿಂದಾಗಿ ಪಂದ್ಯಗಳ ಆಯೋಜನೆ ಮತ್ತು ಫಲಿತಾಂಶದಲ್ಲಿ ವ್ಯತ್ಯಾಸವಾಗಬಹುದು. ಆಗ ಪಾಯಿಂಟ್ ಲೆಕ್ಕಾಚಾರಗಳು ಬದಲಾಗಬಹುದು.  

ರಿಷಭ್ ಪಂತ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.