ADVERTISEMENT

IPL 2025 | ಡೆಲ್ಲಿಗೆ ಸತತ 4ನೇ ಜಯ; ತವರಿನಲ್ಲಿ ಮತ್ತೆ ಮುಗ್ಗರಿಸಿದ ಆರ್‌ಸಿಬಿ

ನಾಗೇಶ್ ಶೆಣೈ ಪಿ.
Published 10 ಏಪ್ರಿಲ್ 2025, 19:19 IST
Last Updated 10 ಏಪ್ರಿಲ್ 2025, 19:19 IST
<div class="paragraphs"><p>ಕೆ.ಎಲ್‌.ರಾಹುಲ್‌ ಬ್ಯಾಟಿಂಗ್‌ ವೈಖರಿ</p></div>

ಕೆ.ಎಲ್‌.ರಾಹುಲ್‌ ಬ್ಯಾಟಿಂಗ್‌ ವೈಖರಿ

   

ಬೆಂಗಳೂರು: ಯಶ್ ದಯಾಳ್‌ ಅವರ ಫುಲ್‌ಟಾಸ್‌ ಎಸೆತವನ್ನು ಫೈನ್‌ಲೆಗ್‌ಗೆ ಸಿಕ್ಸರ್‌ ಎತ್ತಿದ ಕೆ.ಎಲ್‌.ರಾಹುಲ್, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಿಸಿದರು. ಅಜೇಯ 93 ರನ್ (53 ಎಸೆತ, 4x7, 6x6) ಬಾರಿಸಿದ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡ ಗುರುವಾರ ಐಪಿಎಲ್‌ ಪಂದ್ಯದಲ್ಲಿ ಸತತ ನಾಲ್ಕನೇ ಗೆಲುವು ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಅವರು ಡೆಲ್ಲಿ ಬೌಲರ್‌ಗಳ ಶ್ರಮ ವ್ಯರ್ಥವಾಗಲು ಬಿಡಲಿಲ್ಲ. ಗೆಲುವಿನ ಹೊಡೆತದ ನಂತರ ಮುಂದಡಿಯಿಟ್ಟು ಬ್ಯಾಟನ್ನು ನೆಲಕ್ಕೆ ಕುಕ್ಕಿದರು. ನಂತರ ಇದು ನನ್ನ ನೆಲ ಎಂಬರ್ಥದ ಸಂಜ್ಞೆ ಮಾಡಿದರು. ತವರಿನಲ್ಲಿ ಮೊದಲ ಗೆಲುವನ್ನು ನಿರೀಕ್ಷಿಸಿ ಕಿಕ್ಕಿರಿದು ಬಂದಿದ್ದ ಆರ್‌ಸಿಬಿ ಅಭಿಮಾನಿಗಳು ಅವರ ಆಟಕ್ಕೆ ತಲೆದೂಗಬೇಕಾಯಿತು. 164 ರನ್‌ಗಳ ಗುರಿಯನ್ನು ಎದುರಿಸಿದ್ದ ಡೆಲ್ಲಿ ತಂಡ ಇನ್ನೂ 13 ಎಸೆತಗಳಿರುವಂತೆ 4 ವಿಕೆಟ್‌ಗೆ 169 ಬಾರಿಸಿ ಸಂಭ್ರಮಿಸಿತು.

ADVERTISEMENT

ಒಂದು ಹಂತದಲ್ಲಿ 58 ರನ್‌ಗಳಾಗುವಷ್ಟರಲ್ಲಿ 4 ವಿಕೆಟ್‌ ಕಳೆದುಕೊಂಡಿದ್ದ ಡೆಲ್ಲಿ ಸಂಕಷ್ಟದಲ್ಲಿತ್ತು. ಆದರೆ ರಾಹುಲ್ ಅವರಿಗೆ ಟ್ರಿಸ್ಟನ್‌ ಸ್ಟಬ್ಸ್‌ (ಔಟಾಗದೇ 38) ಬೆಂಬಲ ನೀಡಿದರು. 55 ಎಸೆತಗಳಲ್ಲಿ ಇವರಿಬ್ಬರು ಮುರಿಯದ ಐದನೇ ವಿಕೆಟ್‌ಗೆ ದಾಖಲೆಯ 111 ರನ್ ಸೇರಿಸಿ ಗೆಲುವನ್ನು ತ್ವರಿತಗೊಳಿಸಿದರು. ಈ ಹಿಂದಿನ ಪಂದ್ಯದಲ್ಲೂ ರಾಹುಲ್ (77) ಅರ್ಧ ಶತಕ ಬಾರಿಸಿದ್ದರು.

ಕೇವಲ 5 ರನ್‌ ಗಳಿಸಿದ್ದಾಗ ಯಶ್‌ ದಯಾಳ್‌ ಬೌಲಿಂಗ್‌ನಲ್ಲಿ ರಜತ್ ಪಾಟೀದಾರ್ ಅವರಿಂದ ಮಿಡ್‌ ಆಫ್‌ನಲ್ಲಿ ಜೀವದಾನ ಪಡೆದಿದ್ದ ರಾಹುಲ್ ನಂತರ ಅವಕಾಶ ನೀಡಲಿಲ್ಲ. ನಿಧಾನವಾಗಿ ಇನಿಂಗ್ಸ್‌ ಕಟ್ಟಿದ ಅವರು ನಂತರ ಆಕ್ರಮಣಕಾರಿಯಾದರು. ಹೇಜಲ್‌ವುಡ್‌ ಮಾಡಿದ 15ನೇ ಓವರಿನಲ್ಲಿ 22 ರನ್ ಸೂರೆ ಮಾಡಿದರು. ಒಂದು ಸಿಕ್ಸರ್, ಮೂರು ಬೌಂಡರಿಗಳು ಇದರಲ್ಲಿ ಒಳಗೊಂಡಿದ್ದವು.

ಭುವನೇಶ್ವರ ಕುಮಾರ್ ಮತ್ತು ಯಶ್‌ ದಯಾಳ್‌ ಅವರು ಆರಂಭದಲ್ಲಿ ದೊರಕಿಸಿಕೊಟ್ಟ ಯಶಸ್ಸು ಪ್ರೇಕ್ಷಕರಲ್ಲಿ ಸಂಚಲನ ಮೂಡಿಸಿತ್ತು. ಆದರೆ ನಂತರ ನಿರಾಸೆ ಕಟ್ಟಿಟ್ಟ ಬುತ್ತಿಯಾಯಿತು.

ಇದಕ್ಕೆ ಮೊದಲು ಮಿಂಚಿನ ಆರಂಭ ಪಡೆದ ರಾಯಲ್‌ ಚಾಲೆಂಜರ್ಸ್ ತಂಡ ನಂತರ ಪರದಾಡಿ ಅಂತಿಮವಾಗಿ 7 ವಿಕೆಟ್‌ಗೆ 163 ರನ್‌ಗಳ ಸಾಧಾರಣ ಮೊತ್ತ ಗಳಿಸಿತ್ತು.

ಫಿಲ್‌ ಸಾಲ್ಟ್‌ (37, 17ಎ, 4x4, 6x3) ಮತ್ತು ವಿರಾಟ್‌ ಕೊಹ್ಲಿ (22, 14 ಎ) ಜೊತೆಯಾಟ ಮತ್ತು ಕೊನೆಯಲ್ಲಿ ಟಿಮ್‌ ಡೇವಿಡ್‌ (37, 20ಎ, 4X2, 6X4) ಅಬ್ಬರ ಬಿಟ್ಟರೆ ಉಳಿದಂತೆ ಡೆಲ್ಲಿ ಕ್ಯಾಪಿಟಲ್ಸ್‌ ಬೌಲರ್‌ಗಳ ಮೆರೆದಾಟವೇ ಎದ್ದುಕಂಡಿತು.

ಸಾಲ್ಟ್‌  ಮತ್ತು ಕೊಹ್ಲಿ ತಂಡಕ್ಕೆ ‘ಕನಸಿನ ಆರಂಭ’ ನೀಡಿದ್ದರು. ಅದರಲ್ಲೂ ಸಾಲ್ಟ್‌ ಆಕ್ರಮಣಕಾರಿ
ಯಾಗಿದ್ದರು. ಮಿಚೆಲ್‌ ಸ್ಟಾರ್ಕ್‌ ಬೌಲಿಂಗ್‌ನಲ್ಲಿ ಎರಡು ಸಿಕ್ಸರ್‌, ಮೂರು ಬೌಂಡರಿ ಸೇರಿ ಸೇರಿ 24 ರನ್ ಬಾರಿಸಿದರು. ಆ ಓವರಿನಲ್ಲಿ ಒಟ್ಟು 30 ರನ್‌ಗಳು ಹರಿದುಬಂದವು.

ಸಾಲ್ಟ್‌ ದುರದೃಷ್ಟಕರ ರೀತಿಯಲ್ಲಿ ರನ್‌ಔಟ್‌ ಆದರು. ಅಕ್ಷರ್ ಪಟೇಲ್‌ ಮಾಡಿದ ನಾಲ್ಕನೇ ಓವರಿನಲ್ಲಿ ಎಕ್ಸ್‌ಟ್ರಾ ಕವರ್‌ ಕಡೆ ಚೆಂಡನ್ನು ಆಡಿದ ಸಾಲ್ಟ್‌  ಓಡಿದರು. ಕೊಹ್ಲಿ ಮೊದಲು ಸ್ಪಂದಿಸಿದರೂ ನಂತರ ಹಿಂದಡಿಯಿಟ್ಟರು. ಸಾಲ್ಟ್‌  ಡೈವ್‌ ಮಾಡಿದರೂ ವಿಪ್ರಜ್ ಅವರಿಂದ ಚೆಂಡನ್ನು ಪಡೆದ ವಿಕೆಟ್‌ ಕೀಪರ್ ರಾಹುಲ್ ಬೇಲ್ಸ್ ಉರುಳಿಸಿದರು. ಆಗ ಮೊತ್ತ 3.5 ಓವರುಗಳಲ್ಲಿ 61.

ಸಾಲ್ಟ್‌ ಅವರ ನಿರ್ಗಮನ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮರಳಿ ಹಿಡಿತ ಪಡೆಯಲು ನೆರವಾಯಿತು. 64
ರನ್‌ಗಳ ಅಂತರದಲ್ಲಿ ಆರು ವಿಕೆಟ್‌ಗಳು ಬಿದ್ದವು.

ಸ್ಪಿನ್ನರ್‌ಗಳಾದ ವಿಪ್ರಜ್ (18ಕ್ಕೆ2) ಮತ್ತು ಕುಲದೀಪ್ (17ಕ್ಕೆ2) ಅವರ ಎಸೆತಗಳಲ್ಲಿ ವೈವಿಧ್ಯವಿದ್ದು, ಬ್ಯಾಟರ್‌ಗಳು ಪರದಾಡಿದರು. 6 ರಿಂದ 13ರವರೆಗಿನ ಓವರಿನಲ್ಲಿ ಕೇವಲ ಒಂದು ಸಿಕ್ಸರ್‌, ಎರಡು ಬೌಂಡರಿಗಳು ಬಂದವು. ವೇಗಿ ಮುಖೇಶ್ ಕೂಡ ಮೊದಲ ಓವರಿನಲ್ಲೇ ವಿಕೆಟ್‌ ಮೇಡನ್ ಪಡೆದು ಸ್ಪಿನ್ನರ್‌ಗಳಿಗೆ ಬೆಂಬಲ ನೀಡಿದರು.

ಕೊಹ್ಲಿ ಸಾಧನೆ
ಆರ್‌ಸಿಬಿಯ ತಾರಾ ಬ್ಯಾಟರ್‌ ವಿರಾಟ್‌ ಕೊಹ್ಲಿ ಐಪಿಎಲ್‌ನಲ್ಲಿ ಬಾರಿಸಿದ ಸಿಕ್ಸರ್‌ ಮತ್ತು ಬೌಂಡರಿಗಳ ಸಂಖ್ಯೆ ಸಾವಿರ ದಾಟಿತು. ಅವರು 721 ಬೌಂಡರಿ ಮತ್ತು 280 ಸಿಸಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಪಂದ್ಯದಲ್ಲಿ ಅವರು ಒಂದು ಬೌಂಡರಿ, ಎರಡು ಸಿಕ್ಸರ್‌ ಗಳಿಸಿದ್ದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು: 7ಕ್ಕೆ163 (20 ಓವರ್‌ಗಳಲ್ಲಿ)

ಸಾಲ್ಟ್ ರನ್‌ಔಟ್ (ವಿಪ್ರಜ್/ರಾಹುಲ್) 37 (17ಎ, 4X4, 6X3)

ಕೊಹ್ಲಿ ಸಿ ಸ್ಟಾರ್ಕ್ ಬಿ ವಿಪ್ರಜ್ 22 (14ಎ, 4X1, 6X2)

ಪಡಿಕ್ಕಲ್ ಸಿ ಅಕ್ಷರ್ ಬಿ ಮುಕೇಶ್ 1 (8ಎ)

ರಜತ್ ಸಿ ರಾಹುಲ್ ಬಿ ಕುಲದೀಪ್ 25 (23ಎ, 4X1, 6X1)

ಲಿವಿಂಗ್‌ಸ್ಟೋನ್ ಸಿ ಆಶುತೋಷ್ ಬಿ ಮೋಹಿತ್ 4 (6ಎ)

ಜಿತೇಶ್ ಸಿ ರಾಹುಲ್ ಬಿ ಕುಲದೀಪ್ 3 (11ಎ)

ಕೃಣಾಲ್ ಸಿ ಆಶುತೋಷ್ ಬಿ ವಿಪ್ರಜ್ 18 (18ಎ, 4X1)

ಟಿಮ್ ಔಟಾಗದೇ 37 (20ಎ, 4X2, 6X4)

ಭುವನೇಶ್ವರ್ ಔಟಾಗದೇ 1 (4ಎ)

ಇತರೆ: 15 (ಲೆಗ್‌ಬೈ 5, ವೈಡ್ 9, ನೋಬಾಲ್ 1)

ವಿಕೆಟ್ ಪತನ: 1–6 (ಫಿಲ್ ಸಾಲ್ಟ್; 3.5), 2–64 (ದೇವದತ್ತ ಪಡಿಕ್ಕಲ್; 5.4), 3–74
(ವಿರಾಟ್ ಕೊಹ್ಲಿ; 6.6), 4–91 (ಲಿಯಾಮ್ ಲಿವಿಂಗ್‌ಸ್ಟೋನ್; 9.3), 5–102 (ಜಿತೇಶ್ ಶರ್ಮಾ; 12.2), 6–117 (ರಜತ್ ಪಾಟೀದಾರ್; 14.5), 7–125 (ಕೃಣಾಲ್ ಪಾಂಡ್ಯ; 17.1)

ಬೌಲಿಂಗ್‌: ಮಿಚೆಲ್ ಸ್ಟಾರ್ಕ್ 3–0–35–0, ಅಕ್ಷರ್ ಪಟೇಲ್ 4–0–52–0, ವಿಪ್ರಜ್ ನಿಗಮ್ 4–0–18–2, ಮುಕೇಶ್ ಕುಮಾರ್ 3–1–26–1, ಕುಲದೀಪ್ ಯಾದವ್ 4–0–17–2, ಮೋಹಿತ್ ಶರ್ಮಾ 2–0–10–1

ಡೆಲ್ಲಿ ಕ್ಯಾಪಿಟಲ್ಸ್‌‌ 4ಕ್ಕೆ 169 (17.5 ಓವರ್‌ಗಳಲ್ಲಿ)

ಫಾಫ್‌ ಸಿ ಪಾಟೀದಾರ್‌ ಬಿ ದಯಾಳ್‌ 2 (7ಎ)

ಮೆಕ್‌ಗುರ್ಕ್‌ ಸಿ ಅಶುತೋಷ್‌ ಬಿ ಭುವನೇಶ್ವರ್‌ 7 (6ಎ, 4x1)

ಪೊರೆಲ್‌ ಸಿ ಅಶುತೋಷ್‌ ಬಿ ಭುವನೇಶ್ವರ್ 7 (7ಎ, 4x1)

ಕೆ.ಎಲ್‌. ರಾಹುಲ್‌ ಔಟಾಗದೇ 93 (53ಎ, 4x7, 6x6)

ಅಕ್ಷರ್‌ ಸಿ ಡೆವಿಡ್‌ ಬಿ ಸುಯಶ್‌ 15 (11ಎ, 4x2)

ಟ್ರಿಸ್ಟನ್‌ ಸ್ಟಬ್ಸ್‌ ಔಟಾಗದೇ 38 (23ಎ, 4x4, 6x1)

ಇತರೆ: 7 (ವೈಡ್‌ 7)

ವಿಕೆಟ್ ಪತನ: 1-9 (ಫಾಫ್ ಡುಪ್ಲೆಸಿ, 1.6), 2-10 (ಜೇಕ್ ಫ್ರೇಸರ್ ಮೆಕ್‌ಗುರ್ಕ್, 2.1), 3-30 (ಅಭಿಷೇಕ್ ಪೊರೆಲ್, 4.3), 4-58 (ಅಕ್ಷರ್ ಪಟೇಲ್, 8.4)

ಬೌಲಿಂಗ್‌: ಭುವನೇಶ್ವರ ಕುಮಾರ್‌ 4–0–26–2, ಯಶ್‌ ದಯಾಳ್‌ 3.5–0–45–1, ಜೋಶ್‌ ಹೇಜಲ್‌ವುಡ್‌ 3–0–40–0, ಸುಯಶ್‌ ಶರ್ಮಾ 4–0–25–1, ಕೃಣಾಲ್‌ ಪಾಂಡ್ಯ 2–0–19–0, ಲಿಯಾಮ್‌ ಲಿವಿಂಗ್‌ಸ್ಟೋನ್‌ 1–0–14–0

ಪಂದ್ಯದ ಆಟಗಾರ: ಕೆ.ಎಲ್‌. ರಾಹುಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.