ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಗುಜರಾತ್ ಟೈಟನ್ಸ್ ಎದುರಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜಿತೇಶ್ ಶರ್ಮಾ ಅವರ ಹೊಡೆತದ ಭಂಗಿ
ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್ ಪಿ.ಎಸ್.
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ 14ನೇ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಗುಜರಾತ್ ಟೈಟನ್ಸ್ 8 ವಿಕೆಟ್‌ಗಳ ಜಯ ಸಾಧಿಸಿದೆ.
ಚಿನ್ನಸ್ವಾಮಿ ಕ್ರೀಡಾಂಗಣವು ‘ಹೈದರಾಬಾದ್ ಎಕ್ಸ್‌ಪ್ರೆಸ್’ ಮೊಹಮ್ಮದ್ ಸಿರಾಜ್ ಅವರಿಗೆ ವಿಕೆಟ್ ಬೇಟೆಯಾಡುವ ತಾಣ ಎಂಬುದು ಮತ್ತೊಮ್ಮೆ ಸಾಬೀತಾಯಿತು. ಆದರೆ ಈ ಬಾರಿ ಅವರ ‘ಬಿರುಗಾಳಿ’ಗೆ ನಲುಗಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ.
2018 ರಿಂದ 2024ರವರೆಗೆ ಆರ್‌ಸಿಬಿಯ ಬೌಲಿಂಗ್ ಸಾರಥ್ಯ ವಹಿಸಿದ್ದ ಸಿರಾಜ್ ಎದುರಾಳಿ ತಂಡಗಳಿಗೆ ದುಃಸ್ವಪ್ನವಾದ ಉದಾಹರಣೆಗಳು ಬಹಳಷ್ಟಿವೆ. ಆದರೆ, ಈ ವರ್ಷ ಆರ್‌ಸಿಬಿಯಿಂದ ರಿಲೀಸ್ ಆಗಿ ₹12.25 ಕೋಟಿಗೆ ಗುಜರಾತ್ ಟೈಟನ್ಸ್ ಸೇರಿರುವ ಸಿರಾಜ್ (19ಕ್ಕೆ3) ದಾಳಿ ರಂಗೇರಿತು. ಬುಧವಾರ ಇಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ 8 ವಿಕೆಟ್‌ಗಳಿಂದ ಪರಾಭವಗೊಳ್ಳಲು ಸಿರಾಜ್ ಆಟ ಕಾರಣವಾಯಿತು.
ಅಷ್ಟೇ ಅಲ್ಲ; ಲಯ ಕಂಡುಕೊಂಡ ಬ್ಯಾಟರ್ ಜೋಸ್ ಬಟ್ಲರ್ (73; 39ಎಸೆತ) ಅಬ್ಬರದ ಬ್ಯಾಟಿಂಗ್ ಬಲದಿಂದ ಗುಜರಾತ್ ತಂಡಕ್ಕೆ ಜಯದ ಹಾದಿ ಸುಲಭವಾಯಿತು. ಕ್ರೀಡಾಂಗಣದಲ್ಲಿ ಸೇರಿದ್ದ 25 ಸಾವಿರಕ್ಕೂ ಹೆಚ್ಚು ಅಭಿಮಾನಿಗಳಿಗೆ ನಿರಾಸೆ ಕಾಡಿತು.
ಟೂರ್ನಿಯ ಕಳೆದೆರಡೂ ಪಂದ್ಯಗಳಲ್ಲಿ ಗೆದ್ದು ಅಂಕಪಟ್ಟಿಯ ಅಗ್ರಸ್ಥಾನದಲ್ಲಿದ್ದ ರಜತ್ ಪಾಟೀದಾರ್ ಬಳಗವು ತವರಿನಲ್ಲಿ ಆಡಿದ ಮೊದಲ ಹಣಾಹಣಿಯಲ್ಲಿ ಸೋತಿತು. ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕಿಳಿ
ಯಿತು. ಅಗ್ರಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ಚೆಂದದ ಅರ್ಧಶತಕ ಗಳಿಸಿದ ಲಿಯಾಮ್ ಲಿವಿಂಗ್‌ಸ್ಟೋನ್ (54; 40ಎಸೆತ) ಮತ್ತು ಜಿತೇಶ್ (33; 21ಎಸೆತ) ಅವರಿಬ್ಬರೂ 5ನೇ ವಿಕೆಟ್ ಜೊತೆಯಾಟದಲ್ಲಿ 52 (38ಎಸೆತ) ರನ್ ಸೇರಿಸದೇ ಹೋಗಿದ್ದರೆ ತಂಡವು ಅಲ್ಪಮೊತ್ತಕ್ಕೆ ಕುಸಿಯುವ ಸಾಧ್ಯತೆ ಇತ್ತು.
ಲಿವಿಂಗ್‌ಸ್ಟೋನ್, ಜಿತೇಶ್ ಅವರಲ್ಲದೇ ಕೆಳಕ್ರಮಾಂಕದಲ್ಲಿ ಮಿಂಚಿದ ಟಿಮ್ ಡೇವಿಡ್ ಅವರ ಕಾಣಿಕೆಯಿಂದಾಗಿ ಆರ್‌ಸಿಬಿ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 169 ರನ್ ಸೇರಿಸಿತು. ಈ ಗೌರವಾರ್ಹ ಮೊತ್ತವನ್ನು ರಕ್ಷಿಸಿಕೊಳ್ಳುವಲ್ಲಿ ಆತಿಥೇಯ ಬೌಲರ್‌ಗಳು ವಿಫಲರಾದರು. ಗುಜರಾತ್ 17.5 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 170 ರನ್ ಗಳಿಸಿತು. ಸಾಯಿ ಸುದರ್ಶನ್ ಕೇವಲ 1 ರನ್ ಅಂತರದಿಂದ ಅರ್ಧಶತಕ ಕೈತಪ್ಪಿಸಿಕೊಂಡರು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಗುಜರಾತ್ ಟೈಟನ್ಸ್ ತಂಡವು ಪವರ್‌ಪ್ಲೇನಲ್ಲಿಯೇ ತನ್ನ ಶಕ್ತಿಪ್ರದರ್ಶನ ಮಾಡಿತು. ಕೇವಲ 38 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡ ಆರ್‌ಸಿಬಿ ಅಲ್ಪಮೊತ್ತಕ್ಕೆ ಕುಸಿಯುವ ಆತಂಕ ಎದುರಿಸಿತು. ಟೈಟನ್ಸ್ ವೇಗದ ಜೋಡಿ ಸಿರಾಜ್ ಮತ್ತು ಅರ್ಷದ್ ಖಾನ್ ನೀಡಿದ ಪೆಟ್ಟಿನಿಂದಾಗಿ ವಿರಾಟ್ ಕೊಹ್ಲಿ (7 ರನ್), ಫಿಲ್ ಸಾಲ್ಟ್ (14 ರನ್) ಮತ್ತು ಕನ್ನಡಿಗ ದೇವದತ್ತ ಪಡಿಕ್ಕಲ್ (4 ರನ್) ಪೆವಿಲಿಯನ್‌ಗೆ ಮರಳಿದರು. ಹಸಿರು ಗರಿಕೆಗಳಿದ್ದ ಪಿಚ್‌ನಲ್ಲಿ ತಾಳ್ಮೆ ತಪ್ಪಿದ ಬ್ಯಾಟರ್‌ಗಳು ದಂಡ ತೆತ್ತರು. ನಾಯಕ ರಜತ್ ಪಾಟೀದಾರ್ ಅವರೂ ಇಶಾಂತ್ ಶರ್ಮಾ ಬೀಸಿದ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಆತಿಥೇಯರು ಮೂರಂಕಿ ಮೊತ್ತ ಮುಟ್ಟುವರೇ ಎಂಬ ಸಂಶಯ ಆವರಿಸಿದ ಹೊತ್ತಿನಲ್ಲಿ ಲಿವಿಂಗ್‌ಸ್ಟೋನ್ ಕ್ರೀಸ್‌ಗೆ ಬಂದರು.
ಲಿವಿಂಗ್‌ಸ್ಟೋನ್ 9 ರನ್ ಗಳಿಸಿದ್ದ ಸಂದರ್ಭದಲ್ಲಿ ಬೌಂಡರಿಲೈನ್‌ನಲ್ಲಿದ್ದ ರಾಹುಲ್ ತೆವಾತಿಯಾ ಬಿಟ್ಟ ಕ್ಯಾಚ್ ತುಟ್ಟಿಯಾಯಿತು. ಅದರ ನಂತರ ಐದು ಭರ್ಜರಿ ಸಿಕ್ಸರ್‌ಗಳನ್ನು ಎತ್ತಿದ ಲಿವಿಂಗ್
ಸ್ಟೋನ್ ತಮ್ಮ ತಂಡಕ್ಕೆ ಆಸರೆಯಾದರು. ಜಿತೇಶ್ ಕೂಡ 5 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿದರು. ಇಬ್ಬರ ಆಟದಿಂದಾಗಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂಭ್ರಮದ ಹೊನಲು ಹರಿಯಿತು.
ತಂಡದ ಮೊತ್ತ 100 ದಾಟುವ ಮುನ್ನ ಜಿತೇಶ್ ಔಟಾದರು. ಕೃಣಾಲ್ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಲಿಯಾಮ್ ಜೊತೆಗೂಡಿದ ಟಿಮ್ ಡೇವಿಡ್ (32; 18ಎ) ರನ್ ಗಳಿಕೆಯ ವೇಗ ಹೆಚ್ಚಿಸಿದರು. 19ನೇ ಓವರ್‌ನಲ್ಲಿ ಲಿಯಾಮ್ ವಿಕೆಟ್ ಗಳಿಸಿದ ಸಿರಾಜ್ ಮಿಂಚಿದರು. ಆದರೆ ಪ್ರಸಿದ್ಧ ಕೃಷ್ಣ ಹಾಕಿದ ಕೊನೆಯ ಓವರ್‌ನಲ್ಲಿ ಎರಡು ಬೌಂಡರಿ ಮತ್ತು ಸಿಕ್ಸರ್ ಸಹಿತ 16 ರನ್ ಸೂರೆ ಮಾಡಿದ ಡೇವಿಡ್ ಮಿಂಚಿದರು. ಕೊನೆಯಲ್ಲಿ ಯಾರ್ಕರ್‌ಗೆ ಬೌಲ್ಡ್ ಆದರು.
ಬಹಳಷ್ಟು ಕುತೂಹಲ ಕೆರಳಿಸಿದ ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಸಿರಾಜ್ ಮುಖಾಮುಖಿ ನಡೆದಿದ್ದು ಕೇವಲ ಎರಡು ಎಸೆತಗಳಲ್ಲಿ ಮಾತ್ರ.
ಇನಿಂಗ್ಸ್‌ನ ಮೊದಲ ಓವರ್ ಬೌಲ್ ಮಾಡಿದ ಸಿರಾಜ್ ಅವರ ಪ್ರಥಮ ಎಸೆತದಲ್ಲಿ ಫಿಲ್ ಸಾಲ್ಟ್ ಅವರು ಒಂದು ರನ್ ಗಳಿಸಿದರು. ಕ್ರೀಸ್‌ಗೆ ಬಂದ ಕೊಹ್ಲಿ ಬ್ಯಾಟಿಂಗ್‌ಗೆ ಅಣಿಯಾದರು. ರನ್ ಅಪ್ ತೆಗೆದುಕೊಂಡು ಬಂದ ಸಿರಾಜ್ ಅರ್ಧಕ್ಕೆ ನಿಲ್ಲಿಸಿದರು. ಮತ್ತೆ ಬೌಲಿಂಗ್ ಆರಂಭಿಸಿದರು. ಆ ಎಸೆತವನ್ನು ಎಕ್ಸಟ್ರಾ ಕವರ್‌ಗೆ ಬೌಂಡರಿಗಟ್ಟಿದ ವಿರಾಟ್ ತಮ್ಮ ಖಾತೆ ತೆರೆದರು. ಸಿರಾಜ್ ಹಾಕಿದ ನಂತರದ ಎಸೆತದಲ್ಲಿ ವಿರಾಟ್ ಒಂದು ರನ್ ಪಡೆದರು. ಆದರೆ ಎರಡನೇ ಓವರ್‌ನಲ್ಲಿ ಅರ್ಷದ್ ಖಾನ್ ಎಸೆತವನ್ನು ಆಡುವ ಪ್ರಯತ್ನದಲ್ಲಿ ಪ್ರಸಿದ್ಧ ಕೃಷ್ಣಗೆ ಕ್ಯಾಚ್ ಆದರು.
2018ರಿಂದ 2024ರವರೆಗೂ ಆರ್‌ಸಿಬಿಯಲ್ಲಿ ಆಡಿದ್ದ ಸಿರಾಜ್ ‘ಮಿಯಾ‘ಗೆ ಚಿನ್ನಸ್ವಾಮಿ ಅಂಗಳ ಚಿರಪರಿಚಿತ. ಅದರ ಲಾಭ ಈ ಬಾರಿ ಗುಜರಾತ್ ಟೈಟನ್ಸ್‌ಗೆ ಆಯಿತು. ಸಿರಾಜ್ 3 ವಿಕೆಟ್ ಗಳಿಸಿ ಮಿಂಚಿದರು. ಪವರ್‌ಪ್ಲೇ ಮುಗಿಯುವ ಮುನ್ನದ ಸ್ಪೆಲ್‌ನಲ್ಲಿ 15ಕ್ಕೆ2 ವಿಕೆಟ್ ಕಬಳಿಸಿದರು.
ಹೋದ ವರ್ಷದ ಟೂರ್ನಿಯಲ್ಲಿ ಇದೇ ಮೈದಾನದಲ್ಲಿ ಗುಜರಾತ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ 29ಕ್ಕೆ2 ವಿಕೆಟ್ ಗಳಿಸಿದ್ದ ಸಿರಾಜ್ ಅವರು ಆರ್‌ಸಿಬಿಯ ಗೆಲುವಿನ ರೂವಾರಿಯೂ ಆಗಿದ್ದರು. ಪಂದ್ಯಶ್ರೇಷ್ಠ ಗೌರವಕ್ಕೂ ಪಾತ್ರರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.