ADVERTISEMENT

IPL 2025 | RCB vs GT: ವಿರಾಟ್–ಸಿರಾಜ್‌ ಮುಖಾಮುಖಿಗೆ ವೇದಿಕೆ ಸಜ್ಜು

ಗಿರೀಶ ದೊಡ್ಡಮನಿ
Published 1 ಏಪ್ರಿಲ್ 2025, 23:32 IST
Last Updated 1 ಏಪ್ರಿಲ್ 2025, 23:32 IST
<div class="paragraphs"><p>ಗುಜರಾತ್ ಟೈಟನ್ಸ್‌ ತಂಡದ ಆಟಗಾರ ಮೊಹಮ್ಮದ್‌ ಸಿರಾಜ್‌ ಹಾಗೂ ಆರ್‌ಸಿಬಿ ತಂಡದ ಆಟಗಾರ ವಿರಾಟ್‌ ಕೊಹ್ಲಿ ಭೇಟಿಯಾದ&nbsp; ಕ್ಷಣ </p></div>

ಗುಜರಾತ್ ಟೈಟನ್ಸ್‌ ತಂಡದ ಆಟಗಾರ ಮೊಹಮ್ಮದ್‌ ಸಿರಾಜ್‌ ಹಾಗೂ ಆರ್‌ಸಿಬಿ ತಂಡದ ಆಟಗಾರ ವಿರಾಟ್‌ ಕೊಹ್ಲಿ ಭೇಟಿಯಾದ  ಕ್ಷಣ

   

ಪ್ರಜಾವಾಣಿ ಚಿತ್ರ- ಕೃಷ್ಣ ಕುಮಾರ್ ಪಿ.ಎಸ್. 

ಬೆಂಗಳೂರು: ಮಂಗಳವಾರ ಸಂಜೆ ಪಶ್ಚಿಮದತ್ತ ಸೂರ್ಯ ಸರಿಯುತ್ತಿದ್ದ. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾತ್ರ ಬೆಳಕಿನ ಕೊರತೆಯಾಗದಂತೆ ಬೃಹತ್  ದೀಪಸ್ಥಂಭಗಳು ಬೆಳಕು ಚೆಲ್ಲುತ್ತಿದ್ದವು. ಇದೇ ಹೊತ್ತಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ‘ಬ್ಯಾಟಿಂಗ್ ಚಾಂಪಿಯನ್’ ವಿರಾಟ್ ಕೊಹ್ಲಿ ಮತ್ತು ಈ ವರ್ಷ ಗುಜರಾತ್ ಟೈಟನ್ಸ್‌ನಲ್ಲಿ ಆಡುತ್ತಿರುವ ‘ಹೈದರಾಬಾದ್ ಎಕ್ಸ್‌ಪ್ರೆಸ್’ ಮೊಹಮ್ಮದ್ ಸಿರಾಜ್ ಅವರಿಬ್ಬರ ಸ್ನೇಹಮಿಲನವು ಮಿಂಚಿನ ಸಂಚಲನ ಮೂಡಿಸಿತು.

ADVERTISEMENT

ಬುಧವಾರ ಇಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಸಿರಾಜ್ ಮಿಯಾ ಇದೇ ಮೊದಲ ಬಾರಿಗೆ ತಮ್ಮ ನೆಚ್ಚಿನ ‘ವಿರಾಟ್  ಭಾಯ್‌’ಗೆ ಬೌಲಿಂಗ್ ಮಾಡಲಿದ್ದಾರೆ. 2018ರಿಂದ 2024ರವರೆಗೆ ಸಿರಾಜ್ ಅವರು ವಿರಾಟ್ ಅವರೊಂದಿಗೆ ಡ್ರೆಸಿಂಗ್ ರೂಮ್‌ ಹಂಚಿಕೊಂಡಿದ್ದರು. ಈ ಬಾರಿಯ ಐಪಿಎಲ್‌ಗಾಗಿ ನಡೆದ ಮೆಗಾ ಹರಾಜಿಗೂ ಮುನ್ನ ಆರ್‌ಸಿಬಿ ತಂಡವು ತಮ್ಮನ್ನು ಬಿಡುಗಡೆ ಮಾಡಿದಾಗ ಸಿರಾಜ್ ಭಾವುಕರಾಗಿದ್ದರು. ಈಗ ತಂಡ ಬದಲಾದರೂ ವಿರಾಟ್ ಮತ್ತು ಆರ್‌ಸಿಬಿ ಅಭಿಮಾನಿಗಳೊಂದಿಗಿನ ಬಾಂಧವ್ಯ ಸಿರಾಜ್‌ ಅವರಲ್ಲಿ ಕಡಿಮೆಯಾಗಿಲ್ಲ. ಮಂಗಳವಾರ ವಿರಾಟ್ ಜೊತೆಗೆ ಭೇಟಿಯಾದ ಸಿರಾಜ್ ಹಾವಭಾವ ಎಲ್ಲವನ್ನೂ ಹೇಳಿತ್ತು.

2017ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಮೊದಲ ಸಲ ಆಡಿದ್ದ ಸಿರಾಜ್ ಅವರಿಗೆ ಕೊಹ್ಲಿಯನ್ನು ಎದುರಿಸುವ ಅವಕಾಶ ಸಿಕ್ಕಿರಲಿಲ್ಲ. ಈಗ ಎದುರಾಳಿಯಾಗಿ ಆಡಲು ಸಜ್ಜಾಗಿದ್ದಾರೆ. ಸಾಮಾಜಿಕ ಜಾಲತಾಣಗಳ ತುಂಬ ಈಗ ಇವರಿಬ್ಬರ ಕುರಿತ ಪೋಸ್ಟ್‌ಗಳೇ ತುಂಬಿಹೋಗಿವೆ. ವಿರಾಟ್  ಅವರು ಸಿರಾಜ್‌ ಬೌಲಿಂಗ್‌ನಲ್ಲಿ ಸಿಕ್ಸರ್‌ ಎತ್ತಬಹುದೇ ಅಥವಾ ಔಟಾಗುವರೇ ಎಂಬ ಕೌತುಕ ಮನೆ ಮಾಡಿದೆ. 

ಕರ್ನಾಟಕದ ಕ್ರಿಕೆಟ್‌ ಅಭಿಮಾನಿಗಳಿಗೆ ಇನ್ನೊಂದು ಕುತೂಹಲವೂ ಇಲ್ಲಿದೆ. ರಾಜ್ಯ ತಂಡದಲ್ಲಿ ಜೊತೆಯಾಗಿ ಆಡುವ ಬ್ಯಾಟರ್ ದೇವದತ್ತ ಪಡಿಕ್ಕಲ್ ಮತ್ತು ವೇಗಿ ಪ್ರಸಿದ್ಧಕೃಷ್ಣ ಕೂಡ ಮುಖಾಮುಖಿಯಾಗಲಿದ್ದಾರೆ. ಗುಜರಾತ್ ಟೈಟನ್ಸ್ ತಂಡವು ಈಚೆಗೆ ಮುಂಬೈ ಇಂಡಿಯನ್ಸ್ ಎದುರು ಜಯಿಸುವಲ್ಲಿ ಪ್ರಸಿದ್ಧ ಮಹತ್ವದ ಪಾತ್ರ ವಹಿಸಿದ್ದರು. ಪಂದ್ಯಶ್ರೇಷ್ಠ ಗೌರವಕ್ಕೂ ಪಾತ್ರರಾಗಿದ್ದರು. ಕಳೆದೆರಡೂ ಪಂದ್ಯಗಳಲ್ಲಿ ಪಡಿಕ್ಕಲ್ (10 ಮತ್ತು 27) ತಮ್ಮ ಸಂಪೂರ್ಣ ಸಾಮರ್ಥ್ಯ ಮೆರೆಯುವಲ್ಲಿ ಪಡಿಕ್ಕಲ್ ಯಶಸ್ವಿಯಾಗಿಲ್ಲ. ತವರಿನಂಗಳದಲ್ಲಿ ಅವರು ಮಿಂಚುವ ನಿರೀಕ್ಷೆ ಇದೆ. 

ಈ ಎಲ್ಲ ಸಂಗತಿಗಳ ಜೊತೆಗೆ ಕ್ರೀಡಾಂಗಣಕ್ಕೆ ಲಗ್ಗೆ ಹಾಕಲು ಆರ್‌ಸಿಬಿ ಅಭಿಮಾನಿಗಳಿಗೆ ಇನ್ನೂ ಕೆಲವು ಕಾರಣಗಳಿವೆ. ಅದರಲ್ಲೊಂದು; ಈ ಆವೃತ್ತಿಯಲ್ಲಿ ಆರ್‌ಸಿಬಿಯು ತನ್ನ ತವರಿನಂಗಳದಲ್ಲಿ ಆಡಲಿರುವ ಮೊದಲ ಪಂದ್ಯ ಇದಾಗಿದೆ. ಈಗಾಗಲೇ ಆಡಿರುವ ಎರಡೂ ಪಂದ್ಯಗಳಲ್ಲಿ ಭರ್ಜರಿ ಜಯ ಗಳಿಸಿದೆ. ಈಡನ್ ಗಾರ್ಡನ್‌ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ‘ಹಾಲಿ ಚಾಂಪಿಯನ್’ ಕೋಲ್ಕತ್ತ ನೈಟ್ ರೈಡರ್ಸ್‌ ಮತ್ತು ಚೆಪಾಕ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಎದುರು ಗೆದ್ದು ಬಂದಿದೆ. ಅದರಲ್ಲೂ ಚೆನ್ನೈನಲ್ಲಿ 17 ವರ್ಷಗಳ ನಂತರ ಜಯ ದಾಖಲಿಸಿರುವುದು ತಂಡದಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ.  

ಇನ್ನೊಂದೆಡೆ ರಜತ್ ಪಾಟೀದಾರ್ ಅವರು ನಾಯಕತ್ವ ವಹಿಸಿಕೊಂಡ ನಂತರ ತಂಡವು ಇಲ್ಲಿ ಆಡುತ್ತಿರುವ ಮೊದಲ ಪಂದ್ಯವೂ ಇದಾಗಿದೆ. ನಾಯಕತ್ವದ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ (51 ಮತ್ತು 34 ರನ್) ಸೈ ಎನಿಸಿಕೊಂಡಿದ್ದಾರೆ. ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್, ಮಧ್ಯಮ ಕ್ರಮಾಂಕದಲ್ಲಿ ಲಿಯಾಮ್ ಲಿವಿಂಗ್‌ಸ್ಟೋಣ್, ಜಿತೇಶ್ ಶರ್ಮಾ ಮತ್ತು ಟಿಮ್ ಡೇವಿಡ್ ಉತ್ತಮ ಲಯದಲ್ಲಿದ್ದಾರೆ. ಬೌಲಿಂಗ್ ವಿಭಾಗವೂ ತಕ್ಕಮಟ್ಟಿಗೆ ಸಮತೋಲನಗೊಂಡಿದೆ. ಸ್ಪಿನ್ನರ್ ಕೃಣಾಲ್ ಪಾಂಡ್ಯ, ಲೆಗ್‌ಬ್ರೇಕ್ ಬೌಲರ್ ಸುಯಶ್ ಶರ್ಮಾ, ವೇಗಿ ಜೋಷ್ ಹ್ಯಾಜಲ್‌ವುಡ್, ಯಶ್ ದಯಾಳ್ ಮತ್ತು ಭುವನೇಶ್ವರ್ ಕುಮಾರ್ ಸಮರ್ಥರಾಗಿದ್ದಾರೆ. 

ಗುಜರಾತ್ ತಂಡದ ನಾಯಕ ಶುಭಮನ್ ಗಿಲ್, ಜೋಸ್ ಬಟ್ಲರ್, ಸಾಯಿ ಸುದರ್ಶನ್, ರುದರ್‌ಫೋರ್ಡ್ ಮತ್ತು ಶಾರೂಕ್ ಖಾನ್ ರನ್‌ ಹೊಳೆ ಹರಿಸುವ ಸಮರ್ಥರು. ಅನುಭವಿ ಬೌಲರ್‌ಗಳ ಬಲವೂ ತಂಡಕ್ಕೆ ಇದೆ. 

ಅದೆನೇ ಇರಲಿ; ಪಾಯಿಂಟ್ ಪಟ್ಟಿಯಲ್ಲಿ ಆರ್‌ಸಿಬಿ ತಂಡವು ಅಗ್ರಸ್ಥಾನವನ್ನು ಕಾಪಾಡಿಕೊಳ್ಳಲು ತವರಿನಂಗಳದಲ್ಲಿ ಶುಭಾರಂಭ ಮಾಡುವ ಭರವಸೆಯಲ್ಲಿ ಅಭಿಮಾನಿಗಳ ಬಳಗಕ್ಕೆ ಇದೆ.

  • ರಜತ್ ಪಾಟೀದಾರ್‌ ನಾಯಕತ್ವದಲ್ಲಿ ತವರಿನಂಗಳದಲ್ಲಿ ಮೊದಲ ಪಂದ್ಯ

  • ದೇವದತ್ತ ‍ಪಡಿಕ್ಕಲ್–ಪ್ರಸಿದ್ಧಕೃಷ್ಣ ಮುಖಾಮುಖಿ

  •  ಶುಭಮನ್ ಗಿಲ್ ಬಳಗಕ್ಕೆ ಸತತ ಗೆಲುವಿನ ತವಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.