ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ
ಪಿಟಿಐ ಚಿತ್ರಗಳು
ನವದೆಹಲಿ: ವಿರಾಟ್ ಕೊಹ್ಲಿ, ಯುವ ಬ್ಯಾಟರ್‌ಗಳಿಗಿಂತಲೂ ಅತ್ಯುತ್ತಮ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಬಲ್ಲರು. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸಂಯೋಜನೆಯು ಕೊಹ್ಲಿ ಅವರನ್ನು ರಕ್ಷಣಾತ್ಮಕ ಶೈಲಿಯಲ್ಲೇ ಬ್ಯಾಟಿಂಗ್ ಮಾಡುವಂತೆ ಮಾಡಿದೆ ಎಂದು ಮಾಜಿ ಕ್ರಿಕೆಟಿಗ ಆ್ಯರನ್ ಫಿಂಚ್ ಹೇಳಿದ್ದಾರೆ.
2021ರ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾಗೆ ಪ್ರಶಸ್ತಿ ಗೆದ್ದುಕೊಟ್ಟಿರುವ ನಾಯಕ ಫಿಂಚ್, ರೋಹಿತ್ ಶರ್ಮಾ ಅವರಂತಹ ಆಟಗಾರರು ನಿರಂತರವಾಗಿ ಆಪಾಯಕಾರಿಯಾಗಿ ಆಡಬಲ್ಲರು. ಆದರೆ ಅದರಿಂದ ಸ್ಥಿರ ಪ್ರದರ್ಶನದ ಮೇಲೆ ಪರಿಣಾಮ ಉಂಟಾಗಲಿದೆ ಎಂದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯ ಕಳೆದೆರಡು ಆವೃತ್ತಿಗಳಲ್ಲಿ ಬೀಸಾಟಕ್ಕೆ ಒತ್ತು ನೀಡಿರುವ ಕೊಹ್ಲಿ, 2023ರಲ್ಲಿ 140 ಹಾಗೂ 2024ರಲ್ಲಿ 154ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದ್ದಾರೆ.
ಇತರ ತಂಡಗಳಿಗೆ ಹೋಲಿಸಿದರೆ ಆರ್‌ಸಿಬಿಯ ಬೌಲಿಂಗ್ ಅಷ್ಟೇನೂ ಪರಿಣಾಮಕಾರಿಯಾಗಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕೊಹ್ಲಿಯು ತಮ್ಮ ಬ್ಯಾಟಿಂಗ್ ಶೈಲಿಯನ್ನು ಬದಲಿಸಿಕೊಳ್ಳುವ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಫಿಂಚ್, 'ಇದು ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ. ಕೊಹ್ಲಿಯಿಂದ ನೀವು 700 ಅಥವಾ 800 ರನ್ ಬಯಸುತ್ತೀರೋ ಅಥವಾ 400 ರನ್‌ಗೆ ತೃಪ್ತಿಪಟ್ಟುಕೊಳ್ಳುವಿರಾ? ಏಕೆಂದರೆ, ಕೊಹ್ಲಿ ಹೆಚ್ಚಿನ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಮಾಡಬೇಕು ಎಂದರೆ ಅವರು ಅದನ್ನು ಖಂಡಿತ ಮಾಡಬಲ್ಲರು. ಆದರೆ, ಅಷ್ಟೇ ಅಪಾಯವೂ ಇರುತ್ತದೆ. ಸ್ಥಿರತೆ ಕುಸಿಯಲಿದೆ' ಎಂದು ಹೇಳಿದ್ದಾರೆ.
ಪವರ್‌ಪ್ಲೇ ಅವಧಿಯಲ್ಲಿ ಪ್ರತಿ ತಂಡಗಳು ಹೇಗೆ ಆಡುತ್ತವೆ ಎಂಬುದು ಪಂದ್ಯದ ಚಿತ್ರಣವನ್ನೇ ಬದಲಿಸುತ್ತದೆ ಎಂಬುದನ್ನು ಒಪ್ಪಿಕೊಂಡಿರುವ ಫಿಂಚ್, ಪ್ರತಿ ಬ್ಯಾಟರ್ ವಿಭಿನ್ನ ಸಾಮರ್ಥ್ಯ ಹೊಂದಿರುತ್ತಾರೆ ಎಂದು ಪ್ರತಿಪಾದಿಸಿದ್ದಾರೆ.
'ಮೊದಲ ಎಸೆತದಿಂದಲೇ 200ರ ದರದಲ್ಲಿ ರನ್ ಗಳಿಸುವ ಆಟಗಾರರ ಬಗೆಗಿನ ವಿಚಾರ ಇದಲ್ಲ. ಒಂದೇ ತಂಡದಲ್ಲಿರುವ ಎಲ್ಲ ಬ್ಯಾಟರ್‌ಗಳಿಗೆ ಇದೇ ರೀತಿ ಆಡಬೇಕು ಎಂದು ಹೇಳುವುದು ಅವಾಸ್ತವಿಕವೆಂದು ಭಾವಿಸುತ್ತೇನೆ. ಏಕೆಂದರೆ ಅಂದುಕೊಂಡಂತೆ ಎಲ್ಲವೂ ಆಗದಿದ್ದಾಗ ಪಂದ್ಯ ಕಳೆದುಕೊಳ್ಳಬೇಕಾಗುತ್ತದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
'ಕಳೆದ ಎರಡು ಆವೃತ್ತಿಗಳಲ್ಲಿ ಆಟವು ಮತ್ತೊಂದು ಹಂತಕ್ಕೆ ಹೋಗಿದೆ ಎಂಬುದು ಗೊತ್ತಿದೆ. ಆದಾಗ್ಯೂ, ತಂಡಗಳಿಗೆ ಭದ್ರ ಅಡಿಪಾಯ ಬೇಕಾಗುತ್ತದೆ. ಇನಿಂಗ್ಸ್‌ನುದ್ದಕ್ಕೂ ಬ್ಯಾಟಿಂಗ್ ಮಾಡಬಲ್ಲ ಆಟಗಾರರನ್ನು ಹೊಂದಿರಬೇಕಾಗುತ್ತದೆ' ಎಂದು ಒತ್ತಿ ಹೇಳಿದ್ದಾರೆ.
ಬಿರುಸಿನ ಬ್ಯಾಟಿಂಗ್‌ಗೆ ಹೆಸರಾಗಿರುವ ರೋಹಿತ್ ಶರ್ಮಾ ಅವರ ಸ್ಟ್ರೈಕ್‌ರೇಟ್ ಐಪಿಎಲ್‌ನಲ್ಲಿ ಕೊಹ್ಲಿಯಷ್ಟೇ ಇದೆ. ಆದರೆ ಅವರು ತಮ್ಮ ಟಿ20 ಕ್ರಿಕೆಟ್ ಜೀವನದ ಕೊನೇ ಘಟ್ಟದಲ್ಲಿದ್ದಾಗ ಬಿರುಸಿನ ಬ್ಯಾಟಿಂಗ್ ಮೂಲಕ ಮಿಂಚಿದರು.
ರೋಹಿತ್ ಶರ್ಮಾ ಆ ರೀತಿಯ ಆಟವಾಡಿದಾಗಲೆಲ್ಲಾ, ಅವರ ಸುತ್ತಲೂ ಬ್ಯಾಟಿಂಗ್ ಮಾಡುತ್ತಿದ್ದವರನ್ನು ನೋಡಿ. ಅಡಿಪಾಯ ಹಾಕಬಲ್ಲ ಆಟಗಾರರು ತಂಡದಲ್ಲಿ ಇದ್ದ ಕಾರಣ, ರೋಹಿತ್ ಶರ್ಮಾ ನಿರ್ಭೀತಿಯಿಂದ ಬ್ಯಾಟಿಂಗ್ ಮಾಡಲು ಸಾಧ್ಯವಾಗಿದೆ ಎಂದು ಫಿಂಚ್ ಹೇಳಿದ್ದಾರೆ.
ಆರಂಭಿಕ ಆಘಾತ ಎದುರಾದರೂ, ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಲು ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ ಅಂತಹ ಬ್ಯಾಟರ್‌ಗಳು ಇದ್ದಾರೆ. ಟೀಂ ಇಂಡಿಯಾದಲ್ಲೂ, ವಿರಾಟ್ ಕೊಹ್ಲಿ ಇರುವ ಕಾರಣ ರೋಹಿತ್ ಲೀಲಾಜಾಲವಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಿದೆ ಎಂದು ಫಿಂಚ್ ಪ್ರತಿಪಾದಿಸಿದ್ದಾರೆ.
'ರೋಹಿತ್ ಶರ್ಮಾ ಬಿರುಸಿನ ಬ್ಯಾಟಿಂಗ್‌ಗೆ ಮುಂದಾದಾಗ, ಅವರ ನಂತರ ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಆಡುತ್ತಾರೆ. ಹಾಗಾಗಿ, ತಾವು ಯಾವುದೇ ತಪ್ಪು ಮಾಡಿದರೂ ಅದನ್ನು ಸರಿಪಡಿಸುವ ವ್ಯಕ್ತಿ ತನ್ನ ಹಿಂದೆ ಇದ್ದಾರೆ ಎಂದು ಹೇಳುವ ಸಾಮರ್ಥ್ಯ ರೋಹಿತ್‌ಗೆ ಇದೆ. ಹಾಗಂತ, ಬಿರುಸಾಗಿ ರನ್ ಗಳಿಸುವುದನ್ನು ಎಲ್ಲರಿಂದಲೂ ನಿರೀಕ್ಷಿಸಬಾರದು' ಎಂದಿದ್ದಾರೆ.
ಕೊಹ್ಲಿ 150ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದರೆ ಅವರ ಕೆಲಸ ಮುಗಿಯುತ್ತದೆ ಎಂಬುದಾಗಿ ಹೇಳಿರುವ ಫಿಂಚ್, 'ಕೊಹ್ಲಿ 140–150ರ ಸ್ಟ್ರೈಕ್‌ರೇಟ್‌ನಲ್ಲಿ ಖಂಡಿತ ಬ್ಯಾಟಿಂಗ್ ಮಾಡಬಲ್ಲರು. ಅದರೆ, ಉಳಿದೆಲ್ಲರೂ ಅವರತ್ತಲೇ ನಿರೀಕ್ಷೆ ಇಟ್ಟಿರುವಾಗ, ಕೊಹ್ಲಿ ಎಷ್ಟು ಸಲ ಅದೇ ರೀತಿ ಬ್ಯಾಟಿಂಗ್ ಮಾಡಲು ಮತ್ತು ತಂಡವನ್ನು ಅಪಾಯದಿಂದ ಪಾರು ಮಾಡಲು ಸಾಧ್ಯ?' ಎಂದು ಕೇಳಿದ್ದಾರೆ.
ಐಪಿಎಲ್‌ನಲ್ಲಿ ಸಾಧನೆ
ರೋಹಿತ್ ಶರ್ಮಾ
257 ಪಂದ್ಯ
252 ಇನಿಂಗ್ಸ್
6,628 ರನ್
29.72 ಸರಾಸರಿ
131.15 ಸ್ಟ್ರೈಕ್‌ರೇಟ್
2 ಶತಕ
43 ಅರ್ಧಶತಕ
ವಿರಾಟ್ ಕೊಹ್ಲಿ
252 ಪಂದ್ಯ
244 ಇನಿಂಗ್ಸ್
8004 ರನ್
38.67 ಸರಾಸರಿ
131.98 ಸ್ಟ್ರೈಕ್‌ರೇಟ್
8 ಶತಕ
55 ಅರ್ಧಶತಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.