ADVERTISEMENT

IPL 2025 | 3 - 4 ವರ್ಷ ಹಿಂದಿನ ರೋಹಿತ್‌ ಶರ್ಮಾ ಈಗ ಇಲ್ಲ: ಸಂಜಯ್‌ ಮಂಜ್ರೇಕರ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಮಾರ್ಚ್ 2025, 11:16 IST
Last Updated 30 ಮಾರ್ಚ್ 2025, 11:16 IST
<div class="paragraphs"><p>ರೋಹಿತ್‌ ಶರ್ಮಾ<br></p></div>

ರೋಹಿತ್‌ ಶರ್ಮಾ

   

ಅಹಮಬಾದಾದ್‌: ಐಪಿಎಲ್‌ನಲ್ಲಿ ಆಡುವ ಮುಂಬೈ ಇಂಡಿಯನ್ಸ್‌ ತಂಡದ ಆರಂಭಿಕ ಬ್ಯಾಟರ್‌ ರೋಹಿತ್‌ ಶರ್ಮಾ ಅವರ ಬ್ಯಾಟಿಂಗ್‌ ಕುರಿತು ಮಾಜಿ ಕ್ರಿಕೆಟಿಗ ಸಂಜಯ್‌ ಮಂಜ್ರೇಕರ್‌ ಮಾತನಾಡಿದ್ದಾರೆ.

3 - 4 ವರ್ಷಗಳ ಹಿಂದಿನ ರೋಹಿತ್‌ ಶರ್ಮಾ ಈಗ ಇಲ್ಲ ಎಂದಿರುವ ಅವರು, ಮುಂಬೈ ಬ್ಯಾಟರ್‌ ಕಠಿಣ ಅಭ್ಯಾಸದ ಮೂಲಕ ಲಯಕ್ಕೆ ಮರಳಬೇಕಿದೆ ಎಂದು ಸಲಹೆ ನೀಡಿದ್ದಾರೆ.

ADVERTISEMENT

ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ತಂಡ ಆಡಿರುವ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ವಿರುದ್ಧದ ಮೊದಲ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದ ರೋಹಿತ್‌, ನಂತರ ಗುಜರಾತ್‌ ಟೈಟನ್ಸ್‌ ಎದುರು ಕೇವಲ 8 ರನ್‌ ಗಳಿಸಿ ಮೊದಲ ಓವರ್‌ನಲ್ಲೇ ಔಟಾಗಿದ್ದರು.

ರೋಹಿತ್‌ ವೈಫಲ್ಯದ ಬಗ್ಗೆ ಮಾತನಾಡಿರುವ ಮಂಜ್ರೇಕರ್‌, ʼಮೂರು, ನಾಲ್ಕು ವರ್ಷಗಳ ಹಿಂದಿನ ರೋಹಿತ್‌ ಶರ್ಮಾ ಇವರಲ್ಲ. ಅವರು ಈಗ, ತಮ್ಮನ್ನು ತಾವು ಮುಂಜಾನೆಯೇ ಎದ್ದು ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕಾದ ಹಾಗೂ ಅತ್ಯುತ್ತಮ ಸಾಮರ್ಥ್ಯವನ್ನು ಹೊರತರಬೇಕಾದ ಹಂತ ತಲುಪಿದ್ದಾರೆ. ಇನ್ನೂ ತಮ್ಮ ಸ್ವಾಭಾವಿಕ ಪ್ರತಿಭೆಯ ಮೇಲೆಯೇ ಅವಲಂಬಿತರಾಗಿರುವುದರಿಂದ, ಆಟವು ಅವರ ಕೈಯಿಂದ ಜಾರುತ್ತಿದೆʼ ಎಂದು ಹೇಳಿದ್ದಾರೆ.

ಮುಂಬೈ ಬ್ಯಾಟರ್‌ಗಳ ಪ್ರದರ್ಶನದ ಕುರಿತು, ʼದಕ್ಷಿಣ ಆಫ್ರಿಕಾದ ರಿಯಾನ್‌ ರಿಕ್ಕೆಲ್ಟನ್‌ ಅವರು ಭಾರತದ ಪಿಚ್‌ಗಳಿಗೆ ಹೊಂದಿಕೊಳ್ಳಬೇಕಿದೆ. ಎಬಿ ಡಿ ವಿಲಿಯರ್ಸ್‌, ಹೆನ್ರಿಚ್‌ ಕ್ಲಾಸೆನ್‌ ಅವರಂತಹ ದಕ್ಷಿಣ ಆಫ್ರಿಕಾ ಕೆಲವೇ ಕೆಲವು ಬ್ಯಾಟರ್‌ಗಳು ಭಾರತದ ಪಿಚ್‌ಗಳಲ್ಲಿ ಯಶಸ್ಸು ಸಾಧಿಸಿದ್ದಾರೆʼ ಎಂದಿದ್ದಾರೆ.

ಮುಂದುವರಿದು, ʼರಿಕ್ಕೆಲ್ಟನ್‌ ಹೊರತುಪಡಿಸಿ, ತಿಲಕ್‌ ವರ್ಮಾ, ಸೂರ್ಯಕುಮಾರ್‌ ಯಾದವ್‌, ರಾಬಿನ್‌ ಮಿಂಚ್‌ ಅವರಂತಹ ಆಟಗಾರರು ಬ್ಯಾಟಿಂಗ್‌ ವಿಭಾಗದಲ್ಲಿದ್ದಾರೆ. ಆದಾಗ್ಯೂ, ಪರಿಪೂರ್ಣವಾಗಿದೆ ಎನಿಸುತ್ತಿಲ್ಲ. ಹೆಚ್ಚಿನವರು ಬ್ಯಾಟ್‌ಗೆ ಚೆಂಡು ಚೆನ್ನಾಗಿ ಬರುವ ಪಿಚ್‌ಗಳ ಮೇಲೆ ಅವಲಂಬಿತರಾಗಿದ್ದಾರೆʼ ಎಂದಿದ್ದಾರೆ.

ಅಹಮದಾಬಾದ್‌ ಪಿಚ್‌ನಲ್ಲಿ ಚೆಂಡು ಬೌನ್ಸ್‌ ಹಾಗೂ ವೇಗ ಪಡೆದುಕೊಳ್ಳುತ್ತಿತ್ತು. ಒಂದು ವೇಳೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ 197 ರನ್‌ ಗುರಿ ಇದ್ದಿದ್ದರೆ, ಮುಂಬೈ ಇಂಡಿಯನ್ಸ್‌ ಖಂಡಿತ ಜಯದ ಹತ್ತಿರಕ್ಕೆ ಹೋಗುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ಎದುರು ಮುಂಬೈ ತಂಡ, 36 ರನ್‌ಗಳ ಸೋಲು ಕಂಡಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಆತಿಥೇಯ ಗುಜರಾತ್‌, ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 196 ರನ್‌ ಕಲೆಹಾಕಿತ್ತು. ಈ ಮೊತ್ತ ಬೆನ್ನತ್ತಿದ ಮುಂಬೈ, 6 ವಿಕೆಟ್‌ಗೆ 160 ರನ್‌ ಗಳಿಸಲಷ್ಟೇ ಶಕ್ತವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.