ADVERTISEMENT

IPL 2025: ಒಂದೇ ಓವರ್‌ನಲ್ಲಿ 3 ರನೌಟ್; ಐಪಿಎಲ್‌ನಲ್ಲಿ ಈ ರೀತಿ ಆದದ್ದು ಎರಡನೇ ಸಲ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಏಪ್ರಿಲ್ 2025, 12:36 IST
Last Updated 14 ಏಪ್ರಿಲ್ 2025, 12:36 IST
<div class="paragraphs"><p>ಡೆಲ್ಲಿ ಕ್ಯಾಪಿಟಲ್ಸ್‌ ಬ್ಯಾಟರ್‌ ಅಶುತೋಷ್‌ ಶರ್ಮಾ ರನೌಟ್‌ ಆದಾಗ</p></div>

ಡೆಲ್ಲಿ ಕ್ಯಾಪಿಟಲ್ಸ್‌ ಬ್ಯಾಟರ್‌ ಅಶುತೋಷ್‌ ಶರ್ಮಾ ರನೌಟ್‌ ಆದಾಗ

   

ಪಿಟಿಐ ಚಿತ್ರ

ನವದೆಹಲಿ: ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್‌ (ಡಿಸಿ) ವಿರುದ್ಧ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡವು 12 ರನ್‌ ಅಂತರದ ರೋಚಕ ಜಯ ಸಾಧಿಸಿತು.

ADVERTISEMENT

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಮುಂಬೈ, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 205 ರನ್‌ ಕಲೆಹಾಕಿತ್ತು. ಗುರಿ ಬೆನ್ನತ್ತಿದ ಡೆಲ್ಲಿ, 18 ಓವರ್‌ಗಳ ಅಂತ್ಯಕ್ಕೆ 7 ವಿಕೆಟ್‌ ಕಳೆದುಕೊಂಡು 183 ರನ್‌ ಗಳಿಸಿತ್ತು.

ಟೂರ್ನಿಯಲ್ಲಿ ಡೆಲ್ಲಿ ಪಡೆಗೆ ಮೊದಲ ಗೆಲುವು ತಂದುಕೊಟ್ಟಿದ್ದ ಅಶುತೋಷ್‌ ಶರ್ಮಾ ಹಾಗೂ ಮಿಚೇಲ್‌ ಸ್ಟಾರ್ಕ್‌ ಕ್ರೀಸ್‌ನಲ್ಲಿದ್ದರು. ಜಯಕ್ಕೆ 12 ಎಸೆತಗಳಲ್ಲಿ 23 ರನ್‌ ಬೇಕಾಗಿತ್ತು.

ಮುಂಬೈ ವೇಗಿ ಜಸ್‌ಪ್ರೀತ್‌ ಬೂಮ್ರಾ 19ನೇ ಓವರ್‌ ಬೌಲಿಂಗ್‌ ಮಾಡಿದರು. ಮೊದಲ ಎಸೆತದಲ್ಲಿ ಯಾರ್ಕರ್‌ ಪ್ರಯೋಗಿಸಿದ ಬೂಮ್ರಾ ರನ್‌ ಬಿಟ್ಟುಕೊಡಲಿಲ್ಲ. ಆದರೆ, ಎರಡು ಮತ್ತು ಮೂರನೇ ಎಸೆತಗಳಲ್ಲಿ ಅಶುತೋಷ್‌ ಬೌಂಡರಿಗಳನ್ನು ಬಾರಿಸಿದರು. ನಾಲ್ಕನೇ ಎಸೆತವನ್ನು ಡೀಪ್‌ ಬ್ಯಾಕ್ವರ್ಡ್‌ ಪಾಯಿಂಟ್‌ನತ್ತ ಆಡಿ, ಎರಡು ರನ್‌ಗಾಗಿ ಓಡುವ ವೇಳೆ ರನೌಟ್‌ ಆದರು.

ನಂತರ ಬಂದ ಕುಲದೀಪ್‌ ಯಾದವ್‌ 5ನೇ ಎಸೆತವನ್ನು ಲಾಂಗ್‌ ಆನ್‌ನತ್ತ ಬಾರಿಸಿ ಒಂದು ರನ್‌ ಗಳಿಸಿದರು. ಆದರೆ, ಎರಡನೇ ರನ್‌ಗಾಗಿ ಓಡುವ ವೇಳೆ ರನೌಟ್‌ ಆದರು. ಕೊನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಮೋಹಿತ್‌ ಶರ್ಮಾ ಆರನೇ ಎಸೆತದಲ್ಲಿ ರನೌಟ್‌ ಆದರು.

ಹೀಗಾಗಿ, ಇನ್ನೂ ಒಂದು ಓವರ್‌ ಬಾಕಿ ಇರುವಂತೆಯೇ ಮುಂಬೈ ತಂಡಕ್ಕೆ 12 ರನ್‌ ಅಂತರದ ಜಯ ಒಲಿಯಿತು.

ಟೂರ್ನಿಯಲ್ಲಿ ಆರು ಪಂದ್ಯಗಳನ್ನು ಆಡಿರುವ ಮುಂಬೈ ತಂಡಕ್ಕೆ ದೊರೆತ ಎರಡನೇ ಗೆಲುವು ಇದು. ಆದರೆ, ಮೊದಲ ನಾಲ್ಕೂ ಪಂದ್ಯಗಳನ್ನು ಗೆದ್ದುಕೊಂಡಿದ್ದ ಡೆಲ್ಲಿ, ಮೊದಲ ಸೋಲು ಅನುಭವಿಸಬೇಕಾಯಿತು. ಅಷ್ಟಲ್ಲದೆ, ಪಾಯಿಂಟ್‌ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಕುಸಿಯಿತು.

2008ರಲ್ಲೂ ಮೂರು ರನೌಟ್
ಈ ರೀತಿ ಒಂದೇ ಓವರ್‌ನಲ್ಲಿ ಮೂರು ರನೌಟ್‌ ಆದದ್ದು ಐಪಿಎಲ್‌ನಲ್ಲಿ ಎರಡನೇ ಸಲ. 2008ರಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ಕಿಂಗ್ಸ್‌ ಇಲವೆನ್‌ ಪಂಜಾಬ್‌ (ಪಂಜಾಬ್‌ ಕಿಂಗ್ಸ್‌) ತಂಡಗಳು ಮುಂಬೈನಲ್ಲಿ ಮುಖಾಮುಖಿಯಾದಾಗ ಈ ರೀತಿ ಆಗಿತ್ತು.

ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್‌, 20 ಓವರ್‌ಗಳಲ್ಲಿ 4 ವಿಕೆಟ್‌ಗೆ 189 ರನ್‌ ಗಳಿಸಿತ್ತು. 190 ರನ್‌ಗಳ ಗುರಿ ಬೆನ್ನತ್ತಿದ್ದ ಮುಂಬೈ 19 ಓವರ್‌ಗಳಲ್ಲಿ 7 ವಿಕೆಟ್‌ಗೆ 171 ರನ್‌ ಕಲೆಹಾಕಿತ್ತು. 

ಪಂಜಾಬ್‌ ಪರ 20ನೇ ಓವರ್‌ ಬೌಲಿಂಗ್‌ ಮಾಡಿದ ವಿಕ್ರಮ್‌ ಸಿಂಗ್, ಮೊದಲ ಎಸೆತವನ್ನು ನೋಬಾಲ್‌ ಮಾಡಿದ್ದರು. ಆದರೆ, ಕ್ರೀಸ್‌ನಲ್ಲಿದ್ದ ಸಿದ್ಧಾರ್ಥ್‌ ಚಿಟ್ನಿಸ್‌ ಆ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದರು. ನಂತರದ ಎಸೆತದಲ್ಲಿ ಬೌಂಡರಿ ಬಾರಿಸಿದರು. ಬಳಿಕ ಎರಡು ರನ್‌ ಕದಿಯುವ ಯತ್ನದಲ್ಲಿ ಚಿಟ್ನಿಸ್‌ ರನೌಟ್‌ ಆಗಿದ್ದರು.

ನಂತರ ಕ್ರೀಸ್‌ಗೆ ಬಂದ ಆಶಿಷ್‌ ನೆಹ್ರಾ, 3ನೇ ಎಸೆತವನ್ನು ಬ್ಯಾಟ್‌ಗೆ ತಾಗಿಸಲು ವಿಫಲರಾದರೂ, ಒಂಟಿ ರನ್‌ (ಬೈ) ಓಡಿದ್ದರು. ನಾಲ್ಕನೇ ಎಸತದಲ್ಲಿ ಮತ್ತೊಂದು ರನೌಟ್‌ ಆಗಿತ್ತು. ದಿಲ್ಹಾರ ಫೆರ್ನಾಂಡೊ ಜೊತೆ ಎರಡು ರನ್‌ ಓಡಲು ಯತ್ನಿಸಿ ನೆಹ್ರಾ ರನೌಟ್‌ ಆಗಿದ್ದರು. 5ನೇ ಎಸೆತದಲ್ಲಿ ಎರಡು ರನ್‌ ಗಳಿಸಿದ ವಿಕ್ರಾಂತ್‌ ಯೆಲಿಗಟಿ, ಕೊನೇ ಚೆಂಡಿನಲ್ಲಿ ಗೆಲ್ಲಲು ಎರಡು ರನ್‌ ಬೇಕಿದ್ದಾಗ ರನೌಟ್ ಆದರು.

ಹೀಗಾಗಿ, ಪಂಜಾಬ್‌ ಪಡೆ 1 ರನ್ ಅಂತರದ ರೋಚಕ ಜಯ ಸಾಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.