ಶುಭಮನ್ ಗಿಲ್, ಜಾಸ್ ಬಟ್ಲರ್ ಹಾಗೂ ಸಾಯಿ ಸುದರ್ಶನ್
ಪಿಟಿಐ ಚಿತ್ರಗಳು
ಅಹಮದಾಬಾದ್: ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ಸಾಯಿ ಸುದರ್ಶನ್, ಶುಭಮನ್ ಗಿಲ್ ಮತ್ತು ಜಾಸ್ ಬಟ್ಲರ್ ಅವರ ಅಬ್ಬರದ ಬ್ಯಾಟಿಂಗ್ ಬಲದಿಂದ ಆತಿಥೇಯ ಗುಜರಾತ್ ಟೈಟನ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್‌ಗೆ 225 ರನ್‌ಗಳ ಬೃಹತ್ ಗುರಿ ನೀಡಿದೆ.
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೈಟನ್ಸ್‌ಗೆ ಎಡಗೈ ಬ್ಯಾಟರ್ ಸುದರ್ಶನ್ ಮತ್ತು ನಾಯಕ ಗಿಲ್ ಉತ್ತಮ ಆರಂಭ ನೀಡಿದರು. ಬಳಿಕ ಬಂದ ಅನುಭವಿ ಬಟ್ಲರ್, ತಂಡದ ಮೊತ್ತ ದ್ವಿಶತಕದ ಗಡಿ ದಾಟುವಂತೆ ನೋಡಿಕೊಂಡರು.
ಕೇವಲ 23 ಎಸೆತಗಳಲ್ಲಿ 48 ರನ್ ಗಳಿಸಿದ ಸುದರ್ಶನ್, ತಂಡದ ಮೊತ್ತ 6.5 ಓವರ್‌ಗಳಲ್ಲೇ 87 ರನ್ ಆಗಿದ್ದಾಗ ಔಟಾದರು. ಅದರೊಂದಿಗೆ, ಟೂರ್ನಿಯಲ್ಲಿ 6ನೇ ಅರ್ಧಶತಕ ಬಾರಿಸುವ ಅವಕಾಶ ತಪ್ಪಿಸಿಕೊಂಡರು. ನಂತರ ಗಿಲ್ ಮತ್ತು ಬಟ್ಲರ್ ಗುಡುಗಿದರು.
ಗಿಲ್ 38 ಎಸೆತಗಳಲ್ಲಿ 76 ರನ್ ಬಾರಿಸಿದರೆ, ಬಟ್ಲರ್ 37 ಎಸೆತಗಳಲ್ಲಿ 64 ರನ್ ಚಚ್ಚಿದರು.
ವಾಷಿಂಗ್ಟನ್ ಸುಂದರ್ (21 ರನ್), ರಾಹುಲ್ ತೆವಾಟಿಯಾ (6 ರನ್) ಹಾಗೂ ರಶೀದ್ ಖಾನ್ (0) ಕೊನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದ್ದರಿಂದ ಇನ್ನಷ್ಟು ರನ್ ಗಳಿಸುವ ಅವಕಾಶ ಕೈ ತಪ್ಪಿತು. ಅಂತಿವಾಗಿ ಆತಿಥೇಯ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 224 ರನ್ ಗಳಿಸಿತು.
ರೈಸರ್ಸ್ ಪರ ಜಯದೇವ್ ಉನದ್ಕಟ್ ಮೂರು ವಿಕೆಟ್ ಪಡೆದರೆ, ನಾಯಕ ಪ್ಯಾಟ್ ಕಮಿನ್ಸ್ ಹಾಗೂ ಜೀಷನ್ ಅನ್ಸಾರಿ ಒಂದೊಂದ ವಿಕೆಟ್ ಕಿತ್ತರು.
ಈ ಪಂದ್ಯವು ಎರಡೂ ತಂಡಗಳಿವೆ ಮಹತ್ವದ್ದಾಗಿದೆ. ಈ ಆವೃತ್ತಿಯ್ಲಲಿ ಆಡಿರುವ 9 ಪಂದ್ಯಗಳಲ್ಲಿ ಆರರಲ್ಲಿ ಗೆದ್ದು, ಮೂರರಲ್ಲಿ ಸೋತಿರುವ ಆತಿಥೇಯ ತಂಡ, ಅಗ್ರ ನಾಲ್ಕರಲ್ಲಿ ಸ್ಥಾನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ತವರಿನಂಗಳದಲ್ಲಿ ಗೆಲ್ಲುವ ಛಲದಲ್ಲಿದೆ.
ರೈಸರ್ಸ್ ಕೂಡ ಇಷ್ಟೇ ಪಂದ್ಯಗಳನ್ನು ಆಡಿದ್ದು, ಮೂರರಲ್ಲಷ್ಟೇ ಜಯ ಕಂಡಿದೆ. ಉಳಿದಿರುವ ತನ್ನ ಪಾಲಿನ ಐದೂ ಪಂದ್ಯಗಳನ್ನು ಗೆಲ್ಲಲೇಬೇಕಾದ ಸ್ಥಿತಿಯಲ್ಲಿರುವುದರಿಂದ, ಇಂದಿನ ಪಂದ್ಯ ಮಾಡು ಇಲ್ಲವೆ ಮಡಿ ಎಂಬಂತಾಗಿದೆ.
ಹನ್ನೊಂದರ ಬಳಗ
ಗುಜರಾತ್ ಟೈಟನ್ಸ್: ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಜಾಸ್ ಬಟ್ಲರ್, ವಾಷಿಂಗ್ಟನ್ ಸುಂದರ್, ರಾಹುಲ್ ತೆವಾಟಿಯಾ, ಶಾರುಖ್ ಖಾನ್, ರಶೀದ್ ಖಾನ್, ಸಾಯಿ ಕಿಶೋರ್, ಗೆರಾಲ್ಡ್ ಕೋಜಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ
ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಹೆನ್ರಿಚ್ ಕ್ಲಾಸೆನ್, ಅನಿಕೇತ್ ವರ್ಮಾ, ಕಮಿಂದು ಮೆಂಡಿಸ್, ನಿತೀಶ್ ಕುಮಾರ್ ರೆಡ್ಡಿ, ಪ್ಯಾಟ್ ಕಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಜಯದೇವ್ ಉನದ್ಕಟ್, ಜೀಷನ್ ಅನ್ಸಾರಿ, ಮೊಹಮ್ಮದ್ ಶಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.