ADVERTISEMENT

IPL 2026 Auction: ಕೋಲ್ಕತ್ತಕ್ಕೆ ಗ್ರೀನ್; ಕಾಶ್ಮೀರದ ನಬಿಗೆ ಅದೃಷ್ಟ

ಐಪಿಎಲ್ ಮಿನಿ ಹರಾಜು l ಶ್ರೀಲಂಕಾದ ಪಥಿರಾಣಗೆ ₹18 ಕೋಟಿ l ಪ್ರಶಾಂತ್‌, ಕಾರ್ತಿಕ್‌ಗೆ ಬಂಪರ್‌ l ಆರ್‌ಸಿಬಿ ತಂಡಕ್ಕೆ ಮಂಗೇಶ್‌

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 0:30 IST
Last Updated 17 ಡಿಸೆಂಬರ್ 2025, 0:30 IST
<div class="paragraphs"><p>ಕ್ಯಾಮರೂನ್ ಗ್ರೀನ್</p></div>

ಕ್ಯಾಮರೂನ್ ಗ್ರೀನ್

   

ಅಬುಧಾಬಿ: ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಪ್ರತಿವರ್ಷದಂತೆ ಈ ಬಾರಿಯೂ ದೊಡ್ಡ ಮೊತ್ತವನ್ನು ನೀಡಿ ಆಟಗಾರರನ್ನು ಖರೀದಿಸುವ ‘ಸಂಪ್ರದಾಯ’ ಮುಂದುವರಿಸಿತು. ಈ ಸಲ ಆಸ್ಟ್ರೇಲಿಯಾ ಆಲ್‌ರೌಂಡರ್ ಕ್ಯಾಮರಾನ್ ಗ್ರೀನ್ ಅವರನ್ನು ತನ್ನ ತೆಕ್ಕೆಗೆಳೆದುಕೊಂಡಿತು. 

ಮಂಗಳವಾರ ನಡೆದ  ಐಪಿಎಲ್ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಯಲ್ಲಿ ಮೊದಲೇ ನಿರೀಕ್ಷಿಸಿದಂತೆ ಗ್ರೀನ್ ಅವರು ಅತ್ಯಧಿಕ ಮೊತ್ತ ಪಡೆದರು. ಅವರಿಗೆ ಕೋಲ್ಕತ್ತ ತಂಡವು ₹25.20 ಕೋಟಿ ನೀಡಿ ಖರೀದಿಸಿತು. ಶ್ರೀಲಂಕಾದ ವೇಗಿ ಮಥೀಶ ಪಥಿರಾಣ ಅವರನ್ನೂ ಕೆಕೆಆರ್‌ ತಂಡವು ₹ 18 ಕೋಟಿಗೆ ತನ್ನ ಬಳಗಕ್ಕೆ ಸೇರಿಸಿಕೊಂಡಿತು. 

ADVERTISEMENT

ಇನ್ನೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಯಥಾಪ್ರಕಾರ ಅಚ್ಚರಿಯ ಆಯ್ಕೆ ಮಾಡಿಕೊಂಡಿತು. ಪ್ರತಿ ಸಲವೂ ಅನುಭವಿ ಆಟಗಾರರನ್ನು ಆಯ್ಕೆ ಮಾಡುತ್ತಿದ್ದ ತಂಡವು ಈ ಬಾರಿ ಉದಯೋನ್ಮುಖ ಪ್ರತಿಭೆಗಳಿಗೆ ಮಣೆ ಹಾಕಿತು. ಉತ್ತರಪ್ರದೇಶದ 20 ವರ್ಷದ ಎಡಗೈ ಸ್ಪಿನ್ನರ್ ಪ್ರಶಾಂತ್ ವೀರ್ ಮತ್ತು 19 ವರ್ಷದ ವಿಕೆಟ್‌ಕೀಪರ್ –ಬ್ಯಾಟರ್, ರಾಜಸ್ಥಾನದ ಕಾರ್ತಿಕ್ ಶರ್ಮಾ ಅವರನ್ನು ಚೆನ್ನೈ ಖರೀದಿಸಿತು. ಟೂರ್ನಿಯ ಇತಿಹಾಸದಲ್ಲಿ ಅತಿ ದೊಡ್ಡ ಮೌಲ್ಯ ಪಡೆದ ‘ಅನ್‌ಕ್ಯಾಪ್ಡ್‌’ ಆಟಗಾರರೆಂಬ ಹೆಗ್ಗಳಿಕೆ ಇವರದ್ದಾಯಿತು. ಅವರ ಮೂಲಬೆಲೆಯು ₹ 30 ಲಕ್ಷ ನಿಗದಿ ಯಾಗಿತ್ತು. ಜಮ್ಮು–ಕಾಶ್ಮೀರದ ವೇಗಿ ಅಕೀಬ್ ನಬಿ ದಾರ್ ಅವರು ಡೆಲ್ಲಿ ಕ್ಯಾಪಿಟಲ್ಸ್‌ (₹ 8.40 ಕೋಟಿ) ತಂಡಕ್ಕೆ ಸೇರ್ಪಡೆಯಾದರು. ಅವರ ಮೂಲಬೆಲೆ ₹ 30 ಲಕ್ಷವಾಗಿತ್ತು. 

ಗ್ರೀನ್ ಅವರು ಆಸ್ಟ್ರೇಲಿಯದವರೇ ಆದ ಮಿಚೆಲ್ ಸ್ಟಾರ್ಕ್ (₹ 24.75 ಕೋಟಿ) ಅವರ ದಾಖಲೆಯನ್ನು ಮೀರಿನಿಂತರು. ಕೋಲ್ಕತ್ತ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಗ್ರೀನ್ ಅವರನ್ನು ಖರೀದಿಸಲು ತೀವ್ರ ಪೈಪೋಟಿ ನಡೆಯಿತು. ಕೊನೆಗೂ ಕೋಲ್ಕತ್ತ ಮೇಲುಗೈ ಸಾಧಿಸಿತು. ಐಪಿಎಲ್ ಗರಿಷ್ಠ ವೇತನ ನಿಯಮದ ಪ್ರಕಾರ ಗ್ರೀನ್ ಅವರಿಗೆ ಪ್ರಸಕ್ತ ಋತುವಿಗೆ ₹ 18 ಕೋಟಿ ಮಾತ್ರ ಸಂದಾಯವಾಗಲಿದೆ.

ಉಳಿದ ಹಣವು ಬಿಸಿಸಿಐ ಆಟಗಾರರ ಅಭಿವೃದ್ಧಿ ಕಾರ್ಯಕ್ರಮ ನಿಧಿಗೆ ಸೇರಲಿದೆ. ಗ್ರೀನ್ ಅವರು ಈ ಹಿಂದೆ ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ತಂಡಗಳಲ್ಲಿಯೂ ಆಡಿದ್ದರು.  ಐಪಿಎಲ್‌ನಲ್ಲಿ ಅವರು 29 ಪಂದ್ಯಗಳಿಂದ 707 ರನ್ ಗಳಿಸಿದ್ದು, 16 ವಿಕೆಟ್ ಕೂಡ ಪಡೆದಿದ್ದಾರೆ. 

ಕೋಲ್ಕತ್ತ ತಂಡವು ತನ್ನ ನಿಕಟಪೂರ್ವ ಆಟಗಾರ ವೆಂಕಟೇಶ್ ಅಯ್ಯರ್ ಅವರ ಖರೀದಿಗಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದೊಂದಿಗೆ ಪೈಪೋಟಿ ನಡೆಸಿತು. ಬೆಂಗಳೂರು ತಂಡವು ₹7 ಕೋಟಿಗೆ ಅಯ್ಯರ್ ಅವರನ್ನು ಖರೀದಿಸುವಲ್ಲಿ ಯಶಸ್ವಿ ಯಾಯಿತು. ನಂತರ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡಗಳ ಸ್ಪರ್ಧೆಯನ್ನು ಮೀರಿ ನಿಂತ ಕೋಲ್ಕತ್ತ,
ವೇಗಿ ಮಥೀಶ ಪಥಿರಾಣ ಅವರನ್ನು ಖರೀದಿಸಿತು.

ದಕ್ಷಿಣ ಆಫ್ರಿಕಾದ ಬ್ಯಾಟರ್ ಡೇವಿಡ್ ಮಿಲ್ಲರ್ (₹ 2 ಕೋಟಿ) ಮತ್ತು ಕ್ವಿಂಟನ್ ಡಿ ಕಾಕ್ (₹ 1 ಕೋಟಿ) ಅವರು ಕ್ರಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್‌ಗೆ ಸೇರಿದರು.

ಬಿಡ್‌ ನಲ್ಲಿ 246 ಭಾರತೀಯ ಮತ್ತು 113 ವಿದೇಶಿ ಆಟಗಾರರಿದ್ದರು. 10 ಫ್ರ್ಯಾಂಚೈಸಿಗಳು ಒಟ್ಟು 77 ಸ್ಥಾನಗಳಿಗಾಗಿ ಆಟಗಾರರನ್ನು ಖರೀದಿಸಿದವು. ಅದರಲ್ಲಿ 31 ವಿದೇಶಿ ಆಟಗಾರರಿಗೆ ಮೀಸಲಾಗಿದ್ದವು. 

ಪೂಂಜ, ದುಬೆಗೆ ಅವಕಾಶ

ಕರ್ನಾಟಕದ ಯಶರಾಜ್ ಪೂಂಜ, ಪ್ರವೀಣ ದುಬೆ ಅವರು ಐಪಿಎಲ್‌ ಮಿನಿ ಹರಾಜಿನಲ್ಲಿ ಕ್ರಮವಾಗಿ ರಾಜಸ್ಥಾನ ರಾಯಲ್ಸ್‌ ಮತ್ತು ಪಂಜಾಬ್‌ ಕಿಂಗ್ಸ್‌ ತಂಡಗಳ ಪಾಲಾದರು. ಅವರಿಬ್ಬರೂ ತಮ್ಮ ಮೂಲಬೆಲೆಗೆ
(ತಲಾ ₹30 ಲಕ್ಷ) ತಂಡಗಳನ್ನು ಸೇರಿಕೊಂಡರು.

ಆದರೆ, ಮಯಂಕ್‌ ಅಗರವಾಲ್ ಸೇರಿ ರಾಜ್ಯದ ಹಲವು ಆಟಗಾರರು ‘ಅನ್‌ಸೋಲ್ಡ್‌’ ಆದರು. ಅಭಿನವ್‌ ಮನೋಹರ್‌, ವಿದ್ವತ್‌ ಕಾವೇರಪ್ಪ, ವಿದ್ಯಾಧರ ಪಾಟೀಲ, ಕೆ.ಸಿ. ಕಾರ್ಯಪ್ಪ, ಮನೋಜ್‌ ಭಾಂಡಗೆ, ಮನ್ವಂತ್‌ ಕುಮಾರ್, ಅಭಿಲಾಷ್‌ ಶೆಟ್ಟಿ, ಕೆ.ಎಲ್‌.ಶ್ರೀಜಿತ್‌ ಮುಂತಾ ದವರ ಖರೀದಿಗೆ ಫ್ರಾಂಚೈಸಿಗಳು ಆಸಕ್ತಿ ತೋರಲಿಲ್ಲ.

ಐಪಿಎಲ್ ಮಿನಿ ಹರಾಜು: ಆಟಗಾರರು ಪಡೆದ ಮೌಲ್ಯ (₹ ಕೋಟಿಗಳಲ್ಲಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.