ADVERTISEMENT

IPL-2020 | SRH vs RR: ರಾಯಲ್ಸ್‌ಗೆ ಗೆಲುವು ತಂದುಕೊಟ್ಟ ರಾಹುಲ್–ರಿಯಾನ್

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2020, 15:16 IST
Last Updated 11 ಅಕ್ಟೋಬರ್ 2020, 15:16 IST
ರಾಹುಲ್‌ ತೆವಾಟಿಯಾ
ರಾಹುಲ್‌ ತೆವಾಟಿಯಾ   

ದುಬೈ:ಪ್ರಮುಖ ಬ್ಯಾಟ್ಸ್‌ಮನ್‌ಗಳು ಕೈಕೊಟ್ಟರೂ ಕೊನೆಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿದ ರಾಹುಲ್‌ ತೆವಾಟಿಯಾ ಮತ್ತು ರಿಯಾನ್ ಪರಾಗ್‌ ಜೋಡಿ ರಾಜಸ್ಥಾನ ರಾಯಲ್ಸ್‌ಗೆ ಗೆಲುವು ತಂದುಕೊಟ್ಟಿತು.

ದುಬೈಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಸನ್‌ರೈಸರ್ಸ್‌ ಹೈದರಾಬಾರ್‌ ತಂಡ ನಾಯಕ ಡೇವಿಡ್‌ ವಾರ್ನರ್‌ ಮತ್ತುಮನೀಷ್ ಪಾಂಡೆ ಗಳಿಸಿದ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 158ರನ್‌ ಕಲೆಹಾಕಿತ್ತು.

ವಾರ್ನರ್‌ 38 ಎಸೆತಗಳಲ್ಲಿ 48 ರನ್‌ ಗಳಿಸಿದರೆ, ಪಾಂಡೆ 44 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್‌ ಸಹಿತ 54 ರನ್‌ ಬಾರಿಸಿದರು.

ADVERTISEMENT

ಗುರಿ ಬೆನ್ನತ್ತಿದ ರಾಯಲ್ಸ್‌, ತಂಡದ ಮೊತ್ತ 78 ರನ್‌ ಆಗುವಷ್ಟರಲ್ಲಿ ಪ್ರಮುಖ 5 ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ ಸೇರಿಕೊಂಡಿದ್ದರು. ನಾಯಕ ಸ್ಟೀವ್‌ ಸ್ಮಿತ್‌ (5), ಬೆನ್‌ ಸ್ಟೋಕ್ಸ್‌ (5), ಜಾಸ್‌ ಬಟ್ಲರ್‌ (16) ಬೇಗನೆ ನಿರ್ಗಮಿಸಿದ್ದರು. 4ನೇ ವಿಕೆಟ್‌ಗೆ 37 ರನ್‌ ಜೊತೆಯಾಟವಾಡಿದ್ದ ರಾಬಿನ್‌ ಉತ್ತಪ್ಪ (18) ಹಾಗೂ ಸಂಜು ಸ್ಯಾಮ್ಸನ್‌ (26) ಅವರೂ ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸುವಲ್ಲಿ ವಿಫಲರಾಗಿದ್ದರು.

ಈ ವೇಳೆ ಜೊತೆಯಾದ ರಿಯಾನ್‌ ಮತ್ತು ತೆವಾಟಿಯಾ ಜೋಡಿ ಜಯವನ್ನು ರೈಸರ್ಸ್‌ ಕೈಯಿಂದ ಕಸಿದುಕೊಂಡಿತು. ಈ ಇಬ್ಬರೂ ಕೇವಲ 47 ಎಸೆತಗಳಲ್ಲಿ 85 ರನ್‌ ಬಾರಿಸಿದರು. ತೆವಾಟಿಯಾ 28 ಎಸೆತಗಳಲ್ಲಿ 4 ಸಿಕ್ಸರ್‌ ಮತ್ತು 2 ಬೌಂಡರಿ ಸಹಿತ 45 ರನ್‌ ಗಳಿಸಿದರೆ, ರಿಯಾನ್‌ 26 ಎಸೆತಗಳಲ್ಲಿ 42 ರನ್‌ ಬಾರಿಸಿದರು. ಹೀಗಾಗಿ ರಾಯಲ್ಸ್‌ ಪಡೆ ಇನ್ನೂ ಒಂದು ಎಸೆತ ಬಾಕಿ ಇರುವಂತೆಯೇ 163 ರನ್‌ ಗಳಿಸಿ 5 ವಿಕೆಟ್‌ ಅಂತರದ ಜಯ ಸಾಧಿಸಿತು.

ಕಳೆದ 4 ಪಂದ್ಯಗಳಲ್ಲಿ ಸೋಲು ಕಂಡಿದ್ದ ರಾಯಲ್ಸ್‌ ಈ ಪಂದ್ಯದ ಮೂಲಕ ಜಯದ ಹಳಿಗೆ ಮರಳಿದೆ. ರೈಸರ್ಸ್‌ ಹಾಗೂರಾಯಲ್ಸ್‌ ಟೂರ್ನಿಯಲ್ಲಿ‌ ಇದುವರೆಗೆ ತಲಾ 7 ಪಂದ್ಯಗಳನ್ನು ಆಡಿದ್ದು, 3 ಗೆಲುವು ಸಾಧಿಸಿ ಕ್ರಮವಾಗಿ 6 ಮತ್ತು 7ನೇ ಸ್ಥಾನಗಳಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.