ADVERTISEMENT

ಆಯ್ಕೆಗಾರರಿಂದ ಪದೇ ಪದೇ ನಿರಾಕರಿಸಲ್ಪಟ್ಟರೂ ತನಗೆ ಬೇಸರವಿಲ್ಲ: ಉನದ್ಕತ್

ಪಿಟಿಐ
Published 13 ಜೂನ್ 2021, 12:07 IST
Last Updated 13 ಜೂನ್ 2021, 12:07 IST
ಜಯದೇವ್ ಉನದ್ಕತ್‌
ಜಯದೇವ್ ಉನದ್ಕತ್‌    

ರಾಜ್‌ಕೋಟ್‌: ಭಾರತ ಕ್ರಿಕೆಟ್ ತಂಡದ ಆಯ್ಕೆಗಾರರಿಂದ ಪದೇ ಪದೇ ನಿರಾಕರಿಸಲ್ಪಟ್ಟರೂ ತನಗೆ ಬೇಸರವಿಲ್ಲ; ನನಗೆ ಸಾಕಷ್ಟು ಅನುಭವ ನೀಡಿರುವ ಆಟದಲ್ಲಿ ಮುಂದುವರಿಯುತ್ತೇನೆ ಎಂದು ಎಡಗೈ ಮಧ್ಯಮವೇಗಿ ಜಯದೇವ್ ಉನದ್ಕತ್ ಹೇಳಿದ್ದಾರೆ.

ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆ ಮಾಡಲಾದ ತಂಡದ ಕಾಯ್ದಿಟ್ಟ ಆಟಗಾರರ ಪಟ್ಟಿಯಲ್ಲೂ ಉನದ್ಕತ್ ಅವರಿಗೆ ಸ್ಥಾನ ಲಭಿಸಿರಲಿಲ್ಲ. ಮುಂದಿನ ತಿಂಗಳು ಶ್ರೀಲಂಕಾದಲ್ಲಿ ಆ ತಂಡದ ಎದುರು ಆಡುವ ಶಿಖರ್ ಧವನ್ ಬಳಗದಲ್ಲೂ ಅವಕಾಶ ದೊರೆತಿಲ್ಲ.

2020ರ ರಣಜಿ ಟ್ರೋಫಿ ಟೂರ್ನಿಯಲ್ಲಿ ಉನದ್ಕತ್ ಅವರು ದಾಖಲೆಯ 67 ವಿಕೆಟ್ ಗಳಿಸಿದ್ದರು. ಅವರ ನೆರವಿನಿಂದ ಸೌರಾಷ್ಟ್ರ ತಂಡ ಮೊದಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

ADVERTISEMENT

ಶ್ರೀಲಂಕಾ ವಿರುದ್ಧದ ಸರಣಿಗೆ ಅವರನ್ನು ನಿರಾಕರಿಸಿದ ಬಳಿಕ ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ಅವರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

‘ದಿಗ್ಗಜರ ಆಟವನ್ನು ಕಣ್ತುಂಬಿಕೊಳ್ಳುತ್ತ ಕ್ರಿಕೆಟ್ ಕುರಿತು ಒಲವು ಬೆಳೆಸಿಕೊಂಡೆ. ಕೆಲವು ವರ್ಷಗಳ ಬಳಿಕ ಸ್ವತಃ ನಾನೇ ಆಟದ ಅನುಭವ ಪಡೆದೆ’ ಎಂದು ಟ್ವಿಟರ್‌ನಲ್ಲಿ ಉನದ್ಕತ್ ಬರೆದುಕೊಂಡಿದ್ದಾರೆ.

ಪೋರ್‌ಬಂದರ್‌ನಲ್ಲಿ ಜನಿಸಿರುವ ಉನದ್ಕತ್‌, 2010ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡುತ್ತಾರೆ.

‘ಕ್ರಿಕೆಟ್ ನನಗೆ ಸಾಕಷ್ಟು ಕೊಟ್ಟಿದೆ. ಅವಕಾಶ ದೊರೆಯದ ಕುರಿತು ಒಂದು ಕ್ಷಣವೂ ಪಶ್ಚಾತ್ತಾಪ ಪಡುವುದಿಲ್ಲ. ಈ ಹಿಂದೆ ಅವಕಾಶಗಳು ಸಿಕ್ಕಿವೆ. ಮುಂದೆಯೂ ಯಾವಾಗಲಾದರೂ ಪಡೆಯುವೆ‘ ಎಂದು ಅವರು ಹೇಳಿದ್ದಾರೆ.

ಉನದ್ಕತ್ ಭಾರತ ತಂಡದ ಪರ ಒಂದು ಟೆಸ್ಟ್, ಏಳು ಏಕದಿನ ಹಾಗೂ 10 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.