ಮೊಹಮ್ಮದ್ ಶಮಿ
ಚಿತ್ರ ಕೃಪೆ: ಬಿಸಿಸಿಐ
ನವದೆಹಲಿ: ಭಾರತ ಕ್ರಿಕೆಟ್ ತಂಡದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು, ರಂಜಾನ್ ಮಾಸದಲ್ಲಿ ರೋಜಾ (ಉಪವಾಸ) ಪಾಲಿಸುತ್ತಿಲ್ಲ ಎಂಬ ಟೀಕೆಗಳು ವ್ಯಕ್ತವಾಗಿವೆ. ಇದರ ಬೆನ್ನಲ್ಲೇ, ಚಿತ್ರಕಥೆಗಾರ ಮತ್ತು ಗೀತರಚನೆಕಾರ ಜಾವೇದ್ ಅಖ್ತರ್ ಅವರು ಶಮಿಗೆ ಬೆಂಬಲ ಸೂಚಿಸಿದ್ದಾರೆ.
ಎಕ್ಸ್/ಟ್ವಿಟರ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಜಾವೇದ್, ಮತಾಂಧ ಮೂರ್ಖರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಶಮಿ ಅವರು, ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ (ಮಾರ್ಚ್ 4ರಂದು) ಪಂದ್ಯದ ವೇಳೆ ಪಾನೀಯ ಸೇವಿಸಿದ್ದರು.
ಶಮಿ ಪಾನೀಯ ಕುಡಿಯುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ, ಟೀಕೆಗಳು ಕೇಳಿಬಂದಿದ್ದವು. ಮುಸ್ಲಿಮರ ಪವಿತ್ರ ರಂಜಾನ್ ಮಾಸದಲ್ಲಿ ಉಪವಾಸ ಪಾಲಿಸದ ಶಮಿ ಪಾಪ ಕೃತ್ಯವೆಸಗಿದ್ದಾರೆ ಎಂದು ಆಲ್ ಇಂಡಿಯಾ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಝ್ವಿ ಬರೆಲ್ವಿ ಕಿಡಿಕಾರಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಾವೇದ್, ನಕಾರಾತ್ಮಕ ವಿಚಾರಗಳತ್ತ ಗಮನ ಹರಿಸದಂತೆ ಶಮಿಗೆ ಸಲಹೆ ನೀಡಿದ್ದಾರೆ. ಹಾಗೆಯೇ, ಸೆಮಿಫೈನಲ್ ಪಂದ್ಯದಲ್ಲಿ ತೋರಿದ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದುಬೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ 10 ಓವರ್ ಬೌಲಿಂಗ್ ಮಾಡಿದ್ದ ಶಮಿ, 48 ರನ್ ನೀಡಿ 3 ವಿಕೆಟ್ ಉರುಳಿಸಿದ್ದರು.
'ದುಬೈ ಕ್ರೀಡಾಂಗಣದಲ್ಲಿ ಮಧ್ಯಾಹ್ನದ ಬಿರು ಬಿಸಿಲಿನಲ್ಲಿ ಪಂದ್ಯದ ವೇಳೆ ಪಾನೀಯ ಸೇವಿಸಿದ್ದನ್ನು ತಪ್ಪು ಎನ್ನುವ ಮತಾಂಧ ಮೂರ್ಖರಿಗೆ ಹೆದರಬೇಡಿ' ಎಂದು ಶಮಿಗೆ ಜಾವೇದ್ ಹೇಳಿದ್ದಾರೆ.
'ಇದರಲ್ಲಿ ಅವರು ತಲೆಹಾಕುವ ಅಗತ್ಯವಿಲ್ಲ. ನೀವು, ಭಾರತ ತಂಡದ ಶ್ರೇಷ್ಠ ಆಟಗಾರರಲ್ಲಿ ಒಬ್ಬರು ಎಂಬುದು ನಮ್ಮಲ್ಲಿ ಹೆಮ್ಮೆ ಮೂಡಿಸಿದೆ. ನಿಮಗೆ ಮತ್ತು ನಮ್ಮ ಇಡೀ ತಂಡಕ್ಕೆ ಶುಭವಾಗಲಿ' ಎಂದು ಹಾರೈಸಿದ್ದಾರೆ.
ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ತಲುಪಿವೆ. ಈ ಪಂದ್ಯವು, ನಾಳೆ (ಮಾರ್ಚ್ 9ರಂದು) ದುಬೈನಲ್ಲಿ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.