ADVERTISEMENT

ಜಿತೇಶ್ ಶರ್ಮಾ ನೆಚ್ಚಿನ ಐಪಿಎಲ್ ತಂಡದಲ್ಲಿ 'ಕಿಂಗ್' ಕೊಹ್ಲಿಗಿಲ್ಲ ಸ್ಥಾನ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜನವರಿ 2026, 4:54 IST
Last Updated 14 ಜನವರಿ 2026, 4:54 IST
<div class="paragraphs"><p>ಜಿತೇಶ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ</p></div>

ಜಿತೇಶ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ

   

ಕೃಪೆ: ಪಿಟಿಐ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಐಪಿಎಲ್‌) ತಂಡದ ಆಟಗಾರ ಜಿತೇಶ್‌ ಶರ್ಮಾ ಅವರು ತಮ್ಮ ನೆಚ್ಚಿನ ಸಾರ್ವಕಾಲಿನ ಐಪಿಎಲ್‌ ತಂಡವನ್ನು ಪ್ರಕಟಿಸಿದ್ದಾರೆ. ಅವರು, ಸೂಪರ್ ಸ್ಟಾರ್‌ ವಿರಾಟ್‌ ಕೊಹ್ಲಿ ಅವರನ್ನೇ ಆಯ್ಕೆ ಮಾಡಿಲ್ಲ ಎಂಬುದು ವಿಶೇಷ.

ADVERTISEMENT

ಪಂಜಾಬ್‌ ಕಿಂಗ್ಸ್‌ ಪರ 2022ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಜಿತೇಶ್‌ ಅವರನ್ನು, 2025ರ ಆವೃತ್ತಿಗೂ ಮುನ್ನ ₹ 11 ಕೋಟಿ ನೀಡಿ ಆರ್‌ಸಿಬಿ ಖರೀದಿಸಿತ್ತು.

ಐಪಿಎಲ್‌ನಲ್ಲಿ ಇದುವರೆಗೆ 55 ಪಂದ್ಯಗಳಲ್ಲಿ ಆಡಿರುವ ಜಿತೇಶ್‌, 157ರ ಸ್ಟ್ರೈಕ್‌ರೇಟ್‌ನಲ್ಲಿ 991 ರನ್‌ ಕಲೆಹಾಕಿದ್ದಾರೆ. ಕಳೆದ ವರ್ಷ ಆರ್‌ಸಿಬಿ ಚಾಂಪಿಯನ್‌ ಪಟ್ಟಕ್ಕೇರುವಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದ ಅವರು, ಆಡಿದ 11 ಇನಿಂಗ್ಸ್‌ಗಳಲ್ಲಿ 176ರ ಸ್ಟ್ರೈಕ್‌ರೇಟ್‌ನಲ್ಲಿ 261 ರನ್‌ ಗಳಿಸಿದ್ದರು. ಚಾಂಪಿಯನ್‌ ತಂಡದ ಪರ ಕೊಹ್ಲಿ (657 ರನ್‌)  ಗರಿಷ್ಠ ಮೊತ್ತ ಕಲೆಹಾಕಿದ ಬ್ಯಾಟರ್‌ ಎನಿಸಿದ್ದರು., 

ಜಿತೇಶ್ ತಂಡದಲ್ಲಿ ಕೊಹ್ಲಿಗಿಲ್ಲ ಸ್ಥಾನ
ಐಪಿಎಲ್‌ನ ಎಲ್ಲ ಆವೃತ್ತಿಗಳಲ್ಲಿ ಒಂದೇ ತಂಡದ ಪರ ಆಡಿದ ಏಕೈಕ ಆಟಗಾರ ಎಂಬ ಖ್ಯಾತಿ ಹೊಂದಿರುವ ಕೊಹ್ಲಿ, ಲೀಗ್‌ನಲ್ಲಿ ಅತಿಹೆಚ್ಚು ರನ್‌ ಹಾಗೂ ಶತಕ ಗಳಿಸಿದ ಬ್ಯಾಟರ್‌ ಕೂಡ ಹೌದು. ಹಾಗಿದ್ದರೂ, ಕೊಹ್ಲಿಗೆ ಜಿತೇಶ್‌ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.

ಇದು ಕ್ರಿಕೆಟ್‌ ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ.

'ಕ್ರಿಕ್‌ಟ್ರ್ಯಾಕರ್‌' ಸಂದರ್ಶನದಲ್ಲಿ ಮಾತನಾಡುವ ವೇಳೆ ಜಿತೇಶ್‌, ತಮ್ಮ ನೆಚ್ಚಿನ ತಂಡವನ್ನು ಹೆಸರಿಸಿದ್ದಾರೆ. ಅದರಲ್ಲಿ, ರೋಹಿತ್‌ ಶರ್ಮಾ ಹಾಗೂ ಆಸ್ಟ್ರೇಲಿಯಾದ ಮಾಜಿ ಆಟಗಾರ ಆ್ಯಡಂ ಗಿಲ್‌ಕ್ರಿಸ್ಟ್‌ ಅವರನ್ನು ಆರಂಭಿಕರನ್ನಾಗಿ ಆಯ್ಕೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಕ್‌ ಕಾಲಿಸ್, ಟೀಂ ಇಂಡಿಯಾ ಟಿ20 ನಾಯಕ ಸೂರ್ಯಕುಮಾರ್‌ ಯಾದವ್‌ಗೆ ಮೂರು ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಅವಕಾಶ ನೀಡಿದ್ದಾರೆ. ನಂತರ ಕ್ರಮವಾಗಿ ಮಹೇಂದ್ರ ಸಿಂಗ್‌ ಧೋನಿ, ಅಕ್ಷರ್ ಪಟೇಲ್‌, ಎಬಿ. ಡಿ. ವಿಲಿಯರ್ಸ್‌, ಹಾರ್ದಿಕ್‌ ಪಾಂಡ್ಯ ಬ್ಯಾಟ್‌ ಬೀಸಲಿದ್ದಾರೆ. ವೇಗದ ಬೌಲಿಂಗ್‌ ವಿಭಾಗಕ್ಕೆ ಜಸ್‌ಪ್ರೀತ್‌ ಬೂಮ್ರಾ ಹಾಗೂ ಆಸ್ಟ್ರೇಲಿಯಾದ ಜೋಶ್‌ ‌ಹ್ಯಾಜಲ್‌ವುಡ್‌ ಬಲ ತುಂಬಲಿದ್ದಾರೆ. ವರುಣ್‌ ಚಕ್ರವರ್ತಿ ಸ್ಪಿನ್‌ ಶಕ್ತಿಯಾಗಿದ್ದಾರೆ.

ಈ ತಂಡವನ್ನು ಧೋನಿ ಮುನ್ನಡೆಸಲಿದ್ದಾರೆ.‌

ಜಿತೇಶ್‌ ತಂಡ ಹೀಗಿದೆ
ರೋಹಿತ್‌ ಶರ್ಮಾ, ಆ್ಯಡಂ ಗಿಲ್‌ಕ್ರಿಸ್ಟ್‌, ಜಾಕ್‌ ಕಾಲಿಸ್, ಸೂರ್ಯಕುಮಾರ್‌ ಯಾದವ್‌, ಮಹೇಂದ್ರ ಸಿಂಗ್‌ ಧೋನಿ (ನಾಯಕ), ಅಕ್ಷರ್ ಪಟೇಲ್‌, ಎಬಿ. ಡಿ. ವಿಲಿಯರ್ಸ್‌, ಹಾರ್ದಿಕ್‌ ಪಾಂಡ್ಯ, ಜಸ್‌ಪ್ರೀತ್‌ ಬೂಮ್ರಾ, ವರುಣ್‌ ಚಕ್ರವರ್ತಿ, ಜೋಶ್‌ ‌ಹ್ಯಾಜಲ್‌ವುಡ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.