ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ
(ಎಕ್ಸ್ ಚಿತ್ರ)
ಲಂಡನ್: 'ಗರಿಷ್ಠ ಮಟ್ಟದ ಫಿಟ್ನೆಸ್ ಹಾಗೂ ಮಾನಸಿಕ ದೃಢತೆಯನ್ನು ಕಾಯ್ದುಕೊಂಡು ತಾಳ್ಮೆಯಿಂದ ಆಡುವ ಟೆನಿಸ್ ಆಟಗಾರರ ಬಗ್ಗೆ ನನಗೆ ಅತೀವ ಗೌರವವಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯಗಳಿಗೆ ಸಮಾನವಾದ ಒತ್ತಡವನ್ನು ಟೆನಿಸ್ ಆಟಗಾರರು ನಿಯಮಿತವಾಗಿ ನಿಭಾಯಿಸುತ್ತಾರೆ' ಎಂದು ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಗುಣಗಾನ ಮಾಡಿದ್ದಾರೆ.
ಪ್ರಸ್ತುತ ಸಾಗುತ್ತಿರುವ ವಿಂಬಲ್ಡನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆಟಗಾರ ನೊವಾಕ್ ಜೊಕೊವಿಕ್ ಅವರ ಆಟವನ್ನು ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ವಿರಾಟ್ ಕೊಹ್ಲಿ ವೀಕ್ಷಿಸಿದ್ದಾರೆ.
'ಸ್ಟಾರ್ ಸ್ಪೋರ್ಟ್ಸ್' ಸಂದರ್ಶನದಲ್ಲಿ ಕ್ರಿಕೆಟ್ ಹಾಗೂ ಟೆನಿಸ್ ಕುರಿತು ಮಾತನಾಡಿರುವ ವಿರಾಟ್, 'ನನಗೆ ಅನಿಸುತ್ತಿದೆ ಒತ್ತಡದ ಸಂದರ್ಭಗಳು ಸಮಾನವಾಗಿವೇ ಇರುತ್ತವೆ. ಆದರೆ ಭಾರತ ಹಾಗೂ ಪಾಕಿಸ್ತಾನ ನಡುವಣ ವಿಶ್ವಕಪ್ ಪಂದ್ಯಗಳಲ್ಲಿ ಎದುರಾಗುವಂತಹ ಒತ್ತಡವನ್ನು ಟೆನಿಸ್ ಆಟಗಾರರು ನಿಯಮಿತವಾಗಿ ನಿಭಾಯಿಸುತ್ತಾರೆ. ಕ್ವಾರ್ಟರ್ ಫೈನಲ್‌ನಿಂದ ಫೈನಲ್‌ವರೆಗೂ ತುಂಬಾ ಒತ್ತಡ ಸೃಷ್ಟಿಯಾಗುತ್ತವೆ' ಎಂದು ಹೇಳಿದ್ದಾರೆ.
'ವಿಭಿನ್ನ ಕ್ರೀಡೆಗಳು ವಿಭಿನ್ನ ಸವಾಲುಗಳನ್ನು ಹೊಂದಿರುತ್ತವೆ. ಕ್ರಿಕೆಟ್‌ನಲ್ಲಿ ಎದುರಾಗುವ ಸವಾಲು ಎಂದರೆ ನೀವು ದೀಘಕಾಲ ಕಾಯಬೇಕು. ಏಕೆಂದರೆ ನಿಮಗೆ ಬ್ಯಾಟಿಂಗ್ ಮಾಡಲು ಅವಕಾಶ ಯಾವಾಗ ಸಿಗುತ್ತದೆ ಎಂಬುದು ಗೊತ್ತಿರುವುದಿಲ್ಲ. ಅಲ್ಲಿಯವರೆಗೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಕಾಯುತ್ತಿರಬೇಕು. ಅಲ್ಲಿ ಕುಳಿತು ಆಟವನ್ನು ಅವಲೋಕಿಸಬೇಕು. ಆದರೆ ಬಹುಶಃ ಟೆನಿಸ್‌ನಲ್ಲಿ ನಿಮ್ಮ ಮುಂದಿನ ಸನ್ನಿವೇಶಗಳು ತಿಳಿದಿರುತ್ತವೆ' ಎಂದು ಹೇಳಿದ್ದಾರೆ.
'ಟೆನಿಸ್‌ಗೆ ಹೋಲಿಸಿದರೆ ಕ್ರಿಕೆಟ್‌ನಲ್ಲಿ ತಿರುಗೇಟು ಅವಕಾಶ ಕಡಿಮೆ ಎಂದು ವಿರಾಟ್ ಹೇಳಿದ್ದಾರೆ. ಬ್ಯಾಟಿಂಗ್‌ನಲ್ಲಿ ನಿಮಗೆ ಒಂದೇ ಒಂದು ಅವಕಾಶ ಮಾತ್ರ ಇರುತ್ತದೆ. ಒಮ್ಮೆ ಔಟ್ ಆದರೆ ದಿನವಿಡೀ ಪೆವಿಲಿಯನ್‌ನಲ್ಲಿ ಕುಳಿತು ಚಪ್ಪಾಳೆ ತಟ್ಟಬೇಕು. ಆದರೆ ಟೆನಿಸ್‌ನಲ್ಲಿ ಎರಡೂ ಸೆಟ್ ಹಿನ್ನಡೆಯಲ್ಲಿದ್ದರೂ ನಿಮಗೆ ಪುಟಿದೇಳುವ ಅವಕಾಶ ಇರುತ್ತದೆ' ಎಂದು ಹೇಳಿದ್ದಾರೆ.
ಜೊಕೊವಿಚ್‌ಗೆ ಕೊಹ್ಲಿ ಬೆಂಬಲ...
ನೊವಾಕ್ ಜೊಕೊವಿಚ್ ದಾಖಲೆಯ 25 ಗ್ರ್ಯಾನ್ ಸ್ಲಾಮ್ ಗೆಲ್ಲಬೇಕು ಎಂದು ಕೊಹ್ಲಿ ಶುಭ ಹಾರೈಸಿದ್ದಾರೆ.
'ನಾನು ಸ್ವಲ್ಪ ಸಮಯದಿಂದ ಜೊಕೊವಿಚ್ ಜೊತೆ ಸಂಪರ್ಕದಲ್ಲಿದ್ದೇನೆ. ಪರಸ್ಪರ ಸಂದೇಶವನ್ನು ಹಂಚಿಕೊಂಡಿದ್ದೇವೆ. ನೊವಾಕ್ ಹಾಗೂ ಕಾರ್ಲೊಸ್ ಅಲ್ಕರಾಜ್ ನಡುವೆ ಫೈನಲ್ ನಡೆಯಬೇಕು ಎಂದು ಬಯಸುತ್ತೇನೆ. ಅಲ್ಲದೆ ಜೊಕೊವಿಚ್ ಟ್ರೋಫಿ ಗೆಲ್ಲಲು ಬಯಸುತ್ತೇನೆ. ವೃತ್ತಿ ಜೀವನದ ಈ ಹಂತದಲ್ಲಿ ಕಪ್ ಗೆಲ್ಲುವುದು ನಿಜಕ್ಕೂ ಅದ್ಭುತವಾಗಿರಲಿದೆ. ಅವರು ಅದಕ್ಕೆ ಅರ್ಹವಾಗಿದ್ದಾರೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.