ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್
(ಪಿಟಿಐ ಸಂಗ್ರಹ ಚಿತ್ರ)
ಬೆಂಗಳೂರು: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಚೊಚ್ಚಲ ಟ್ರೋಫಿಯ ಹುಡುಕಾಟದಲ್ಲಿದೆ. ಈ ಸಂಬಂಧ ಆರ್‌ಸಿಬಿಯ ಮಾಜಿ ಆಟಗಾರ, ದಕ್ಷಿಣ ಆಫ್ರಿಕಾದ ಮೂಲದ ಎಬಿ ಡಿವಿಲಿಯರ್ಸ್ ಮಹತ್ವದ ಸಲಹೆ ನೀಡಿದ್ದಾರೆ.
'ವಿರಾಟ್ ಕೊಹ್ಲಿ ಎಂದಿನಂತೆ ಸ್ಮಾರ್ಟ್ ಕ್ರಿಕೆಟ್ ಆಟದತ್ತ ಗಮನ ಕೊಡಬೇಕು. ಆಟದ ಮೇಲೆ ನಿಯಂತ್ರಣ ಸಾಧಿಸುವುದನ್ನು ಮುಂದುವರಿಸಬೇಕು. ಆರ್‌ಸಿಬಿ ತಂಡದಲ್ಲಿ ಸಾಕಷ್ಟು ಸ್ಫೋಟಕ ದಾಂಡಿಗರಿದ್ದು, ಫಿಲ್ ಸಾಲ್ಟ್, ಕೊಹ್ಲಿ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ನೆರವಾಗಲಿದ್ದಾರೆ' ಎಂದು ಡಿವಿಲಿಯರ್ಸ್ ಹೇಳಿದ್ದಾರೆ.
ಎಲ್ಲ ಆವೃತ್ತಿಗಳಲ್ಲೂ ಸ್ಥಿರ ಪ್ರದರ್ಶನದ ಹೊರತಾಗಿಯೂ ಕೊಹ್ಲಿ ನಿಧಾನಗತಿಯ ಆಟ ಹಾಗೂ ಕಳಪೆ ಸ್ಟ್ರೈಕ್‌ರೇಟ್‌ಗಾಗಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು.
ಆದರೆ ಈ ಬಾರಿ ತಂಡದಲ್ಲಿ ಇಂಗ್ಲೆಂಡ್‌ನ ಫಿಲ್ ಸಾಲ್ಟ್ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್, ಆಸ್ಟ್ರೇಲಿಯಾದ ಟಿಮ್ ಡೇವಿಡ್ ಮತ್ತು ವೆಸ್ಟ್‌ಇಂಡೀಸ್‌ನ ರೊಮರಿಯೊ ಶೆಫಾರ್ಡ್ ಇರುವುದರಿಂದ ಕೊಹ್ಲಿ ಹೆಚ್ಚು ನಿರಾಳವಾಗಿ ಆಡಬಹುದು ಎಂದು ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ.
'ವಿರಾಟ್ ತಮ್ಮ ಕ್ರಿಕೆಟನ್ನು ಆನಂದಿಸುತ್ತಿದ್ದಾರೆ. ಸ್ಟೈಕ್‌ರೇಟ್ ಕುರಿತು ಚಿಂತೆ ಮಾಡಬಾರದು. ಅವರು ಸ್ಟ್ರೈಕ್‌ರೇಟ್ ಹೆಚ್ಚಿಸುವ ಅಗತ್ಯವಿದೆ ಎಂದು ನನಗೆ ಅನಿಸುತ್ತಿಲ್ಲ. ಪರಿಸ್ಥಿತಿಯನ್ನು ಗ್ರಹಿಸಿ ಅದಕ್ಕೆ ತಕ್ಕಂತೆ ಆಡಲು ವಿರಾಟ್‌ಗೆ ಚೆನ್ನಾಗಿ ಗೊತ್ತಿದೆ' ಎಂದು ಸ್ನೇಹಿತನ ಕುರಿತು ಡಿವಿಲಿಯರ್ಸ್ ಗುಣಗಾನ ಮಾಡಿದ್ದಾರೆ.
'ಕೊಹ್ಲಿ ಈ ಟೂರ್ನಿಯಲ್ಲಿ ಆರ್‌ಸಿಬಿಯ ಬ್ಯಾಟಿಂಗ್ ವಿಭಾಗದ ನಾಯಕರಾಗಿದ್ದಾರೆ. ತಂಡವು ದಿಢೀರ್ ಪತನ ಕಾಣದಂತೆ ನೋಡಿಕೂಳ್ಳಬೇಕಿದೆ ಎಂದು ಎಬಿಡಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.