ಕಿಂಗ್ಸ್‌ಟನ್: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಕಣಕ್ಕಿಳಿದಿರುವ ಸ್ಟಾರ್ ವೇಗಿ ಮಿಚೇಲ್ ಸ್ಟಾರ್ಕ್ ಅವರು ಆಸ್ಟ್ರೇಲಿಯಾ ಪರ ಈ ಮಾದರಿಯಲ್ಲಿ 100 ಪಂದ್ಯಗಳನ್ನಾಡಿದ ಸಾಧನೆ ಮಾಡಿದ್ದಾರೆ.
ಕಿಂಗ್ಸ್‌ಟನ್‌ನ ಸಬೀನಾ ಪಾರ್ಕ್ ಕ್ರೀಡಾಂಗಣದಲ್ಲಿ 'ಪಿಂಕ್ ಬಾಲ್' (ಹಗಲು ರಾತ್ರಿ) ಟೆಸ್ಟ್ ಪಂದ್ಯ ನಡೆಯುತ್ತಿದೆ.
ಶನಿವಾರ ಆರಂಭವಾದ ಈ ಪಂದ್ಯದಲ್ಲಿ ಆಡುವ ಮೂಲಕ ನೂರು ಟೆಸ್ಟ್ ಪಂದ್ಯವಾಡಿದ ಆಸ್ಟ್ರೇಲಿಯಾದ ಎರಡನೇ ವೇಗಿ ಹಾಗೂ 16ನೇ ಆಟಗಾರ ಎಂಬ ಶ್ರೇಯಕ್ಕೆ ಸ್ಟಾರ್ಕ್ ಭಾಜನರಾಗಿದ್ದಾರೆ.
ಸ್ಟಾರ್ಕ್ ಸೇರಿದಂತೆ ಇದುವರೆಗೆ 11 ಮಂದಿ ವೇಗದ ಬೌಲರ್‌ಗಳಷ್ಟೇ ಈ ಸಾಧನೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಇಂಗ್ಲೆಂಡ್‌ನ ದಿಗ್ಗಜ ಜೇಮ್ಸ್ ಆ್ಯಂಡರ್ಸನ್, ಬರೋಬ್ಬರಿ 188 ಪಂದ್ಯಗಳಲ್ಲಿ ಆಡಿದ್ದಾರೆ. ಆಸ್ಟ್ರೇಲಿಯಾ ಪರ ಮಾಜಿ ವೇಗಿ ಗ್ಲೇನ್ ಮೆಗ್ರಾಥ್ 124 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು.
ಸ್ಥಾನ ಕಳೆದುಕೊಂಡ ಲಯನ್
ಆಸ್ಟ್ರೇಲಿಯಾ ತಂಡದ ಪ್ರಮುಖ ಸ್ಪಿನ್ನರ್ ನೇಥನ್ ಲಯನ್ ಅವರನ್ನು ವಿಂಡೀಸ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಿಂದ ಕೈಬಿಡಲಾಗಿದೆ. ಇದರೊಂದಿಗೆ ಅವರು, 2013ರ ಬಳಿಕ ಇದೇ ಮೊದಲ ಬಾರಿಗೆ ಹನ್ನೊಂದರ ಬಳಗದಲ್ಲಿ ಅವಕಾಶ ಕಳೆದುಕೊಂಡಂತಾಗಿದೆ.
ಈ ಪಂದ್ಯದಲ್ಲಿ ನಾಲ್ವರು ವೇಗಿಗಳೊಂದಿಗೆ ಕಣಕ್ಕಿಳಿದಿರುವ ಆಸ್ಟ್ರೇಲಿಯಾ, ಲಯನ್ ಬದಲು ಸ್ಕಾಟ್ ಬೊಲ್ಯಾಂಡ್‌ಗೆ ಸ್ಥಾನ ನೀಡಿದೆ. ಉಳಿದಂತೆ ನಾಯಕ ಪ್ಯಾಟ್ ಕಮಿನ್ಸ್, ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್ ಇದ್ದಾರೆ. ಇವರಿಗೆ ಬ್ಯಾಟಿಂಗ್ ಆಲ್‌ರೌಂಡರ್‌ಗಳಾದ ಕ್ಯಾಮರೂನ್ ಗ್ರೀನ್, ಬ್ಯೂ ವೆಬ್‌ಸ್ಟರ್ ಕೂಡ ನೆರವಾಗಲಿದ್ದಾರೆ.
ಪ್ರಸ್ತುತ ಸರಣಿಯಲ್ಲಿ 9 ವಿಕೆಟ್ ಪಡೆದಿರುವ ಲಯನ್, 2011ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಈವರೆಗೆ ಆಡಿರುವ 139 ಪಂದ್ಯಗಳ 259 ಇನಿಂಗ್ಸ್‌ಗಳಿಂದ 562 ವಿಕೆಟ್ ಕಬಳಿಸಿದ್ದಾರೆ. 24 ಬಾರಿ ಐದು ವಿಕೆಟ್ ಗೊಂಚಲು ಸಾಧನೆ ಮಾಡಿದ್ದಾರೆ.
ಬೌಲರ್‌ಗಳ ಮೇಲುಗೈ
ಪಂದ್ಯದ ಮೊದಲ ದಿನದಾಟದಲ್ಲಿ ವೇಗದ ಬೌಲರ್‌ಗಳು ಮೇಲುಗೈ ಸಾಧಿಸಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾದ ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ವಿಂಡೀಸ್ ವೇಗಿಗಳು ಕಾಡಿದರು. ಹೀಗಾಗಿ, ಕಾಂಗರೂ ಪಡೆ ಪ್ರಥಮ ಇನಿಂಗ್ಸ್‌ನಲ್ಲಿ 225 ರನ್ ಗಳಿಗೆ ಆಲೌಟ್ ಆಯಿತು. ಶಮರ್ ಜೋಸೆಫ್ ಮೂರು ವಿಕೆಟ್ ಉರುಳಿಸಿದರೆ, ಜೇಡನ್ ಸೀಲ್ಸ್ ಹಾಗೂ ಜಸ್ಟೀನ್ ಗ್ರೀವ್ಸ್ ತಲಾ ಮೂರು ವಿಕೆಟ್ ಪಡೆದಿದ್ದಾರೆ.
ನಂತರ ಬ್ಯಾಟಿಂಗ್ ಆರಂಭಿಸಿದ ವಿಂಡೀಸ್‌ಗೆ ಸ್ಟಾರ್ಕ್ ಆರಂಭಿಕ ಆಘಾತ ನೀಡಿದ್ದಾರೆ. ಹೀಗಾಗಿ, ಆತಿಥೇಯ ತಂಡ ದಿನದಾಟದ ಅಂತ್ಯಕ್ಕೆ 1 ವಿಕೆಟ್‌ಗೆ 16 ರನ್ ಗಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.