
ಮಹೇಂದ್ರ ಸಿಂಗ್ ಧೋನಿ
(ಪಿಟಿಐ ಚಿತ್ರ)
ಚೆನ್ನೈ: ನಿವೃತ್ತ ಐಪಿಎಸ್ ಅಧಿಕಾರಿಯ ವಿರುದ್ಧ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯನ್ನು ಭಾಷಾಂತರಿಸುವುದಕ್ಕಾಗಿ ₹ 10 ಲಕ್ಷ ಪಾವತಿಸುವಂತೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 2013ರ ಆವೃತ್ತಿ ವೇಳೆ ಧೋನಿ ಅವರು ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಜಿ. ಸಂಪತ್ ಕುಮಾರ್ ಆರೋಪಿಸಿದ್ದರು. ಇದನ್ನು ಟೀಕಿಸಿದ್ದ ಧೋನಿ, ತಮ್ಮ ವಿರುದ್ಧ ದುರುದ್ದೇಶದ ಆರೋಪ ಮಾಡಲಾಗುತ್ತಿದೆ ಎಂದು ₹ 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಪ್ರಕರಣದ ವಿಚಾರಣೆ ನಡೆಸಿರುವ ನ್ಯಾ. ಆರ್.ಎನ್. ಮಂಜುಳಾ ಅವರು, ಫೆಬ್ರುವರಿ 11ರಂದು ಮಧ್ಯಂತರ ಆದೇಶ ಹೊರಡಿಸಿದ್ದಾರೆ. 2025ರ ಅಕ್ಟೋಬರ್ 28ರಂದು ನೀಡಿದ್ದ ಆದೇಶದ ಅನುಸಾರ, ಸಂಬಂಧಿತ ಸಿ.ಡಿ.ಗಳ ಅನುವಾದಕ್ಕಾಗಿ ₹ 10 ಲಕ್ಷ ಪಾವತಿಸುವಂತೆ ಧೋನಿಗೆ ಸೂಚಿಸಿದ್ದಾರೆ.
ಸಿ.ಡಿ.ಗಳ ಅನುವಾದಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಅದಕ್ಕಾಗಿ ಒಬ್ಬ ಅನುವಾದಕ ಹಾಗೂ ಒಬ್ಬ ಬೆರಳಚ್ಚುಗಾರ ಮೂರು–ನಾಲ್ಕು ತಿಂಗಳು ಸಂಪೂರ್ಣವಾಗಿ ತೊಡಗಿಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಈ ಆದೇಶ ನೀಡಿರುವುದಾಗಿ ಕೋರ್ಟ್ ಹೇಳಿದೆ.
ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಗಳ ಪರಿಹಾರ ನಿಧಿ ಖಾತೆಗೆ ಮಾರ್ಚ್ 12ರ ಒಳಗೆ ಹಣ ಪಾವತಿಸುವಂತೆ ಧೋನಿಗೆ ಸೂಚಿಸಲಾಗಿದೆ.
2013ರಲ್ಲಿ ವಾಹಿನಿಯೊಂದರ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಸಂಪತ್ ಕುಮಾರ್ ಅವರು ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಕುರಿತು ಮಾತನಾಡಿದ್ದರು. ಈ ಅಕ್ರಮಗಳೊಂದಿಗೆ ಧೋನಿಗೆ ನಂಟಿದೆ ಎಂದೂ ಆರೋಪಿಸಿದ್ದರು. ಇದೇ ಕಾರಣಕ್ಕಾಗಿ ಧೋನಿ ಅವರು, ಎರಡು ಮಾಧ್ಯಮ ಸಂಸ್ಥೆಗಳು, ಪತ್ರಕರ್ತ ಹಾಗೂ ಸಂಪತ್ ಕುಮಾರ್ ವಿರುದ್ಧ ಮೊಕದ್ದಮೆ ಹೂಡಿದ್ದರು.
ಐಪಿಎಲ್‌ನಲ್ಲಿ 278 ಪಂದ್ಯಗಳ 242 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿರುವ ಧೋನಿ, 5,439 ರನ್ ಗಳಿಸಿದ್ದಾರೆ. ಅವರ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.