ADVERTISEMENT

ಏಷ್ಯಾ ತಂಡದಲ್ಲಿ ಪಾಕ್ ಆಟಗಾರರಿಲ್ಲ, ಒಂದಾಗಿ ಆಡುವ ಪ್ರಶ್ನೆಯೇ ಇಲ್ಲ: ಬಿಸಿಸಿಐ

ಬಿಸಿಬಿಯಿಂದ ಟಿ20 ಕ್ರಿಕೆಟ್ ಟೂರ್ನಿ

ಏಜೆನ್ಸೀಸ್
Published 26 ಡಿಸೆಂಬರ್ 2019, 9:14 IST
Last Updated 26 ಡಿಸೆಂಬರ್ 2019, 9:14 IST
   

ನವದೆಹಲಿ: ಬಾಂಗ್ಲಾದೇಶ ಪಿತಾಮಹಶೇಖ್‌ ಮುಜಿಬುರ್‌ ರಹ್ಮಾನ್‌ ಅವರ ಜನ್ಮ ಶತಮಾನೋತ್ಸವದ ಸಲುವಾಗಿ ವಿಶ್ವ ಇಲವೆನ್‌ ಮತ್ತು ಏಷ್ಯಾ ಇಲವೆನ್‌ ನಡುವಣ ಟಿ20 ಕ್ರಿಕೆಟ್ ಟೂರ್ನಿ ಆಯೋಜಿಸಲು ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ (ಬಿಸಿಬಿ) ಉದ್ದೇಶಿಸಿದೆ. ಟೂರ್ನಿಯಲ್ಲಿ ಆಡುವ ಏಷ್ಯಾ ಇಲವೆನ್‌ ತಂಡದಲ್ಲಿ ಪಾಕಿಸ್ತಾನ ಆಟಗಾರರು ಇಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಬಿಸಿಬಿಯ ಈ ಟೂರ್ನಿಗೆ ಅಂತರರಾಷ್ಟ್ರೀಯ ಸ್ಥಾನಮಾನ ನೀಡುವುದಾಗಿಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯು (ಐಸಿಸಿ) ತಿಳಿಸಿದೆಯಾದರೂ, ಭಾರತ ಮತ್ತು ಪಾಕಿಸ್ತಾನ ಆಟಗಾರರು ಒಂದೇ ತಂಡದಲ್ಲಿ (ಏಷ್ಯಾ ಇಲವೆನ್‌) ಆಡಲಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ. ಈ ಸಂಬಂಧ ಸ್ಪಷ್ಟನೆ ನೀಡಿರುವ ಬಿಸಿಸಿಐ ಜಂಟಿ ಕಾರ್ಯದರ್ಶಿ ಜಾಯೆಶ್‌ ಜಾರ್ಜ್‌, ಭಾರತ ಮತ್ತು ಪಾಕಿಸ್ತಾನದ ಆಟಗಾರರು ಒಟ್ಟಾಗಿ ಆಡುವ ಪ್ರಶ್ನೆಯೇ ಇಲ್ಲ. ಏಕೆಂದರೆ ಸರಣಿಗೆ ಪಾಕ್‌ ಆಟಗಾರರನ್ನು ಆಹ್ವಾನಿಸಿಲ್ಲ ಎಂದಿದ್ದಾರೆ.

‘ವಿಶ್ವ ಇಲವೆನ್‌ ತಂಡದಲ್ಲಿ ಪಾಕಿಸ್ತಾನದ ಆಟಗಾರರು ಇರುವುದಿಲ್ಲ ಎಂದು ನಮಗೆ ತಿಳಿದು ಬಂದಿದೆ. ಹಾಗಾಗಿ ಎರಡೂ ತಂಡಗಳು ಒಂದಾಗಿ ಆಡುವ ಪ್ರಶ್ನೆಯೇ ಇಲ್ಲ. ಏಷ್ಯಾ ಇಲವೆನ್‌ನಲ್ಲಿ ಭಾಗವಹಿಸಲಿರುವ ಭಾರತದ ಐದು ಆಟಗಾರರು ಯಾರು ಎಂಬುದನ್ನುಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್‌ ಗಂಗೂಲಿ ನಿರ್ಧರಿಸಲಿದ್ದಾರೆ’ ಎಂದು ತಿಳಿಸಿದ್ದಾರೆ.

ಸದ್ಯ ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್‌ ಸಂಬಂದ ಅಷ್ಟು ಚೆನ್ನಾಗಿಲ್ಲ.

2009ರಲ್ಲಿ ಶ್ರೀಲಂಕಾ ಆಟಗಾರರಿದ್ದ ಬಸ್‌ ಮೇಲೆ ಪಾಕಿಸ್ತಾನದಲ್ಲಿ ಭಯೋತ್ಪಾದನಾ ದಾಳಿ ನಡೆದಿತ್ತು. ಆ ಬಳಿಕ ಪಾಕ್‌ಗೆ ತೆರಳಲು ಬೇರೆ ದೇಶದ ತಂಡಗಳು ಹಿಂದೇಟು ಹಾಕಿದ್ದವು. ಆದರೆ, 10 ವರ್ಷಗಳ ನಂತರ ಶ್ರೀಲಂಕಾ ತಂಡ ಪಾಕ್‌ ನೆಲದಲ್ಲಿ ಟೆಸ್ಟ್‌ ಸರಣಿ ಆಡಿದೆ.

ಸರಣಿ ಮುಗಿದ ಬಳಿಕ ಮಾತನಾಡಿದ್ದ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಮುಖ್ಯಸ್ಥ ಎಹ್ಸಾನ್‌ ಮಾನಿ, ‘ಕ್ರಿಕೆಟ್‌ ಆಡಲು ಪಾಕಿಸ್ತಾನ ಸುರಕ್ಷಿತ ಎಂದು ನಾವು ಸಾಬೀತು ಮಾಡಿದ್ದೇವೆ.ಒಂದು ವೇಳೆ ಇಲ್ಲಿಗೆ ಬರಲು ಹಿಂದೇಟು ಹಾಕುವವರು ಇದು (ಪಾಕಿಸ್ತಾನ) ಸುರಕ್ಷಿತವಲ್ಲ ಎಂಬುದನ್ನು ಸಾಬೀತು ಮಾಡಲಿ. ಸದ್ಯದ ಪರಿಸ್ಥಿತಿಯಲ್ಲಿ ಭಾರತವು ಪಾಕಿಸ್ತಾನಕ್ಕಿಂತಲೂ ಹೆಚ್ಚು ಸುರಕ್ಷತೆಯೆ ಸಮಸ್ಯೆಯನ್ನು ಎದುರಿಸುತ್ತಿದೆ’ ಎಂದು ಆರೋಪಿಸಿದ್ದರು.

ಮಾತ್ರವಲ್ಲದೆ ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ರಶೀದ್‌ ಲತೀಫ್‌,ಬಿಸಿಸಿಐ ಅಧ್ಯಕ್ಷ ಗಂಗೂಲಿಯವರ ಚತುಷ್ಕೋನ ಸರಣಿ ಆಯೋಜನೆ ಪ್ರಸ್ತಾವನೆಯನ್ನು ಪ್ಲಾಪ್‌ ಯೋಜನೆ ಎಂದು ವ್ಯಂಗ್ಯವಾಡಿದ್ದರು.

ಬಿಸಿಬಿ ಟೂರ್ನಿಗೆ ಆಟಗಾರರನ್ನು ಕಳುಹಿಸುವ ಸಂದರ್ಭ ಈ ಎಲ್ಲ ಅಂಶಗಳು ಮಹತ್ವ ಪಡೆದುಕೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.