
ಚೊಚ್ಚಲ ಟ್ರೋಫಿ ಗೆದ್ದ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಬಿಸಿಸಿಐ
ಪಿಟಿಐ ಚಿತ್ರ
ನವದೆಹಲಿ: ಚೊಚ್ಚಲ ವಿಶ್ವಕಪ್ ಟ್ರೋಫಿ ಗೆದ್ದ ಭಾರತದ ವನಿತೆಯರ ತಂಡಕ್ಕೆ ₹51 ಕೋಟಿ ನಗದು ಬಹುಮಾನವನ್ನು ಬಿಸಿಸಿಐ ಘೋಷಿಸಿದೆ.
ಈ ಕುರಿತು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಸೋಮವಾರ ಮಾಹಿತಿ ನೀಡಿದ್ದಾರೆ.
ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್‌ನಲ್ಲಿ ಹರ್ಮನ್ ಪ್ರೀತ್ ಕೌರ್ ನಾಯಕತ್ವದಲ್ಲಿ ಭಾರತ ತಂಡವು 52 ರನ್‌ಗಳಿಂದ ದಕ್ಷಿಣ ಆಫ್ರಿಕಾ ಎದುರು ಜಯಭೇರಿ ಬಾರಿಸಿದೆ. ಶಫಾಲಿ ವರ್ಮಾ ಮತ್ತು ದೀಪ್ತಿ ಶರ್ಮಾ ಅವರ ಆಲ್‌ರೌಂಡ್ ಆಟದ ಬಲದಿಂದ ಭಾರತ ವನಿತೆಯರ ತಂಡವು ಮೊದಲ ಸಲ ವಿಶ್ವಕಪ್ ಜಯಿಸಿದೆ.
‘ಕೃತಜ್ಞತೆಗಾಗಿ, ವಿಶ್ವಕಪ್ ಗೆದ್ದ ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಬಿಸಿಸಿಐ ₹51 ಕೋಟಿ ನಗದು ಬಹುಮಾನ ನೀಡಲಿದೆ. ಈ ಬಹುಮಾನವು ಎಲ್ಲಾ ಆಟಗಾರ್ತಿಯರು, ಸಹಾಯಕ ಸಿಬ್ಬಂದಿ ಮತ್ತು ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ಒಳಗೊಂಡಿರಲಿದೆ’ ಎಂದು ಪಿಟಿಐಗೆ ದೇವಜಿತ್ ತಿಳಿಸಿದ್ದಾರೆ.
ಸುದ್ದಿ ಸಂಸ್ಥೆ ಎಎನ್‌ಐ ಜತೆ ಮಾತನಾಡಿರುವ ಅವರು, ‘1983ರಲ್ಲಿ ಕಪಿಲ್ ದೇವ್ ನಾಯಕತ್ವದ ತಂಡ ಮೊದಲ ಬಾರಿ ವಿಶ್ವಕಪ್ ಟ್ರೋಫಿ ಗೆಲ್ಲುವ ಮೂಲಕ ಭಾರತ ಕ್ರಿಕೆಟ್‌ನಲ್ಲಿ ಹೊಸ ಶಕೆ ಆರಂಭಿಸಿತ್ತು. ಅದೇ ರೀತಿಯ ಸಂಭ್ರಮವನ್ನು ಈಗ ಮಹಿಳಾ ತಂಡ ಸೃಷ್ಟಿಸಿದೆ. ಹರ್ಮನ್ ಪ್ರೀತ್ ಮತ್ತು ತಂಡ ಕೇವಲ ಟ್ರೋಫಿ ಗೆದ್ದಿಲ್ಲ, ಅವರು ಇಡೀ ಭಾರತೀಯರ ಹೃದಯವನ್ನು ಗೆದ್ದಿದ್ದಾರೆ. ಮುಂದಿನ ಪೀಳಿಗೆಯ ಮಹಿಳಾ ಕ್ರಿಕೆಟ್ ಆಟಗಾರರಿಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿದ್ದಾರೆ‘ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.