ADVERTISEMENT

ಕೊಹ್ಲಿ ODIಗೆ ಪದಾರ್ಪಣೆ ಮಾಡಿದ್ದು ಇದೇ ದಿನ: ಮೊದಲ ಪಂದ್ಯದಲ್ಲಿ ಗಳಿಸಿದ್ದೆಷ್ಟು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಆಗಸ್ಟ್ 2025, 14:01 IST
Last Updated 18 ಆಗಸ್ಟ್ 2025, 14:01 IST
<div class="paragraphs"><p>ವಿರಾಟ್‌ ಕೊಹ್ಲಿ (ಸಂಗ್ರಹ ಚಿತ್ರ)</p></div>

ವಿರಾಟ್‌ ಕೊಹ್ಲಿ (ಸಂಗ್ರಹ ಚಿತ್ರ)

   

ಕೃಪೆ: ರಾಯಿಟರ್ಸ್‌

ವಿರಾಟ್‌ ಕೊಹ್ಲಿ – ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರು.

ADVERTISEMENT

ಟೀಂ ಇಂಡಿಯಾದ 'ರನ್‌ ಮಷಿನ್‌' ಖ್ಯಾತಿಯ ಈ ಆಟಗಾರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಇಂದಿಗೆ 17 ವರ್ಷಗಳು ಪೂರ್ಣಗೊಂಡಿವೆ.

2008ರಲ್ಲಿ ಭಾರತ ತಂಡದ ನಾಯಕನಾಗಿ 19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ ಗೆದ್ದಿದ್ದ ಈ ಆಟಗಾರ, ಅದೇ ವರ್ಷ ಆಗಸ್ಟ್‌ 18ರಂದು ಅಂತರರಾಷ್ಟ್ರೀಯ ಕ್ರಿಕೆಟ್‌ಗೂ ಪದಾರ್ಪಣೆ ಮಾಡಿದ್ದರು. ನಂತರದ್ದೆಲ್ಲ ಈಗ ಇತಿಹಾಸ. ಕ್ರಿಕೆಟ್‌ನ ಅತ್ಯುನ್ನತ ಮಟ್ಟದಲ್ಲಿ ಅವರು ಬರೆದ ದಾಖಲೆಗಳು ಅಪಾರ.

ಏಕದಿನ ಕ್ರಿಕೆಟ್‌ನಲ್ಲಿ 50 ಶತಕ ಗಳಿಸಿದ ಏಕೈಕ ಬ್ಯಾಟರ್‌ ಎನಿಸಿಕೊಂಡಿರುವ ಕೊಹ್ಲಿ, ಈ ಮಾದರಿಯಲ್ಲಿ 8 ಸಾವಿರದಿಂದ 14 ಸಹಸ್ರ ರನ್‌ ವರೆಗಿನ ಮೈಲುಗಲ್ಲನ್ನು ಅತ್ಯಂತ ವೇಗವಾಗಿ ಮುಟ್ಟಿದ ಬ್ಯಾಟರ್‌ ಎಂಬ ಖ್ಯಾತಿ ಹೊಂದಿದ್ದಾರೆ.

ಇದುವರೆಗೆ 302 ಪಂದ್ಯಗಳ 290 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿರುವ ಅವರು, 57.88ರ ಸರಾಸರಿಯಲ್ಲಿ 14,181 ರನ್ ಬಾರಿಸಿದ್ದಾರೆ. ಇನಿಂಗ್ಸ್‌ವೊಂದರಲ್ಲಿ ಅವರು ಗಳಿಸಿದ ಗರಿಷ್ಠ ಮೊತ್ತ 183 ರನ್‌. 45 ಬಾರಿ ನಾಟೌಟ್‌ ಆಗಿ ಉಳಿದಿರುವ ಅವರು, 1,325 ಬೌಂಡರಿ ಮತ್ತು 153 ಸಿಕ್ಸ್‌ ಸಿಡಿಸಿದ್ದಾರೆ. 51 ಶತಕ ಮತ್ತು 74 ಅರ್ಧಶತಕಗಳು ಅವರ ಬ್ಯಾಟ್‌ನಿಂದ ಬಂದಿವೆ.

ಅವರ ಜೆರ್ಸಿ ನಂ. ಕೂಡ 18 ಎಂಬುದು ವಿಶೇಷ.

ಮೊದಲ ಪಂದ್ಯ, ಸರಣಿಯಲ್ಲಿ ಗಳಿಸಿದ್ದೆಷ್ಟು?
ಆತಿಥೇಯ ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಪದಾರ್ಪಣೆ ಮಾಡಿದ್ದ ಕೊಹ್ಲಿ, ದಂಬುಲ್ಲಾದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಆ ಪಂದ್ಯದಲ್ಲಿ 22 ಎಸೆತಗಳನ್ನು ಎದುರಿಸಿದ್ದ ಅವರು ಗಳಿಸಿದ್ದು ಕೇವಲ 12 ರನ್‌. ವೇಗಿ ನುವಾನ್‌ ಕುಲಶೇಖರ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದಿದ್ದರು.

ಇದರೊಂದಿಗೆ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿಯನ್ನು ಮೊದಲು ಔಟ್‌ ಮಾಡಿದ ಶ್ರೇಯ ನುವಾನ್ ಅವರದ್ದಾಯಿತು.

ಟೂರ್ನಿಯ ಐದೂ ಪಂದ್ಯಗಳಲ್ಲಿ ಆಡಿದ್ದ ಕೊಹ್ಲಿ, ಒಂದೇ ಒಂದು ಅರ್ಧಶತಕದೊಂದಿಗೆ 159 ರನ್‌ ಗಳಿಸಿದ್ದರು. ಆದರೂ, ಟೀಂ ಇಂಡಿಯಾ ಪರ ಗರಿಷ್ಠ ರನ್‌ ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದರು. ಆಗಿನ ನಾಯಕ ಎಂ.ಎಸ್‌. ಧೋನಿ 193 ರನ್‌ ಗಳಿಸಿದ್ದರು.

2027ರ ವಿಶ್ವಕಪ್‌ಗೆ ಅನುಮಾನ
2024ರ ಟಿ20 ವಿಶ್ವಕಪ್‌ ಗೆದ್ದ ಬಳಿಕ ಚುಟುಕು ಮಾದರಿಗೆ ಹಾಗೂ ಇದೇ ವರ್ಷ ಮೇ ತಿಂಗಳಲ್ಲಿ ದೀರ್ಘ ಮಾದರಿಗೆ ವಿದಾಯ ಹೇಳಿರುವ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಷ್ಟೇ ಟೀಂ ಇಂಡಿಯಾವನ್ನು ಪ್ರತಿನಿಧಿಸುತ್ತಿದ್ದಾರೆ. ಆದಾಗ್ಯೂ, ಅವರು 2027ರ ಅಕ್ಟೋಬರ್‌ನಲ್ಲಿ ನಡೆಯುವ ಏಕದಿನ ವಿಶ್ವಕಪ್‌ನಲ್ಲಿ ಆಡುವರೇ ಎಂಬುದು ಇನ್ನೂ ಖಚಿತವಾಗಿಲ್ಲ.

ಕೊಹ್ಲಿಯಂತೆ ರೋಹಿತ್‌ ಶರ್ಮಾ ಅವರೂ ಟೆಸ್ಟ್‌ ಮತ್ತು ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ವಿಶ್ವಕಪ್‌ ನಡೆಯಲಿದೆ. ಅಷ್ಟೊತ್ತಿಗೆ ವಿರಾಟ್‌ ವಯಸ್ಸು 38 ಹಾಗೂ ರೋಹಿತ್‌ಗೆ 40 ಆಗಿರಲಿದೆ. ಇವರಿಬ್ಬರ ಸ್ಥಾನ ತುಂಬಲು ಶುಭಮನ್‌ ಗಿಲ್‌, ಯಶಸ್ವಿ ಜೈಸ್ವಾಲ್‌, ಸಾಯಿ ಸುದರ್ಶನ್‌, ಶ್ರೇಯಸ್‌ ಅಯ್ಯರ್‌ ಅವರಂತಹ ಯುವ ಆಟಗಾರರು ಸಜ್ಜಾಗಿದ್ದಾರೆ.

ಹೀಗಾಗಿ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಯುವ ಆಟಗಾರರಿಗೆ ಮಣೆ ಹಾಕುವತ್ತ ಚಿಂತನೆ ನಡೆಸುತ್ತಿದೆ ಎನ್ನಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.