ADVERTISEMENT

ಪಾಕಿಸ್ತಾನದ ಮಾಜಿ ಕ್ರಿಕೆಟಿಗರೆಲ್ಲ ಯುಟ್ಯೂಬ್ ಚಾನಲ್ ನಡೆಸುತ್ತಿದ್ದಾರೆ: ಅಖ್ತರ್

19 ವರ್ಷದೊಳಗಿನವರ ವಿಶ್ವಕಪ್‌ ಸೋಲಿನ ಬಳಿಕ ಪಿಸಿಬಿ ವಿರುದ್ಧ ಕಿಡಿಕಾರಿದ ಮಾಜಿ ವೇಗಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2020, 12:10 IST
Last Updated 6 ಫೆಬ್ರುವರಿ 2020, 12:10 IST
   

ನವದೆಹಲಿ:19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡವು ಭಾರತ ವಿರುದ್ಧ ಸೋತುಹೊರಬಿದ್ದ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಶೋಯಬ್‌ ಅಖ್ತರ್‌ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಪಿಸಿಬಿ ಸರಿಯಾಗಿ ನಡೆಸಿಕೊಳ್ಳದ ಕಾರಣ ಪಾಕಿಸ್ತಾನದ ಮಾಜಿಕ್ರಿಕೆಟಿಗರೆಲ್ಲ ಯುಟ್ಯೂಬ್‌ ಚಾನಲ್‌ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ತಮ್ಮ ಯುಟ್ಯೂಬ್‌ ಚಾನಲ್‌ನಲ್ಲಿ ಮಾತನಾಡಿರುವ ಅವರು, ‘ಭಾರತದ 19 ವರ್ಷದೊಳಗಿನವರ ತಂಡವು ಅತ್ಯಂತ ಪ್ರಬುದ್ಧವಾಗಿದೆ. ಏಕೆಂದರೆ ಅವರಿಗೆ ಪ್ರಬುದ್ಧವಾದ ಕೋಚ್‌ ಇದ್ದಾರೆ. ಅವರು ಭಾರತದ ಶ್ರೇಷ್ಠ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ರಾಹುಲ್‌ ದ್ರಾವಿಡ್‌ ಅವರನ್ನು ಕೋಚ್‌ ಆಗಿ ಹೊಂದಿದ್ದಾರೆ. ಯಾವಾಗ ನೀವು ದೊಡ್ಡ ವ್ಯಕ್ತಿಯನ್ನು ನೇಮಿಸುತ್ತೀರೋ ಅದಕ್ಕೆ ತಕ್ಕಂತೆ ಹಣವನ್ನೂ ನೀಡಬೇಕಾಗುತ್ತದೆ. ಇಲ್ಲಿ, ಪಿಸಿಬಿ ಆಹ್ವಾನದ ಮೇರೆಗೆ ಕೋಚ್‌ ಹುದ್ದೆಯ ಜವಾಬ್ದಾರಿ ಸ್ವೀಕರಿಸಲು ಯುನೀಸ್‌ ಖಾನ್‌ ಹೋಗಿದ್ದರು. ನಂತರ ಅವರು (ಪಿಸಿಬಿ) ಚೌಕಾಸಿ ಮಾಡಲಾರಂಭಿಸಿದ್ದಾರೆ. ‘₹ 15 ಲಕ್ಷ ಇಲ್ಲ. ₹ 13 ಲಕ್ಷ ತೆಗೆದುಕೊಳ್ಳಿ’ ಎಂದಿದ್ದಾರೆ. ಹಾಗಾಗಿ ಯುನೀಸ್‌, ‘ನಿಮ್ಮ ಹಣ ನೀವೇ ಇಟ್ಟುಕೊಳ್ಳಿ’ ಎಂದು ವಾಪಸ್‌ ಆಗಿದ್ದಾರೆ. ತಾರಾ ಆಟಗಾರರನ್ನು ಹೀಗಾ ನಡೆಸಿಕೊಳ್ಳುವುದು?’ ಎಂದು ಪ್ರಶ್ನಿಸಿದ್ದಾರೆ.

ಮುಂದುವರಿದು ತಂಡಕ್ಕಾಗಿ ಕೋಚಿಂಗ್ ಮಾಡಲು ನಾವು ಸಿದ್ಧರಿದ್ದೇವೆ ಎಂದಿರುವ ಅವರು, ‘ಇಲ್ಲಿ ನಾನು, ಮೊಹಮ್ಮದ್‌ ಯೂಸುಫ್‌, ಯೂನಿಸ್‌ ಖಾನ್‌ ಇದ್ದೇವೆ. ನಮ್ಮನ್ನು ಕೇಳಿ. ನಮ್ಮ ತಂಡಕ್ಕಾಗಿ ನೆರವಾಗಲಿದ್ದೇವೆ. ನಾವು 19 ವರ್ಷದೊಳಗಿನವರ ವಿಶ್ವಕಪ್‌ ತಂಡದ ಕೋಚಿಂಗ್‌ ವಿಭಾಗದಲ್ಲಿರಬೇಕು ಎಂದು ನೀವು ಬಯಸುವುದಾದರೆ, ನಮ್ಮ ತಂಡವೂ ಹೀಗೆ (ಭಾರತದಂತೆ) ಪ್ರದರ್ಶನ ನೀಡಲಿದೆ’ ಎಂದು ಹೇಳಿದ್ದಾರೆ.

‘ಉನ್ನತ ಹುದ್ದೆಗಳಿಗೆ ದೊಡ್ಡ ವ್ಯಕ್ತಿಗಳನ್ನೇ ನೇಮಿಸಬೇಕಾಗುತ್ತದೆ. ನಾನು ನಿಮ್ಮಲ್ಲಿ ಕೆಲಸಕ್ಕಾಗಿ ಬೇಡಿಕೊಳ್ಳುತ್ತಿಲ್ಲ. ಆದರೆ, ನಮ್ಮ ತಂಡವು ತುಂಬಾ ಅಪ್ರಬುದ್ಧವಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ನೋವಾಗುತ್ತಿದೆ. ಭಾರತದ 19 ವರ್ಷದೊಳಗಿನವರ ತಂಡವೂ ಅವರ ಹಿರಿಯರ ತಂಡದಂತೆಯೇ ಇದೆ. ಯಾಕೆ? ಐದು ವರ್ಷವೂ ರಾಹುಲ್‌ ದ್ರಾವಿಡ್‌ ಒಬ್ಬರೇ ಕೋಚ್‌ ಆಗಿ ಇದ್ದದ್ದಕ್ಕೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.ಮಂಡಳಿಯವರು ಕೊಡುವಷ್ಟೇ ಹಣಕ್ಕೆ ಒಪ್ಪಿಕೊಂಡು ತರಬೇತಿ ನೀಡುವವರಿಂದ ಅದೇ ಮಟ್ಟದ ತರಬೇತಿಯನ್ನು ಮಾತ್ರವೇ ನಿರೀಕ್ಷಿಸಲು ಸಾಧ್ಯ ಎಂದೂ ದೂರಿದ್ದಾರೆ.

ಮುಂದಿನ 15 ವರ್ಷಗಳಿಗೆ ಯಾವುದಕ್ಕೆ ಎಷ್ಟು ಹೂಡಿಕೆ ಮಾಡಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಯೋಜನೆ ರೂಪಿಸಿಕೊಳ್ಳುವ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯಿಂದ (ಬಿಸಿಸಿಐ) ಪಿಸಿಬಿಯು ಪಾಠ ಕಲಿಯಬೇಕಿದೆ ಎಂದಿರುವ ಅಖ್ತರ್‌, ‘ಬಿಸಿಸಿಐ19 ವರ್ಷದೊಳಗಿನವರ ತಂಡಕ್ಕಾಗಿ ಸಾಕಷ್ಟು ಹಣ ನೀಡುತ್ತದೆ. ಅವರಲ್ಲಿ 15 ವರ್ಷಗಳ ಯೋಜನೆ ಇದೆ. ಸೌರವ್‌ ಗಂಗೂಲಿಯಂತಹವರು ಅಲ್ಲಿ ಮಂಡಳಿಯ ಚುಕ್ಕಾಣಿ ಹಿಡಿಯುತ್ತಾರೆ’ ಎಂದು ಹೇಳಿದ್ದಾರೆ.

‘ಆಂಡ್ರೋ ಸ್ಟ್ರಾಸ್‌ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿಯನ್ನು ಮುನ್ನಡೆಸುತ್ತಿದ್ದಾರೆ. ದಕ್ಷಿಣ ಆಫ್ರಿಕಾ ಗ್ರೇಮ್‌ ಸ್ಮಿತ್‌ಗೆ ಅಧಿಕಾರ ನೀಡಲು ನೋಡುತ್ತಿದೆ. ಪಾಕಿಸ್ತಾನದಲ್ಲಿ ಮಾಜಿ ಕ್ರಿಕೆಟಿಗರು ಯುಟ್ಯೂಬ್‌ ಚಾನಲ್‌ ನಡೆಸುತ್ತಿದ್ದಾರೆ. ನಾನು ಇದನ್ನು (ಯುಟ್ಯೂಬ್‌ ಚಾನಲ್‌ ಅನ್ನು) ಮನರಂಜನೆಗಾಗಿ ನಡೆಸುತ್ತಿದ್ದೇನೆ. ಇದನ್ನು ನಡೆಸುವ ಅಗತ್ಯವೇನು ನನಗಿಲ್ಲ. ನಾನು ಹೇಳುವುದನ್ನು ಕೇಳಲು ನನ್ನ ಅಭಿಮಾನಿಗಳು ಬಯಸುತ್ತಾರೆ. ಆದರೂ ಇದು ತುಂಬಾ ನೋವಿನ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ತಂಡಕ್ಕೆ ಒಳ್ಳೆಯ ಆಟಗಾರರು ಬರುವುದನ್ನು ಸಹಿಸದ ಕೆಲವರುಪಿಸಿಬಿಯಲ್ಲಿದ್ದಾರೆ. ಈಗಲೂ ನೀವು ಪಾಠ ಕಲಿಯದಿದ್ದರೆ, ಅದಕ್ಕೂ ಕಾಲವೇ ಒದಗಿಬರುತ್ತದೆ. ನಾವು ತುಂಬಾ ಅಪ್ರಬುದ್ಧ ತಂಡವನ್ನು ನೋಡುತ್ತಿದ್ದೇವೆ. ಕೆಟ್ಟ ಫೀಲ್ಡಿಂಗ್‌, ತಾಂತ್ರಿಕ ದೋಷಗಳು, ಕಳಪೆ ಬೌಲರ್‌ಗಳನ್ನು ಕಾಣುತ್ತಿದ್ದೇವೆ’ ಎಂದೂ ಹೇಳಿದ್ದಾರೆ.

ಪೊಷೆಫ್‌ಸ್ಟ್ರೂಮ್‌ನ ಸೆನ್ವೆಸ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಿದ್ದವು. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ 172 ರನ್‌ ಗಳಿಸಿ ಆಲೌಟ್‌ ಆಗಿತ್ತು. ಈ ಮೊತ್ತವನ್ನು ಒಂದೂ ವಿಕೆಟ್‌ ಕಳೆದುಕೊಳ್ಳದೆ ತಲುಪಿದಭಾರತ, ಫೈನಲ್‌ಗೆ ಲಗ್ಗೆ ಇಟ್ಟಿದೆ.

ಭಾರತ ಪಾಕಿಸ್ತಾನ ತಂಡಗಳುಕಳೆದ ಬಾರಿಯೂ ಸೆಮಿಫೈನಲ್‌ನಲ್ಲಿಮುಖಾಮುಖಿಯಾಗಿದ್ದವು. ಆಗಲೂ ಭಾರತವೇ ಗೆದ್ದಿತ್ತು.

ಉಭಯ ತಂಡಗಳು 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಇದುವರೆಗೆ 10 ಬಾರಿ ಮುಖಾಮುಖಿಯಾಗಿದ್ದು ತಲಾ ಐದು ಪಂದ್ಯಗಳನ್ನು ಗೆದ್ದಿವೆ.ಭಾರತವು ನಾಲ್ಕು ಬಾರಿ ಚಾಂಪಿಯನ್‌ ಆಗಿದ್ದರೆ, ಪಾಕ್‌ ಎರಡು ಬಾರಿ ಪ್ರಶಸ್ತಿ ಗೆದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.