ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ರಜತ್ ಪಾಟೀದಾರ್
ಚಿತ್ರಕೃಪೆ: @IPL
ಮುಲ್ಲನಪುರ, ಚಂಡೀಗಡ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿಗೆ ಪಂಜಾಬ್ ಕಿಂಗ್ಸ್ ತಂಡ ಕೇವಲ 102 ರನ್‌ಗಳ ಸಾಧಾರಣ ಗುರಿ ನೀಡಿದೆ.
ಆರ್‌ಸಿಬಿಯ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಪಂಜಾಬ್ ತಂಡ 14.1 ಓವರ್‌ಗಳಲ್ಲಿ 101 ರನ್‌ಗಳಿಗೆ ಆಲೌಟ್ ಆಗಿದೆ.
ಪಂಜಾಬ್ ಪರ ಪ್ರಭ್ ಸಿಮ್ರನ್ ಸಿಂಗ್(18), ಮಾರ್ಕಸ್ ಸ್ಟೋಯಿನಸ್(26), ಅಜ್ಮತುಲ್ಲಾ(18) ಬಿಟ್ಟರೆ ಬೇರಾವ ಬ್ಯಾಟರ್ ಎರಡಂಕಿ ದಾಟಲಿಲ್ಲ.
ಅದ್ಬುತ ಬೌಲಿಂಗ್ ಪ್ರದರ್ಶನ ನೀಡಿದ ಆರ್‌ಸಿಬಿಯ ಎಲ್ಲ ಟಾಪ್ ಬೌಲರ್‌ಗಳು ಪಂಜಾಬ್ ತಂಡಕ್ಕೆ ಸಿಂಹಸ್ವಪ್ನವಾದರು. ಜೋಶ್ ಹ್ಯಾಜಲ್‌ವುಡ್(21/3), ಸುಯಶ್ ಶರ್ಮಾ(17/3), ಯಶ್ ದಯಾಳ್(26/2) ಮತ್ತು ಭುವನೇಶ್ವರ್ ಕುಮಾರ್(17/1) ಶ್ರೇಷ್ಠ ಬೌಲಿಂಗ್ ಮೂಲಕ ಪಂಜಾಬ್ ತಂಡವನ್ನು 101ಕ್ಕೆ ಕಟ್ಟಿಹಾಕಿದರು.
ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡ ನೇರವಾಗಿ ಫೈನಲ್‌ಗೆ ಲಗ್ಗೆ ಇಡಲಿದೆ.
ಉಭಯ ತಂಡಗಳು ಲೀಗ್ ಹಂತದಲ್ಲಿ ಸಮಬಲದ ಸಾಧನೆ ಮಾಡಿವೆ. ತಮ್ಮ ಪಾಲಿನ 14 ಪಂದ್ಯಗಳ ಪೈಕಿ ತಲಾ 9 ಜಯ, 4 ಸೋಲು ಕಂಡಿವೆ. ರದ್ದಾದ ಒಂದು ಪಂದ್ಯದಲ್ಲಿ ಸಿಕ್ಕ ಒಂದು ಅಂಕ ಸೇರಿ 19 ಪಾಯಿಂಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡು, ಪಾಯಿಂಟ್ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿ ಕಾಣಿಸಿಕೊಂಡಿವೆ.
ಹನ್ನೊಂದರ ಬಳಗದಲ್ಲಿ ಬದಲಾವಣೆ
ಎರಡೂ ತಂಡಗಳು ಒಂದೊಂದು ಬದಲಾವಣೆಯೊಂದಿಗೆ ಕಣಕ್ಕಿಳಿದಿವೆ. ಕಳೆದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಉತ್ತಮ ಬೌಲಿಂಗ್ ಮಾಡಿದ್ದ ನುವಾನ್ ತುಸಾರ, ಅನುಭವಿ ವೇಗಿ ಜೋಶ್ ಹ್ಯಾಜಲ್‌ವುಡ್‌ಗೆ ಸ್ಥಾನ ಬಿಟ್ಟುಕೊಟ್ಟಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಸಲುವಾಗಿ ತವರಿಗೆ (ದಕ್ಷಿಣ ಆಫ್ರಿಕಾಗೆ) ಮರಳಿರುವ ಆಲ್‌ರೌಂಡರ್ ಮಾರ್ಕೋ ಯಾನ್ಸನ್ ಕಿಂಗ್ಸ್‌ಗೆ ಅಲಭ್ಯರಾಗಿದ್ದಾರೆ. ಅವರ ಬದಲು ಅಫ್ಗಾನಿಸ್ತಾನದ ಅಜ್ಮತ್‌ವುಲ್ಲಾ ಒಮರ್‌ಝೈ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.