ADVERTISEMENT

'ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯಲ್ಲ'; ವದಂತಿಗೆ ಸ್ಪಷ್ಟನೆ ನೀಡಿದ PCB

ಪಿಟಿಐ
Published 10 ಜನವರಿ 2025, 11:33 IST
Last Updated 10 ಜನವರಿ 2025, 11:33 IST
ಪಿಸಿಬಿ
ಪಿಸಿಬಿ   

ಲಾಹೋರ್‌: ಐಸಿಸಿ ಚಾಂಪಿಯನ್ಸ್‌ ಟ್ರೊಫಿ ಕ್ರಿಕೆಟ್‌ ಟೂರ್ನಿಗೆ ಆತಿಥ್ಯ ವಹಿಸಲಿರುವ ಪಾಕಿಸ್ತಾನದ ಮೂರು ಕ್ರೀಡಾಂಗಣಗಳಲ್ಲಿ ನಡೆಯುತ್ತಿರುವ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ, ಟೂರ್ನಿಯನ್ನು ದೇಶದಿಂದ ಸ್ಥಳಾಂತರಿಸಲಾಗಿದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಸ್ಪಷ್ಟನೆ ನೀಡಿದೆ.

ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಉದ್ಘಾಟನಾ ಪಂದ್ಯವು ಫೆಬ್ರುವರಿ 19ರಂದು ನಿಗದಿಯಾಗಿದೆ. ಕರಾಚಿಯ ನ್ಯಾಷನಲ್‌ ಸ್ಟೇಡಿಯಂನಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ.

ಪಾಕಿಸ್ತಾನದ ರಾವಲ್ಪಿಂಡಿ ಕ್ರೀಡಾಂಗಣ, ಕರಾಚಿಯ ನ್ಯಾಷನಲ್‌ ಸ್ಟೇಡಿಯಂ ಹಾಗೂ ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಭಾರತ ತಂಡವು ತನ್ನ ಪಾಲಿನ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ.

ADVERTISEMENT

ಟೂರ್ನಿಯ ಸ್ಥಳಾಂತರದ ಊಹಾಪೋಹಗಳನ್ನು ಅಲ್ಲಗಳೆದಿರುವ ಪಿಸಿಬಿ ಮೂಲಗಳು, 'ಪ್ರಸಾರಕರು, ಸಂಘಟಕರು ಸೇರಿಂತೆ ಐಸಿಸಿಯ ನಿಯೋಗವೇ ಪಾಕಿಸ್ತಾನದಲ್ಲಿ ಉಪಸ್ಥಿತಿ ಇರುವುದು, ಟೂರ್ನಿಯು ನಿಗದಿಯಂತೆ ನಡೆಯಲಿದೆ ಎಂಬುದನ್ನು ದೃಢೀಕರಿಸುತ್ತದೆ' ಎಂದಿವೆ.

'ಚಾಂಪಿಯನ್ಸ್‌ ಟ್ರೋಫಿಯಂತಹ ಟೂರ್ನಿಗಾಗಿ ಕ್ರೀಡಾಂಗಣಗಳನ್ನು ಮೇಲ್ದರ್ಜೆಗೇರಿಸಲು ಪಿಸಿಬಿಯು 12 ಬಿಲಿಯನ್ ಪಾಕಿಸ್ತಾನ ರೂಪಾಯಿ (ಅಂದಾಜು ₹ 370 ಕೋಟಿ) ವ್ಯಯಿಸುತ್ತಿದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ನಮ್ಮ ಮಾಧ್ಯಮಗಳೂ ಸತ್ಯ ತಿಳಿದುಕೊಳ್ಳದೆ, ಆಧಾರರಹಿತ ಸುದ್ದಿಗಳನ್ನು ಪ್ರಕಟಿಸಿರುವುದರಿಂದಾಗಿ ಹೇಳಿಕೆ ನೀಡಿದ್ದೇವೆ. ವದಂತಿಗಳಿಂದಾಗಿ ಪಿಸಿಬಿ, ಐಸಿಸಿ, ಸರ್ಕಾರ ಮತ್ತು ವಾಣಿಜ್ಯ ಪಾಲುದಾರರ ನಡುವೆ ಗೊಂದಲಗಳು ಮೂಡಲಿವೆ. ಅಭಿಮಾನಿಗಳು ಟಿಕೆಟ್‌ ಖರೀದಿಸುವುದು ಮತ್ತು ಇತರ ವಾಣಿಜ್ಯ ಚಟುವಟಿಕೆ ಮೇಲೂ ಪರಿಣಾಮ ಉಂಟಾಗಲಿದೆ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ವರದಿಗಾರರೊಬ್ಬರು, ಕರಾಚಿಯ ನ್ಯಾಷನಲ್‌ ಸ್ಟೇಡಿಯಂನಲ್ಲಿ ಕಾಮಗಾರಿ ನಡೆಯುತ್ತಿರುವ ದೃಶ್ಯಗಳನ್ನು ಅನುಮತಿ ಇಲ್ಲದೆ ಸೆರೆಹಿಡಿದು, ನಕಾರಾತ್ಮಕವಾಗಿ ಪ್ರಸಾರ ಮಾಡಿದ್ದರು ಎಂದು ಟೀಕಿಸಿರುವ ಅಧಿಕಾರಿ, 'ಪಿಸಿಬಿ, ಸಂಬಂಧಪಟ್ಟ ಅಧಿಕಾರಿಗಳು ಕ್ರೀಡಾಂಗಣದ ಕೆಲಸದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಚಾಂಪಿಯನ್ಸ್‌ ಟ್ರೋಫಿ ಪಂದ್ಯಗಳನ್ನು ನಿಗದಿಯಂತೆ ನಡೆಸಲು ಉತ್ಸುಕರಾಗಿದ್ದಾರೆ' ಎಂದು ಸ್ಪಷ್ಟಪಡಿಸಿದ್ದಾರೆ.

'ಕರಾಚಿಯ ನ್ಯಾಷನಲ್‌ ಸ್ಟೇಡಿಯಂನಲ್ಲಿ ನವೀಕರಣ ಹಾಗೂ ನಿರ್ಮಾಣ ಕಾರ್ಯಗಳು ವಿಳಂಬವಾಗಿವೆ. ಹೀಗಾಗಿ, ಇಲ್ಲಿ ಯಾವುದೇ ಪಂದ್ಯಗಳನ್ನು ನಡೆಸದಿರಲು ಪಿಸಿಬಿ ನಿರ್ಧರಿಸಿದೆ' ಎಂದು ಕಳೆದ ತಿಂಗಳು ವರದಿಗಳು ಪ್ರಕಟವಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.