ADVERTISEMENT

ಸಿಎಸ್‌ಕೆಗೆ ಜಡೇಜ ಅಲ್ಲ, ಈ ಆಟಗಾರ ನಾಯಕನಾಗಬೇಕಿತ್ತು: ರವಿ ಶಾಸ್ತ್ರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಏಪ್ರಿಲ್ 2022, 11:44 IST
Last Updated 11 ಏಪ್ರಿಲ್ 2022, 11:44 IST
ರವೀಂದ್ರ ಜಡೇಜ ಹಾಗೂ ಎಂಎಸ್ ಧೋನಿ – ಪಿಟಿಐ ಚಿತ್ರ
ರವೀಂದ್ರ ಜಡೇಜ ಹಾಗೂ ಎಂಎಸ್ ಧೋನಿ – ಪಿಟಿಐ ಚಿತ್ರ   

ಬೆಂಗಳೂರು: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್‌ ಟೂರ್ನಿಯಲ್ಲಿ ಆಡಿರುವ ಎಲ್ಲ ನಾಲ್ಕು ಪಂದ್ಯಗಳಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡವು ಸೋಲನುಭವಿಸಿದೆ.

ಈ ಬಾರಿಯ ಟೂರ್ನಿ ಆರಂಭಕ್ಕೂ ಕೆಲವೇ ದಿನಗಳ ಮುನ್ನ ಮಹೇಂದ್ರ ಸಿಂಗ್ ಧೋನಿ ಅವರು ತಂಡದ ನಾಯಕತ್ವವನ್ನು ರವೀಂದ್ರ ಜಡೇಜ ಅವರಿಗೆ ಬಿಟ್ಟುಕೊಟ್ಟಿದ್ದರು.

ಆದರೆ, ಸಿಎಸ್‌ಕೆಗೆ ಜಡೇಜ ನಾಯಕನಾಗಬಾರದಿತ್ತು. ಜಡೇಜ ತಮ್ಮ ಕ್ರಿಕೆಟ್ ಬಗ್ಗೆ ಗಮನ ಹರಿಸಬೇಕು. ಬದಲಿಗೆ ಬೇರೆ ನಾಯಕನನ್ನು ಸಿಎಸ್‌ಕೆ ನೇಮಕ ಮಾಡಬೇಕಿತ್ತು ಎಂದು ಟೀಮ್ ಇಂಡಿಯಾ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ. ಸಿಎಸ್‌ಕೆ ನಾಯಕನ ಸ್ಥಾನಕ್ಕೆ ತಮ್ಮ ಆಯ್ಕೆಯ ಆಟಗಾರ ಯಾರಾಗಿದ್ದರು ಎಂಬುದನ್ನೂ ಅವರು ಸೂಚಿಸಿದ್ದಾರೆ.

ದಕ್ಷಿಣ ಆಫ್ರಿಕಾ ಆಟಗಾರ ಫಫ್‌ ಡು ಪ್ಲೆಸಿ ಅವರನ್ನು ಕೈಬಿಡುವ ಮೂಲಕ ಸಿಎಸ್‌ಕೆ ತಪ್ಪು ಮಾಡಿದೆ. ಧೋನಿ ಅವರು ನಾಯಕತ್ವದಲ್ಲಿ ಮುಂದುವರಿಯಲು ಬಯಸುವುದಿಲ್ಲ ಎಂದಾದರೆ ಫಫ್‌ ಅವರನ್ನು ನಾಯಕನ ಸ್ಥಾನಕ್ಕೆ ನೇಮಕ ಮಾಡಬೇಕಿತ್ತು ಎಂದು ‘ಇಎಸ್‌ಪಿಎನ್ ಕ್ರಿಕ್ ಇನ್ಫೊ’ದ ‘ಟಿ20 ಟೈಮ್ ಔಟ್’ ಕಾರ್ಯಕ್ರಮದಲ್ಲಿ ರವಿ ಶಾಸ್ತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಜಡೇಜ ಅವರಂಥ ಆಟಗಾರರು ಅವರ ಕ್ರಿಕೆಟ್ ಬಗ್ಗೆಯಷ್ಟೇ ಗಮನಹರಿಸಬೇಕು. ಪಂದ್ಯ ಗೆಲ್ಲಿಸಿಕೊಡುವಂಥ ಸಾಮರ್ಥ್ಯವುಳ್ಳ ಮತ್ತು ತಂಡಕ್ಕಾಗಿ ಅನೇಕ ಉತ್ತಮ ಪಂದ್ಯಗಳನ್ನು ಆಡಿರುವ ಡು ಪ್ಲೆಸಿ ಅವರನ್ನು ಸಿಎಸ್‌ಕೆ ಕೈಬಿಡಬಾರದಿತ್ತು’ ಎಂದು ಅವರು ಹೇಳಿದ್ದಾರೆ.

ಕಳೆದ ಬಾರಿಯ ಚಾಂಪಿಯನ್ ತಂಡವಾಗಿರುವ ಸಿಎಸ್‌ಕೆ ಸದ್ಯ ಐಪಿಎಲ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಮಂಗಳವಾರದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿರುದ್ಧ ಸೆಣಸಲಿದೆ.

ಫಫ್‌ ಡು ಪ್ಲೆಸಿ ಅವರು ಸದ್ಯ ಆರ್‌ಸಿಬಿತಂಡದ ನಾಯಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.