ADVERTISEMENT

Ranji Trophy | ವಾಸುಕಿ ಕೌಶಿಕ್‌ಗೆ 4 ವಿಕೆಟ್; ಗುಜರಾತ್ 264ಕ್ಕೆ ಆಲೌಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜನವರಿ 2024, 12:49 IST
Last Updated 12 ಜನವರಿ 2024, 12:49 IST
<div class="paragraphs"><p>ಕರ್ನಾಟಕದ ಪರ&nbsp;ಸುಜಯ್ ಸತೇರಿ ಪದಾರ್ಪಣೆ.&nbsp;ನಾಯಕ ಮಯಂಕ್ ಅಗರವಾಲ್ ಕ್ಯಾಪ್ ನೀಡಿದರು. </p></div>

ಕರ್ನಾಟಕದ ಪರ ಸುಜಯ್ ಸತೇರಿ ಪದಾರ್ಪಣೆ. ನಾಯಕ ಮಯಂಕ್ ಅಗರವಾಲ್ ಕ್ಯಾಪ್ ನೀಡಿದರು.

   

ಅಹಮದಾಬಾದ್: ಅಮೋಘ ಬೌಲಿಂಗ್‌ ಪ್ರದರ್ಶನ ಮುಂದುವರಿಸಿದ ಮಧ್ಯಮ ವೇಗದ ಬೌಲರ್ ವಾಸುಕಿ ಕೌಶಿಕ್ ನಾಲ್ಕು ವಿಕೆಟ್‌ ಪಡೆದು ಮೊದಲ ದಿನ ಗಮನ ಸೆಳೆದರು. ಅವರ ಪರಿಣಾಮಕಾರಿ ಬೌಲಿಂಗ್ (49ಕ್ಕೆ4) ನೆರವಿನಿಂದ ಕರ್ನಾಟಕ ತಂಡ ರಣಜಿ ಟ್ರೋಫಿ  ‘ಸಿ’ ಗುಂಪಿನ ಪಂದ್ಯದ ಮೊದಲ ದಿನವಾದ ಶುಕ್ರವಾರ ಗುಜರಾತ್ ತಂಡವನ್ನು 264 ರನ್‌ಗಳಿಗೆ ಸೀಮಿತಗೊಳಿಸಿತು.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬ್ಯಾಟ್‌ ಮಾಡಲು ಕಳುಹಿಸಲ್ಪಟ್ಟ ಗುಜರಾತ್‌ 88ನೇ ಓವರ್‌ನಲ್ಲಿ ಆಲೌಟ್‌ ಆಯಿತು. ಕರ್ನಾಟಕ ಶನಿವಾರ ಇನಿಂಗ್ಸ್‌ ಆರಂಭಿಸಲಿದೆ.

ADVERTISEMENT

ಕರ್ನಾಟಕ ಆರಂಭದಲ್ಲಿ ಹೊಂದಿದ್ದ ಬಿಗಿಹಿಡಿತವನ್ನು ನಂತರ ಸ್ವಲ್ಪ ಮಟ್ಟಿಗೆ ಕಳೆದುಕೊಂಡಿತು. ಮಧ್ಯಮ ಕ್ರಮಾಂಕದ ಆಟಗಾರರಾದ ಕ್ಷಿತಿಜ್ ಪಟೇಲ್ (95, 111 ಎಸೆತ, 4X11) ಮತ್ತು ಉಮಂಗ್ ಕುಮಾರ್ (72, 143 ಎಸೆತ, 4X12) ಅವರು ತಂಡದ ರಕ್ಷಣೆಗೆ ನಿಂತರು. ತಂಡ ಮತ್ತೆ ಕುಸಿತ ಕಾಣುವಾಗ ನಾಯಕ ಚಿಂತನ್‌ ಗಜ ಅಜೇಯ 45 ರನ್ (92ಎ, 4x1, 6x3) ಗಳಿಸಿ ತಂಡ ಗೌರವಾರ್ಹ ಮೊತ್ತ ತಲುಪಲು ನೆರವಾದರು. ಕರ್ನಾಟಕಕ್ಕೆ ಮೊದಲ ದಿನವೇ ಬ್ಯಾಟಿಂಗ್ ಅವಕಾಶ ದೊರೆಯುತಿತ್ತು.

ಗುಜರಾತ್‌ ಆರಂಭದಲ್ಲೇ ತೊಂದರೆಗೆ ಸಿಲುಕಿಕೊಂಡಿತು. ಪಂಜಾಬ್ ವಿರುದ್ಧದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಏಳು ವಿಕೆಟ್‌ ಪಡೆದಿದ್ದ 31 ವರ್ಷದ ಕೌಶಿಕ್, ಆರಂಭ ಆಟಗಾರ ಹೆಟ್‌ ಪಟೇಲ್ (4) ಮತ್ತು ಸನ್‌ಪ್ರೀತ್ ಸಿಂಗ್ ಬಗ್ಗಾ (0) ಅವರ ವಿಕೆಟ್‌ಗಳನ್ನು ಪಡೆದು ಆತಿಥೇಯರಿಗೆ ಪೆಟ್ಟು ನೀಡಿದರು. ಐದು ಬೌಂಡರಿಗಳಿದ್ದ 24 ರನ್ ಹೊಡೆದ ಆರಂಭ ಆಟಗಾರ ಪ್ರಿಯಾಂಕ್ ಪಾಂಚಾಲ್ ನಿರ್ಗಮಿಸಿದಾಗ ತಂಡದ ಮೊತ್ತ 4 ವಿಕೆಟ್‌ಗೆ 45. ಈ ಹಂತದಲ್ಲಿ ಕ್ಷಿತಿಜ್ ಮತ್ತು ಉಮಂಗ್ ಅವರು 152 ರನ್‌ಗಳ ಉಪಯುಕ್ತ ಜೊತೆಯಾಟವಾಡಿದರು.

ಕ್ಷಿತಿಜ್‌, ಶತಕಕ್ಕೆ ಐದು ರನ್‌ಗಳಿರುವಾಗ ಕೌಶಿಕ್ ಬೌಲಿಂಗ್‌ನಲ್ಲಿ ವಿಕೆಟ್‌ ಕೀಪರ್‌ಗೆ ಕ್ಯಾಚ್ ನೀಡಿ ನಿರಾಶರಾಗಿ ಹಿಂತಿರುಗಿದರೆ, ಮೂರು ಓವರುಗಳ ನಂತರ ಅರ್ಧ ಶತಕ ಹೊಡೆದ ಉಮಂಗ್‌, ಎಡಗೈ ಸ್ಪಿನ್ನರ್ ರೋಹಿತ್ ಅವರಿಗೆ ವಿಕೆಟ್ ನೀಡಿದರು.

ವೈಶಾಖ್ ವಿಜಯಕುಮಾರ್, ಪ್ರಸಿದ್ಧ ಕೃಷ್ಣ ಮತ್ತು ರೋಹಿತ್ ಕುಮಾರ್ ತಲಾ ಎರಡು ವಿಕೆಟ್‌ ಪಡೆದರು. ಪ್ರಸಿದ್ಧಕೃಷ್ಣ 15ನೇ ಓವರ್ ಕೊನೆಯ ಎಸೆತಕ್ಕೆ ಮೊದಲು ಗಾಯಾಳಾದ ಕಾರಣ, ವೈಶಾಖ್ ಆ ಓವರ್ ಪೂರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.