ಜಮ್ಮು ಮತ್ತು ಕಾಶ್ಮೀರ ಆಟಗಾರರ ಸಂಭ್ರಮ
(ಚಿತ್ರ ಕೃಪೆ: X/@BCCIdomestic)
ಮುಂಬೈ: ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಶಿವಂ ದುಬೆ, ಶಾರ್ದೂಲ್ ಠಾಕೂರ್...ಹೀಗೆ ತಾರಾ ಬಳಗವಿದ್ದ ಮುಂಬೈ ತಂಡದ ವಿರುದ್ಧದ ರಣಜಿ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ಐದು ವಿಕೆಟ್ ಅಂತರದ ಸ್ಮರಣೀಯ ಜಯ ಗಳಿಸಿದೆ.
ಮುಂಬೈ ತಂಡವನ್ನು ತವರಿನಲ್ಲಿ ಮಣಿಸುವುದು ಅಷ್ಟು ಸುಲಭವಲ್ಲ. ಆದರೆ ಪ್ರತಿಭಾವಂತ ಆಟಗಾರರಿಂದ ಕೂಡಿದ ಜಮ್ಮು ತಂಡವು, ಬಾಂದ್ರಾ–ಕುರ್ಲಾ ಸೆಂಟರ್ ಕ್ರೀಡಾಂಗಣದಲ್ಲಿ ನಡೆದ ಎಲೈಟ್ 'ಎ' ಗುಂಪಿನ ಪಂದ್ಯದಲ್ಲಿ ಮುಂಬೈಗೆ ಆಘಾತ ನೀಡುವಲ್ಲಿ ಯಶಸ್ವಿಯಾಗಿದೆ.
ಇಂದು ಮೂರನೇ ದಿನದಾಟದಲ್ಲಿ 205 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಜಮ್ಮು, 49 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಶುಭಂ ಕಜುರಿಯ (45), ವಿ. ಶರ್ಮಾ (38) ಹಾಗೂ ಅಬಿದ್ ಮುಶ್ತಾಕ್ (32*) ಉಪಯುಕ್ತ ಇನಿಂಗ್ಸ್ ಕಟ್ಟಿದರು. ಮುಂಬೈ ಪರ ನಾಲ್ಕು ವಿಕೆಟ್ ಗಳಿಸಿದ ಶಮ್ಸ್ ಮುಲಾನಿ ಹೋರಾಟ ವ್ಯರ್ಥವೆನಿಸಿತು.
ಉಮರ್ ನಜೀರ್ (41ಕ್ಕೆ 4) ಹಾಗೂ ಯಧುವೀರ್ ಸಿಂಗ್ (31ಕ್ಕೆ 4) ದಾಳಿಗೆ ತತ್ತರಿಸಿದ ಮುಂಬೈ ಮೊದಲ ಇನಿಂಗ್ಸ್‌ನಲ್ಲಿ ಕೇವಲ 120ಕ್ಕೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಜಮ್ಮು 206 ರನ್ ಗಳಿಸಿತ್ತು. ಆ ಮೂಲಕ ಮೊದಲ ಇನಿಂಗ್ಸ್‌ನಲ್ಲಿ 86 ರನ್‌ಗಳ ಮುನ್ನಡೆ ಪಡೆದಿತ್ತು. ಮುಂಬೈ ಪರ ಮೋಹಿತ್ ಅವಸ್ತಿ ಐದು ವಿಕೆಟ್ ಗಳಿಸಿದ್ದರು.
ಬಳಿಕ ಸಮಯೋಚಿತ ಶತಕ ಗಳಿಸಿದ ಶಾರ್ದೂಲ್ ಠಾಕೂರ್ (119) ಹಾಗೂ ತುನುಷ್ ಕೋಟ್ಯಾನ್ ಅರ್ಧಶತಕದ (62) ನೆರವಿನಿಂದ ಮುಂಬೈ ದ್ವಿತೀಯ ಇನಿಂಗ್ಸ್‌ನಲ್ಲಿ 290 ರನ್ ಗಳಿಸಿತ್ತು. ಜಮ್ಮು ಪರ ದ್ವಿತೀಯ ಇನಿಂಗ್ಸ್‌ನಲ್ಲಿ ಔಕಿಬ್ ನಬಿ ನಾಲ್ಕು, ಯಧುವೀರ್ ಮೂರು ಮತ್ತು ಉಮರ್ ಎರಡು ವಿಕೆಟ್ ಗಳಿಸಿದ್ದರು.
ಮುಂಬೈ ಪರ ರೋಹಿತ್ ಮೊದಲ ಇನಿಂಗ್ಸ್‌ನಲ್ಲಿ 3 ರನ್ ಗಳಿಸಿ ಔಟ್ ಆಗಿದ್ದರೆ ದ್ವಿತೀಯ ಇನಿಂಗ್ಸ್‌ನಲ್ಲಿ 28 ರನ್ ಮಾತ್ರ ಗಳಿಸಿದ್ದರು. ಯಶಸ್ವಿ ಜೈಸ್ವಾಲ್ ಸಹ ಎರಡೂ ಇನಿಂಗ್ಸ್‌ಗಳಲ್ಲಿ (4 ಹಾಗೂ 26) ವೈಫಲ್ಯ ಕಂಡಿದ್ದರು. ನಾಯಕ ಅಜಿಂಕ್ಯ ರಹಾನೆ (12 ಹಾಗೂ 16), ಶ್ರೇಯಸ್ ಅಯ್ಯರ್ (11 ಹಾಗೂ 17), ಶಿವಂ ದುಬೆ (ಎರಡು ಇನಿಂಗ್ಸ್‌ನಲ್ಲೂ ಶೂನ್ಯಕ್ಕೆ ಔಟ್) ಅವರಿಗೂ ಮಿಂಚಲು ಸಾಧ್ಯವಾಗಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.