ಆರ್‌ಸಿಬಿ ತಂಡದ ಲೊಗೊ
ಚಿತ್ರ ಕೃಪೆ: ಎಕ್ಸ್
ಮುಂಬೈ: 17 ವರ್ಷಗಳ ಕಾಯುವಿಕೆಯ ನಂತರ ಮೊದಲ ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹಿಂದೆಹಾಕಿ ಅತ್ಯಂತ ಮೌಲ್ಯಯುತ ಫ್ರಾಂಚೈಸಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಇದರ ಮೌಲ್ಯ ಸುಮಾರು ₹2,304.7 ಕೋಟಿಗೆ ಏರಿದೆ ಎಂದು ವರದಿಯೊಂದು ಮಂಗಳವಾರ ತಿಳಿಸಿದೆ. ಬಿಸಿಸಿಐ ನಿರ್ವಹಣೆಯ ಐಪಿಎಲ್‌ನ ಮೌಲ್ಯ ಶೇ 13.8 ರಷ್ಟು ಹೆಚ್ಚಳ ಕಂಡಿದ್ದು ₹33,412 ಕೋಟಿಗೆ ತಲುಪಿದೆ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್ ಹೂಲಿಹಾನ್ ಲೋಕಿ ವರದಿ ತಿಳಿಸಿದೆ.
ಉದ್ಯಮವಾಗಿ ಐಪಿಎಲ್ ಮೌಲ್ಯ ₹1.58 ಸಾವಿರ ಕೋಟಿಗೆ ಹೆಚ್ಚಿದೆ. ಇದು ಶೇ 12.9 ವೃದ್ಧಿ ಕಂಡಿದೆ ಎಂದೂ ವರದಿ ವಿವರಿಸಿದೆ.
ಅಂಬಾನಿ ಕುಟುಂಬ ಒಡೆತನದ ಮುಂಬೈ ಇಂಡಿಯನ್ಸ್ ಮೌಲ್ಯ ₹2073 ಕೋಟಿಗೆ ಏರಿಕೆಯಾಗಿದ್ದು ಮೌಲ್ಯಯುತ ತಂಡಗಳಲ್ಲಿ ಎರಡನೇ ಸ್ಥಾನದಲ್ಲಿದೆ. 2025ರ ಐಪಿಎಲ್‌ನಲ್ಲಿ ನಿರಾಶಾದಾಯಕ ಆಟವಾಡಿದ ಇಂಡಿಯಾ ಸಿಮೆಂಟ್ಸ್ ಮಾಲೀಕತ್ವದ ಸಿಎಸ್‌ಕೆ ತಂಡ ಮೂರನೇ ಸ್ಥಾನಕ್ಕೆ ಸರಿದಿದೆ. ಇದರ ಮೌಲ್ಯ ₹2013 ಕೋಟಿಗೆ ಇಳಿದಿದೆ. ಶಾರೂಕ್ ಖಾನ್ ಒಡೆತನದ ಕೋಲ್ಕತ್ತ ನೈಟ್ ರೈಡರ್ಸ್ (₹1945 ಕೋಟಿ) ನಾಲ್ಕನೇ ಸ್ಥಾನದಲ್ಲಿದೆ. ಸನ್‌ರೈಸರ್ಸ್ (₹1319 ಕೋಟಿ) ಹೈದರಾಬಾದ್, ಪಂಜಾಬ್ ಕಿಂಗ್ಸ್ (₹1,208 ಕೋಟಿ) ನಂತರದ ಸ್ಥಾನಗಳಲ್ಲಿವೆ. ಇವುಗಳಲ್ಲಿ ಪಂಜಾಬ್ ಆರ್ಥಿಕವಾಗಿ ಅತಿ ಹೆಚ್ಚಿನ ಬೆಳವಣಿಗೆ (ಶೇ 39.6) ಕಂಡಿದೆ.
‘ಫ್ರಾಂಚೈಸಿಗಳ ಮೌಲ್ಯ ಸಾಕಷ್ಟು ಏರಿಕೆಯಾಗಿದೆ. ಮಾಧ್ಯಮ ಪ್ರಸಾರ ಹಕ್ಕು ಒಪ್ಪಂದ ದಾಖಲೆ ಮಟ್ಟಕ್ಕೆ ಏರಿದೆ. ಬ್ರಾಂಡ್ ಒಪ್ಪಂದಗಳೂ ಇದಕ್ಕೆ ಕಾಣಿಕೆ ನೀಡಿವೆ’ ಎಂದು ಬ್ಯಾಂಕ್‌ನ ಆರ್ಥಿಕ ಮತ್ತು ವ್ಯಾಲ್ಯೂಯೇಷನ್ ಅಡ್ವೈಸರಿಯ ನಿರ್ದೇಶಕ ಹರ್ಷ ತಾಳಿಕೋಟೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.