ವಿರಾಟ್ ಕೊಹ್ಲಿ ಭಾವುಕ
(ಪಿಟಿಐ ಚಿತ್ರ)
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ವಿರಾಟ್ ಕೊಹ್ಲಿ ಅವರ 18 ವರ್ಷಗಳ ಕಾಯುವಿಕೆಗೆ ಕೊನೆಗೂ ವಿರಾಮ ಬಿದ್ದಿದೆ.
ಅಹಮದಾಬಾದ್‌ನಲ್ಲಿ ಮಂಗಳವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಆರು ರನ್ ಅಂತರದ ಗೆಲುವು ದಾಖಲಿಸಿರುವ ಆರ್‌ಸಿಬಿ, ಚೊಚ್ಚಲ ಪ್ರಶಸ್ತಿ ಜಯಿಸಿದೆ.
ಪಂದ್ಯದ ಅಂತಿಮ ಹಂತದಲ್ಲಿ ಆರ್‌ಸಿಬಿ ಕಪ್ ಗೆಲ್ಲುವುದು ಖಚಿತವಾದ್ದಂತೆ ವಿರಾಟ್ ಕೊಹ್ಲಿ ಅವರಿಗೆ ತಮ್ಮ ಭಾವನೆಗಳನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಬೌಂಡರಿ ಗೆರೆ ಬಳಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ವಿರಾಟ್ ಮೇಲೆ ಕ್ಯಾಮೆರಾ ಕಣ್ಣುಗಳು ಕೇಂದ್ರಿತವಾಗಿದ್ದವು.
ಕೊನೆಯ ಎಸೆತದ ಬಳಿಕವಂತೂ ಅಕ್ಷರಶಃ ವಿರಾಟ್ ಅವರ ಭಾವನೆಗಳ ಕಟ್ಟೆ ಒಡೆಯಿತು. ಏನು ಮಾಡಬೇಕೆಂದು ತೋಚದೇ ಕೆಲವು ಕ್ಷಣ ಮೈದಾನದಲ್ಲೇ ಆನಂದಭಾಷ್ಪ ಸುರಿಸಿದರು. ಆ ವೇಳೆಗೆ ತಂಡದ ಸಹ ಆಟಗಾರರು ತಬ್ಬಿಕೊಂಡರು.
ವಿರಾಟ್ ಪಾಲಿಗೆ ಇದು ಕೇವಲ ತಮ್ಮ ವೈಯಕ್ತಿಕ ಗುರಿ ಮಾತ್ರ ಆಗಿರಲಿಲ್ಲ. ಸಾವಿರಾರು ಮಂದಿ ನಿಷ್ಠಾವಂತ ಅಭಿಮಾನಿಗಳ ಕನಸನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದರು.
ಪ್ರತಿ ಸಲವೂ ಏಳು-ಬೀಳುಗಳನ್ನು ಕಂಡಾಗಲೂ ಛಲ ಬಿಡದೇ ಹೋರಾಟವನ್ನು ಮುಂದುವರಿಸಿದರು. ಕೊನೆಗೂ ವಿಜಯದ ಮೆಟ್ಟಿಲು ಹತ್ತಿ ಟ್ರೋಫಿಗೆ ಮುತ್ತಿಕ್ಕಿದ್ದಾರೆ.
ವಿರಾಟ್ ಕೊಹ್ಲಿ
ಇತ್ತ ಬೆಂಗಳೂರಿನಲ್ಲಿ ಸಂಭ್ರಮ ಮನೆ ಮಾಡಿತು. ಅಭಿಮಾನಿಗಳು ಸಂಭ್ರಮದ ಅಲೆಯಲ್ಲಿ ತೇಲಾಡಿದ್ದಾರೆ. ಆರ್‌ಸಿಬಿ ಪರ ಜಯಘೋಷ ಮೊಳಗಿಸಿದ್ದಾರೆ. ಪಟಾಕಿ ಸಿಡಿಸಿ ಹಬ್ಬದ ವಾತಾವರಣ ಸೃಷ್ಟಿಸಿದ್ದಾರೆ.
ಈ ಗೆಲುವನ್ನು ಆರ್‌ಸಿಬಿ ಅಭಿಮಾನಿಗಳಿಗೆ ವಿರಾಟ್ ಅರ್ಪಿಸಿದ್ದಾರೆ. 'ಬೆಂಗಳೂರು ಸದಾ ನನ್ನ ಹೃದಯದಲ್ಲಿದ್ದು, ಇಷ್ಟು ನಿಷ್ಠಾವಂತ ಅಭಿಮಾನಿಗಳನ್ನು ಎಲ್ಲೂ ನೋಡಿಲ್ಲ. ಟ್ರೋಫಿಯೊಂದಿಗೆ ಬೆಂಗಳೂರಿಗೆ ಮರಳಲು ಕಾತರದಲ್ಲಿದ್ದೇನೆ' ಎಂದು ಹೇಳಿದ್ದಾರೆ.
'ಈ ಟ್ರೋಫಿ ನನ್ನಷ್ಟೇ ಬೆಂಗಳೂರಿನ ಅಭಿಮಾನಿಗಳಿಗೂ ಸಲ್ಲುತ್ತದೆ. ಕಳೆದ 18 ವರ್ಷಗಳಲ್ಲಿ ನಿರಂತರವಾಗಿ ಬೆಂಬಲಿಸಿದ್ದಾರೆ' ಎಂದು ಹೇಳಿದ್ದಾರೆ.
'ಆರ್‌ಸಿಬಿ ಮಾಜಿ ಆಟಗಾರರಾದ ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್ ಸಾನಿಧ್ಯವು ತಮ್ಮ ಸಂತಸವನ್ನು ಇಮ್ಮಡಿಗೊಳಿಸಿದೆ' ಎಂದು ವಿರಾಟ್ ಪ್ರತಿಕ್ರಿಯಿಸಿದ್ದಾರೆ.
'ನಾವೆಲ್ಲರೂ ಆರ್‌ಸಿಬಿಗಾಗಿ ಕಪ್ ಗೆಲ್ಲಲು ನಮ್ಮಿಂದಾಗ ಎಲ್ಲ ಪ್ರಯತ್ನಗಳನ್ನು ಮಾಡಿದ್ದೆವು. ಆದರೆ ಟ್ರೋಫಿ ಸ್ವಲ್ಪದರಲ್ಲೇ ತಪ್ಪಿ ಹೋಗಿತ್ತು. ಕೊನೆಗೂ ಟ್ರೋಫಿ ಗೆಲ್ಲಲು ಸಾಧ್ಯವಾಗಿರುವುದು ಅತ್ಯಂತ ಖುಷಿ ತಂದಿದೆ' ಎಂದು ಹೇಳಿದ್ದಾರೆ.
ಅಲ್ಲದೆ ವಿಲಿಯರ್ಸ್ ಹಾಗೂ ಗೇಲ್ ಜೊತೆಗೆ ನಿಂತು 'ಈ ಸಲ ಕಪ್ ನಮ್ದು' ಎಂದು ಹೇಳಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿವೆ.
ಪ್ರಶಸ್ತಿಗೆ ಮುತ್ತಿಕ್ಕಿದ ಕೊಹ್ಲಿ
ಸದಾ ತಮ್ಮ ಬೆನ್ನಿಗೆ ನಿಂತ ಪತ್ನಿ ಅನುಷ್ಕಾ ಶರ್ಮಾ ಅವರನ್ನು ವಿರಾಟ್ ತಬ್ಬಿಕೊಂಡಿರುವುದು ಮತ್ತೊಂದು ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು.
'ಅನುಷ್ಕಾ ಕಳೆದ 11 ವರ್ಷಗಳಿಂದ ನಮ್ಮೊಂದಿಗೆ ಇದ್ದಾರೆ. ಆಕೆ ಕೂಡಾ ಬೆಂಗಳೂರಿನವರೇ ಆಗಿದ್ದು, ಈ ಸಂಭ್ರಮ ಇಮ್ಮಡಿಗೊಳಿಸಿದ್ದಾರೆ. ಪ್ರತಿಯೊಂದು ಏಳು-ಬೀಳಿನಲ್ಲೂ ನನ್ನ ಬೆನ್ನಿಗೆ ನಿಂತಿದ್ದಾರೆ' ಎಂದು ತಿಳಿಸಿದ್ದಾರೆ.
ಸಂಭ್ರಮಾಚರಣೆ ಹೇಗೆ ಇರಲಿದೆ ಎಂದು ಕೇಳಿದಾಗ ಇಂದು ರಾತ್ರಿ ಮಗುವಿನಂತೆ ನಿದ್ರಿಸಲು ಇಷ್ಟಪಡುವುದಾಗಿ ಕೊಹ್ಲಿ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.