ವೇದಿಕೆ ಮೇಲೆ ರಿಂಕು ಸಿಂಗ್, ಶಾರುಖ್ ಖಾನ್ ಹಾಗೂ ವಿರಾಟ್ ಕೊಹ್ಲಿ
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 18ನೇ ಆವೃತ್ತಿಯ ಉದ್ಘಾಟನಾ ಸಮಾರಂಭದ ವೇಳೆ ಕೋಲ್ಕತ್ತ ನೈಟ್ ರೈಡರ್ಸ್‌ನ (ಕೆಕೆಆರ್)ಬ್ಯಾಟರ್ ರಿಂಕು ಸಿಂಗ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ಹಸ್ತಲಾಘವ ಮಾಡದಿರುವ ವಿಡಿಯೊ ಸಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಉದ್ಘಾಟನಾ ಸಮಾರಂಭದ ವೇಳೆ ವೇದಿಕೆ ಮೇಲಿದ್ದ ಬಾಲಿವುಡ್ ನಟ ಶಾರುಕ್ ಖಾನ್, ಮೊದಲಿಗೆ ವಿರಾಟ್ ಕೊಹ್ಲಿ ಅವರನ್ನು ಆಹ್ವಾನಿಸುತ್ತಾರೆ.
2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ಒಂದೇ ತಂಡದಲ್ಲಿ ಆಡುತ್ತಿರುವ ಏಕೈಕ ಆಟಗಾರ ಕೊಹ್ಲಿಯನ್ನು ಹೊಗಳುವ ಶಾರುಕ್, ನಂತರ ರಿಂಕು ಅವರನ್ನು ಕರೆಯುತ್ತಾರೆ.
ವೇದಿಕೆ ಮೇಲೆ ಬರುತ್ತಿದ್ದಂತೆ ಶಾರುಕ್ ಅವರನ್ನು ಆಲಂಗಿಸುವ ರಿಂಕು, ನಂತರ ತಲೆ ಬಗ್ಗಿಸಿಕೊಂಡು ಕೊಹ್ಲಿ ಸನಿಹದಲ್ಲೇ ಸಾಗಿ ವೇದಿಕೆಯ ಮತ್ತೊಂದು ತುದಿಗೆ ಹೋಗಿ ನಿಲ್ಲುತ್ತಾರೆ. ರಿಂಕು ತಮ್ಮ ಕೈಕುಲುಕಲು ಬರಬಹುದು ಎಂಬ ನಿರೀಕ್ಷೆಯಲ್ಲಿದ್ದ ಕೊಹ್ಲಿ ತಕ್ಷಣ ಹಿಂದೆ ಸರಿಯುತ್ತಾರೆ.
ಈ ಸಂದರ್ಭದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ರಿಂಕು ನಡೆಯನ್ನು ಹಲವರು ಟೀಕಿಸಿದ್ದಾರೆ.
'ರಿಂಕು ಸಿಂಗ್, ವಿರಾಟ್ ಕೊಹ್ಲಿ ಅವರನ್ನು ನಿರ್ಲಕ್ಷಿಸಿದ್ದಾರೆ', 'ರಿಂಕು ಸಿಂಗ್ ಅವರ ನಡೆ ಒಪ್ಪುವಂತಹದ್ದಲ್ಲ' ಎಂದು ಕಿಡಿಕಾರಿದ್ದಾರೆ.
ಇನ್ನೂ ಕೆಲವರು, 'ನಿಮ್ಮ ಸಮಸ್ಯೆಗಳನ್ನು ರಿಂಕು ರೀತಿ ಕಡೆಗಣಿಸಿ' ಎಂದು ಚಟಾಕಿ ಹಾರಿಸಿದ್ದಾರೆ. ಮತ್ತೆ ಕೆಲವರು, ರಿಂಕು ಅವರು ಮುಂದೆ ಹೋಗಿ ನಿಲ್ಲುವ ಭರದಲ್ಲಿ ಸರಿಯಾಗಿ ಗಮನಿಸಿಕೊಳ್ಳಲಿಲ್ಲ. ಇದನ್ನು ವಿವಾದ ಮಾಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.