ಆರ್‌ಸಿಬಿ ಗೆಲುವು ಸಾಧಿಸುತ್ತಿದ್ದಂತೆ ಸಂಭ್ರಮಿಸಿದ ಇಂಗ್ಲೆಂಡ್‌ನ ಮಾಜಿ ಪ್ರಧಾನಿ ರಿಷಿ ಸುನಕ್
ಅಹಮದಾಬಾದ್: ‘ನಾನು ಬೆಂಗಳೂರಿನ ಕುಟುಂಬದ ಹುಡುಗಿಯನ್ನು ಮದುವೆಯಾಗಿದ್ದೇನೆ. ಆದ್ದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನನ್ನ ಬೆಂಬಲ’ ಎಂದು ಇಂಗ್ಲೆಂಡ್‌ನ ಮಾಜಿ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ.
ಮಂಗಳವಾರ ಇಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯವನ್ನು ವೀಕ್ಷಿಸಿದ ಅವರು, ‘16 ವರ್ಷಗಳ ಹಿಂದೆ ಅಕ್ಷತಾಗೆ (ಇನ್ಫೊಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ಅವರ ಮಗಳು) ಕನ್ನಡ
ದಲ್ಲಿಯೇ ಮದುವೆ ಪ್ರಸ್ತಾವ ಮಾಡಿದ್ದೆ. ಆಗಿನಿಂದ ಇಲ್ಲಿಯವರೆಗೂ ನನ್ನ ಕನ್ನಡ ಉತ್ತಮವಾಗುತ್ತಿದೆ. ಕೆಲವು ವರ್ಷಗಳ ಹಿಂದೆ ನಾವು ಜೊತೆಯಾಗಿ ಪಂದ್ಯ ನೋಡಲು ಹೋಗಿದ್ದೆವು’ ಎಂದು ನೆನಪಿಸಿಕೊಂಡರು.
‘ನಾನು ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ. ಅವರು ನಿಜಕ್ಕೂ ಮಹಾನ್ ಆಟಗಾರ. ಅವರು ಹಸ್ತಾಕ್ಷರ ಮಾಡಿರುವ ಬ್ಯಾಟ್ ನನ್ನ ಬಳಿ ಇದೆ. ಅದು ನನ್ನ ದೊಡ್ಡ ಆಸ್ತಿ’ ಎಂದರು.
‘ಒಂದು ಶತಮಾನದ ನಂತರ ಒಲಿಂಪಿಕ್ ಕೂಟದಲ್ಲಿ ಕ್ರಿಕೆಟ್ ಮರು ಸೇರ್ಪಡೆಯಾಗಲು ಭಾರತವೇ ಕಾರಣ. 21ನೇ ಶತಮಾನದಲ್ಲಿ ಭಾರತವು ವಿಶ್ವದ ಪ್ರಭಾವಿ ದೇಶವಾಗಿ ಬೆಳೆಯುತ್ತಿದೆ. ಅದೇ ಕಾರಣಕ್ಕೆ ಕ್ರಿಕೆಟ್ ನೂರು ವರ್ಷಗಳ ನಂತರ ಒಲಿಂಪಿಕ್ಸ್‌ಗೆ ಮರಳಿದೆ’ ಎಂದರು.
2028ರ ಲಾಸ್ ಏಂಜಲೀಸ್ ಒಲಿಂಪಿಕ್ ಕೂಟದಲ್ಲಿ ಕ್ರಿಕೆಟ್ ಸೇರ್ಪಡೆಯಾಗಿದೆ. 1900ರ ಒಲಿಂಪಿಕ್ಸ್ ನಂತರ ಮರುಸೇರ್ಪಡೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.