ರೋಹಿತ್ ಶರ್ಮಾ, ಎಬಿ ಡಿವಿಲಿಯರ್ಸ್
(ಪಿಟಿಐ ಚಿತ್ರ)
ನವದೆಹಲಿ: 'ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ರೋಹಿತ್ ಶರ್ಮಾ, ಶ್ರೇಷ್ಠ ನಾಯಕರಾಗಿದ್ದು, ನಿವೃತ್ತಿ ಹೊಂದಲು ಕಾರಣಗಳೇ ಇಲ್ಲ' ಎಂದು ದಕ್ಷಿಣ ಆಫ್ರಿಕಾದ ದಿಗ್ಗಜ ಎಬಿ ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಬಳಿಕ 37 ವರ್ಷದ ರೋಹಿತ್ ನಿವೃತ್ತಿ ಘೋಷಿಸಲಿದ್ದಾರೆ ಎಂದು ವರದಿಗಳು ವ್ಯಾಪಕವಾಗಿ ಹರಿದಾಡಿತ್ತು. ಆದರೆ ಟ್ರೋಫಿ ಗೆಲುವಿನ ಬಳಿಕ ಈ ಕುರಿತು ಸ್ಪಷ್ಟನೆ ನೀಡಿದ್ದ ರೋಹಿತ್, 'ನಾನು ನಿವೃತ್ತಿ ಹೊಂದುವುದಿಲ್ಲ' ಎಂದು ತಿಳಿಸಿದ್ದರು.
ರೋಹಿತ್ ಬಗ್ಗೆ ಡಿವಿಲಿಯರ್ಸ್ ಗುಣಗಾನ ಮಾಡಿದ್ದಾರೆ. 'ನೀವೇ ಅಂಕಿಅಂಶಗಳನ್ನು ನೋಡಿ. ಇತರೆ ನಾಯಕರನ್ನು ಹೋಲಿಸಿದಾಗ ರೋಹಿತ್ ಶೇ 74ರಷ್ಟು ಗೆಲುವನ್ನು ಹೊಂದಿದ್ದಾರೆ. ಇದು ಇತರೆಲ್ಲ ನಾಯಕರಿಗಿಂತಲೂ ಉತ್ತಮವಾಗಿದೆ' ಎಂದು ಹೇಳಿದ್ದಾರೆ.
'ಅವರು ಇದೇ ಸಾಧನೆ ಮುಂದುವರಿಸಿದರೆ ಏಕದಿನ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಅತ್ಯುತ್ತಮ ನಾಯಕರಲ್ಲಿ ಒಬ್ಬರಾಗಬಲ್ಲರು. ರೋಹಿತ್ ನಿವೃತ್ತಿ ಹೊಂದುವುದಿಲ್ಲ. ಅವರೇ ವದಂತಿಗಳನ್ನು ಹಬ್ಬಿಸಬೇಡಿ ಎಂದು ವಿನಂತಿಸಿರುವುದಾಗಿ' ಡಿವಿಲಿಯರ್ಸ್ ತಿಳಿಸಿದ್ದಾರೆ.
'ಅವರು ಯಾತಕ್ಕಾಗಿ ನಿವೃತ್ತಿ ಹೊಂದಬೇಕು? ಓರ್ವ ಆಟಗಾರ ಹಾಗೂ ನಾಯಕರಾಗಿ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. ಫೈನಲ್‌ನಲ್ಲಿ 76 ರನ್ ಗಳಿಸಿದ್ದಾರೆ. ನಾಯಕರಾಗಿ ಮುಂದೆ ನಿಂತು ಒತ್ತಡವನ್ನು ನಿಭಾಯಿಸಿದ್ದರಲ್ಲದೆ ಭದ್ರ ಅಡಿಪಾಯ ಹಾಕುವ ಮೂಲಕ ತಂಡವನ್ನು ವಿಜಯದತ್ತ ಮುನ್ನಡೆಸಿದ್ದಾರೆ' ಎಂದು ಡಿವಿಲಿಯರ್ಸ್ ಹೊಗಳಿದ್ದಾರೆ.
'ಕಳೆದ ಎರಡು-ಮೂರು ವರ್ಷಗಳಲ್ಲಿ ರೋಹಿತ್ ತಮ್ಮ ಆಟದ ಶೈಲಿಯನ್ನೇ ಬದಲಾಯಿಸಿದ್ದಾರೆ. ಪವರ್ ಪ್ಲೇಯಲ್ಲಿ ಆಕ್ರಮಣಕಾರಿ ಆಟವಾಡುತ್ತಾರೆ. ತಂಡಕ್ಕಾಗಿ ತಮ್ಮ ಆಟದಲ್ಲಿ ಸಾಕಷ್ಟು ಬದಲಾವಣೆ ತಂದಿದ್ದಾರೆ. ಅವರ ದಾಖಲೆಗಳೇ ಇದನ್ನು ಸಾರುತ್ತಿವೆ' ಎಂದು ಡಿವಿಲಿಯರ್ಸ್ ಹೇಳಿದ್ದಾರೆ.
ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಾಲ್ಕು ವಿಕೆಟ್ ಅಂತರದ ಗೆಲುವು ದಾಖಲಿಸಿದ್ದ ಭಾರತ, ಮೂರನೇ ಸಲ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ನಾಯಕನ ಆಟವಾಡಿದ್ದ ರೋಹಿತ್ 76 ರನ್ ಗಳಿಸಿ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.