ADVERTISEMENT

India vs Sri Lanka – ಪದಾರ್ಪಣೆಯ ಕನಸಿನಲ್ಲಿ ಯುವ ಆಟಗಾರರು

ಭಾರತ–ಶ್ರೀಲಂಕಾ ಏಕದಿನ ಸರಣಿ ಇಂದಿನಿಂದ; ದಸುನ್ ಶನಕಾ ಬಳಗಕ್ಕೆ ಧವನ್ ಪಡೆ ಸವಾಲು

ಪಿಟಿಐ
Published 17 ಜುಲೈ 2021, 19:22 IST
Last Updated 17 ಜುಲೈ 2021, 19:22 IST
ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ಶಿಖರ್ ಧವನ್ 
ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ಶಿಖರ್ ಧವನ್    

ಕೊಲಂಬೊ: ಕರ್ನಾಟಕದ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ ಮತ್ತು ಆಲ್‌ರೌಂಡರ್ ಕೃಷ್ಣಪ್ಪ ಗೌತಮ್ ಸೇರಿದಂತೆ ಆರು ಜನ ಯುವ ಆಟಗಾರರು ಪದಾರ್ಪಣೆಗಾಗಿ ಕಾದಿರುವ ಸೀಮಿತ ಓವರ್‌ಗಳ ಸರಣಿಯು ಭಾನುವಾರದಿಂದ ಆರಂಭವಾಗಲಿದೆ.

ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಶಿಖರ್ ಧವನ್ ನಾಯಕತ್ವದ ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ.

ಮೂರು ಏಕದಿನ ಪಂದ್ಯಗಳ ಈ ಸರಣಿಯ ನಂತರ ಟಿ20 ಕ್ರಿಕೆಟ್ ಸರಣಿಯೂ ನಡೆಯಲಿದೆ. ಈ ಎರಡೂ ಸರಣಿಗಳಲ್ಲಿ ಸಿಗುವ ಅವಕಾಶದಲ್ಲಿ ಉತ್ತಮವಾಗಿ ಆಡಿ ಮುಂಬರುವ ಟ್ವೆಂಟಿ–20 ವಿಶ್ವಕಪ್ ಟೂರ್ನಿಯಲ್ಲಿ ಸ್ಥಾನ ಪಡೆಯುವತ್ತ ಯುವ ಪ್ರತಿಭೆಗಳು ಚಿತ್ತ ನೆಟ್ಟಿದ್ದಾರೆ.

ಇದೇ ಮೊದಲ ಬಾರಿಗೆ ಭಾರತದ ಎರಡನೇ ತಂಡವು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನ ಸಾಮರ್ಥ್ಯ ತೋರಲಿದೆ. ವಿರಾಟ್ ಕೊಹ್ಲಿ ನಾಯಕತ್ವದ ಬಳಗವು ಇಂಗ್ಲೆಂಡ್‌ ಪ್ರವಾಸದಲ್ಲಿದೆ.

ಪೃಥ್ವಿ ಶಾ, ಶಿಖರ್, ಹಾರ್ದಿಕ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ ಈ ಪಂದ್ಯದಲ್ಲಿ ಕಣಕ್ಕಿಳಿಯುವುದು ಖಚಿತ. ಇನ್ನುಳಿದಂತೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪದಾರ್ಪಣೆಗಾಗಿ ಕಾದಿರುವ ಪಡಿಕ್ಕಲ್, ಗೌತಮ್, ನಿತೀಶ್ ರಾಣಾ, ಋತುರಾಜ್ ಗಾಯಕವಾಡ್, ಚೇತನ್ ಸಕಾರಿಯಾ ಅವರಲ್ಲಿ ಯಾರಿಗೆ ಕಣಕ್ಕಿಳಿಯುವ ಅವಕಾಶ ದೊರೆಯಲಿದೆ ಎಂಬ ಕುತೂಹಲ ಗರಿಗೆದರಿದೆ.

ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಅವರಿಬ್ಬರಲ್ಲಿಯೂ ಪೈಪೋಟಿ ಇದೆ. ಯಜುವೇಂದ್ರ ಚಾಹಲ್, ನವದೀಪ್ ಸೈನಿ ಮತ್ತು ಮನೀಷ್ ಪಾಂಡೆಗೆ ತಮ್ಮ ಲಯಕ್ಕೆ ಮರಳುವ ಸವಾಲು ಇದೆ.

ಆತಿಥೇಯ ಶ್ರೀಲಂಕಾ ತಂಡದ ಕೆಲವು ಆಟಗಾರರು ಇಂಗ್ಲೆಂಡ್ ಪ್ರವಾಸದಿಂದ ಮರಳಿದ ನಂತರ ಕೋವಿಡ್ ಸೋಂಕಿಗೊಳಗಾಗಿದ್ದರು. ಇದೀಗ ದಸುನ್ ಶನಕ ಅವರ ನಾಯಕತ್ವದಲ್ಲಿ ತಂಡವು ಕಣಕ್ಕಿಳಿಯಲಿದೆ. ತವರಿನಲ್ಲಿ ಗೆಲುವಿನ ಸಿಹಿ ಸವಿಯುವತ್ತ ಚಿತ್ತ ನೆಟ್ಟಿದೆ.

ತಂಡಗಳು: ಭಾರತ: ಶಿಖರ್ ಧವನ್ (ನಾಯಕ), ಪೃಥ್ವಿ ಶಾ, ದೇವದತ್ತ ಪಡಿಕ್ಕಲ್, ಋತುರಾಜ್ ಗಾಯಕವಾಡ, ಸೂರ್ಯಕುಮಾರ್ ಯಾದವ್, ಮನೀಷ್ ಪಾಂಡೆ, ನಿತೀಶ್ ರಾಣಾ, ಇಶಾನ್ ಕಿಶನ್ (ವಿಕೆಟ್‌ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಕೃಷ್ಣಪ್ಪ ಗೌತಮ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ರಾಹುಲ್ ಚಾಹರ್,ದೀಪಕ್ ಚಾಹರ್, ಭುವನೇಶ್ವರ್ ಕುಮಾರ್, ಚೇತನ್ ಸಕಾರಿಯಾ, ನವದೀಪ್ ಸೈನಿ.

ಶ್ರೀಲಂಕಾ: ದಸುನ್ ಶನಕಾ (ನಾಯಕ), ಧನಂಜಯ ಡಿಸಿಲ್ವಾ (ಉಪನಾಯಕ), ಅವಿಷ್ಕಾ ಫರ್ನಾಂಡೊ, ಭಾನುಕಾ ರಾಜಪಕ್ಷ, ಪಥುಮ್ ನಿಸಾಂಕಾ, ಚರಿತ್ ಅಸಲೆಂಕಾ, ವಾಣಿಂದು ಹಸರಂಗ, ಅಶೆನ್ ಭಂಡಾರ, ಮಿನೊದ ಭಾನುಕಾ, ಲಾಹೀರು ಉದಾರ, ರಮೇಶ್ ಮೆಂಡಿಸ್, ಚಮಿಕಾ ಕರುಣಾರತ್ನೆ, ದುಷ್ಮಂತ ಚಾಮೀರಾ, ಲಕ್ಷನ್ ಸಂದಕನ್, ಇಶಾನ್ ಜಯರತ್ನೆ, ಪ್ರವೀಣ ಜಯವಿಕ್ರಮ, ಅಸಿತಾ ಫರ್ನಾಂಡೊ, ಕಸುನ್ ರಜಿತಾ, ಲಾಹಿರು ಕುಮಾರ್, ಇಸುರು ಉಡಾನ.

ಪಂದ್ಯ ಆರಂಭ: ಮಧ್ಯಾಹ್ನ 3ರಿಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.