ಸಚಿನ್ ತೆಂಡೂಲ್ಕರ್ ವರ್ಣಚಿತ್ರ ಅನಾವರಣ
ಚಿತ್ರ ಕೃಪೆ: @sachin_rt
ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಮೂರನೇ ಟೆಸ್ಟ್ ಪಂದ್ಯ ಆರಂಭವಾಗುವುದಕ್ಕೂ ಮೊದಲು ಲಾರ್ಡ್ಸ್‌ನ ಎಂಸಿಸಿ ವಸ್ತು ಸಂಗ್ರಹಾಲಯದಲ್ಲಿ ಭಾರತೀಯ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ವರ್ಣಚಿತ್ರವನ್ನು ಅನಾವರಣಗೊಳಿಸಲಾಯಿತು.
ಕಲಾವಿದ ಸ್ಟುವರ್ಟ್ ಪಿಯರ್ಸನ್ ರೈಟ್ ಅವರು ಈ ವರ್ಣಚಿತ್ರವನ್ನು ರಚಿಸಿದ್ದಾರೆ. 18 ವರ್ಷಗಳ ಹಿಂದಿನ ಸಚಿನ್ ತೆಂಡೂಲ್ಕರ್ ಅವರ ಭಾವಚಿತ್ರವನ್ನು ಸ್ಟುವರ್ಟ್ ಅವರು ಪೇಟಿಂಗ್ ಮಾಡಿದ್ದಾರೆ. ಈ ವರ್ಷದ ಅಂತ್ಯದವರೆಗೆ ಚಿತ್ರವು ವಸ್ತುಸಂಗ್ರಹಾಲಯದಲ್ಲಿ ಇರಲಿದೆ. ನಂತರ ಪೆವಿಲಿಯನ್‌ಗೆ ಸ್ಥಳಾಂತರ ಮಾಡಲಾಗುವುದು.
ಈ ಹಿಂದೆ ಸ್ಟುವರ್ಟ್ ಅವರು ಭಾರತದ ದಿಗ್ಗಜ ಕ್ರಿಕೆಟಿಗರಾದ ಕಪಿಲ್ ದೇವ್, ಬಿಷನ್ ಸಿಂಗ್ ಬೇಡಿ ಮತ್ತು ದಿಲೀಪ್ ವೆಂಗಸರ್ಕಾರ್ ಅವರ ಚಿತ್ರಗಳನ್ನೂ ರಚಿಸಿದ್ದರು.
‘ಇದು ನನಗೆ ಲಭಿಸಿರುವ ಬಹಳ ದೊಡ್ಡ ಗೌರವ. ಭಾರತ ತಂಡವು 1983ರಲ್ಲಿ ವಿಶ್ವಕಪ್ ಗೆದ್ದ ಫೈನಲ್ ನಡೆದಿದ್ದ ಲಾರ್ಡ್ಸ್ ಕ್ರೀಡಾಂಗಣದ ಬಗ್ಗೆ ಮೊದಲ ಬಾರಿಗೆ ಪರಿಚಯವಾಗಿತ್ತು. ತಂಡದ ನಾಯಕ ಕಪಿಲ್ ದೇವ್ ಅವರು ಅವತ್ತು ವಿಶ್ವಕಪ್ ಎತ್ತಿಹಿಡಿದ ದೃಶ್ಯವನ್ನು ನೋಡಿ ಕ್ರಿಕೆಟಿಗನಾಗುವ ಕನಸುಕಂಡಿದ್ದೆ. ಇದೀಗ ನನ್ನ ಚಿತ್ರ ಇಲ್ಲಿಯ ಪೆವಿಲಿಯನ್‌ನಲ್ಲಿ ಸ್ಥಾನ ಪಡೆಯಲಿದೆ. ನನ್ನ ವೃತ್ತಿಜೀವನವನ್ನು ಮರಳಿ ನೋಡಿದಾಗ ಸಂತೃಪ್ತಿಯ ನಗು ಮೂಡುತ್ತದೆ. ಇದು ನಿಜಕ್ಕೂ ವಿಶೇಷ ’ ಎಂದು ಸಚಿನ್ ಪ್ರತಿಕ್ರಿಯಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಫೋಟೊಗಳನ್ನು ಹಂಚಿಕೊಂಡಿರುವ ಸಚಿನ್, ‘ಲಾರ್ಡ್ಸ್‌ಗೆ ನಾನು ಮೊದಲ ಬಾರಿ 1988ರಲ್ಲಿ ಬಂದಾಗ ಇನ್ನು ಹದಿಹರೆಯದ ವಯಸ್ಸಾಗಿತ್ತು. 1989ರಲ್ಲಿ ಸ್ಟಾರ್ ಕ್ರಿಕೆಟ್ ಕ್ಲಬ್ ತಂಡದೊಂದಿಗೆ ವಾಪಸ್ಸಾಗಿದ್ದೆ. ಪೆವಿಲಿಯನ್‌ನಲ್ಲಿ ನಿಂತುಕೊಂಡು, ಇತಿಹಾಸವನ್ನು ನೆನೆಪಿಸಿಕೊಳ್ಳುತ್ತಿದುದು ಮತ್ತು ಕನಸು ಕಾಣುತ್ತಿದುದು ಇನ್ನೂ ನೆನೆಪಿದೆ. ಇಂದು ಇದೇ ಜಾಗದಲ್ಲಿ ನನ್ನದೇ ಭಾವಚಿತ್ರವನ್ನು ಅನಾವರಣಗೊಳಿಸಿರುವುದನ್ನು ವಿವರಿಸಲು ಪದಗಳು ಸಾಲುತ್ತಿಲ್ಲ. ಜೀವನ ವೃತ್ತಾಕಾರವಾಗಿದೆ. ಅದ್ಭುತ ನೆನಪನ್ನು ಪಡೆದಿರುವುದಕ್ಕೆ ಹೆಮ್ಮೆಯಿದೆ’ ಎಂದು ಬರೆದುಕೊಂಡಿದ್ದಾರೆ.
‘ನಾನು ಈ ಹಿಂದೆ ರಚಿಸಿದ್ದ ತೈಲಚಿತ್ರಗಳಿಗಿಂತಲೂ ಸಚಿನ್ ಅವರ ಚಿತ್ರ ವಿಭಿನ್ನವಾಗಿರಬೇಕು ಎಂದು ಐಸಿಸಿ ಬಯಸಿತ್ತು. ಆದ್ದರಿಂದ ಸಚಿನ್ ಅವರ ಶಿರಭಾಗಕ್ಕೆ ಹೆಚ್ಚು ಒತ್ತು ನೀಡಿದೆ. ಹಿನ್ನೆಲೆಯನ್ನೂ ವಿಭಿನ್ನವಾಗಿ ಬದಲಿಸಿರುವೆ’ ಎಂದು ಕಲಾವಿದ ಪಿಯರ್ಸ್ ರೈಟ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.