ಐಪಿಎಲ್ ಪಂದ್ಯ ವೀಕ್ಷಣೆಗೆ ಬಂದಿದ್ದ ಸಂಜನಾ ಗಣೇಶನ್ ಮತ್ತು ಪುತ್ರ ಅಂಗದ್ ಬೂಮ್ರಾ
ನವದೆಹಲಿ: ಮಗನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಟ್ರೋಲ್‌ಗಳಿಗೆ ಪ್ರತಿಕ್ರಿಯಿಸಿರುವ ಕ್ರಿಕೆಟಿಗ ಜಸ್‌ಪ್ರೀತ್ ಬೂಮ್ರಾ ಪತ್ನಿ ಸಂಜನಾ ಗಣೇಶನ್ ‘ನಮ್ಮ ಮಗ ನಿಮ್ಮ ಮನರಂಜನೆಯ ವಿಷಯವಲ್ಲ’ ಎಂದು ಕಿಡಿಕಾರಿದ್ದಾರೆ.
ಭಾನುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡ ಮುಖಾಮುಖಿಯಾಗಿದ್ದವು. ಈ ವೇಳೆ ಸಂಜನಾ ಗಣೇಶನ್ ಮಗ ಅಂಗದ್ ಜತೆಯಲ್ಲಿ ಕ್ರೀಡಾಂಗಣದಲ್ಲಿ ಹಾಜರಿದ್ದರು. ಪಂದ್ಯದಲ್ಲಿ ಬೂಮ್ರಾ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಈ ವೇಳೆ ಮಗ ಅಂಗದ್ ಸಪ್ಪೆ ಮೋರೆ ಹಾಕಿ ಕುಳಿತಿದ್ದನ್ನು ನೋಡಿ ನೆಟ್ಟಿಗರು ಬೂಮ್ರಾ ಮಗನಿಗೆ ಮಾನಸಿಕ ಸಮಸ್ಯೆಯಿದೆ ಎನ್ನುವಂತೆ ಟೀಕಿಸಿ ಟ್ರೋಲ್ ಮಾಡಿದ್ದರು.
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಸಂಜನಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಟ್ರೋಲಿಗರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
‘ನಮ್ಮ ಮಗ ನಿಮ್ಮ ಮನರಂಜನೆಯ ವಸ್ತುವಲ್ಲ. ಸಾಮಾನ್ಯವಾಗಿ ಬೂಮ್ರಾ ಮತ್ತು ನಾನು ಅಂಗದ್‌ನನ್ನು ಸಾಮಾಜಿಕ ಜಾಲತಾಣಗಳಿಂದ ದೂರವಿಡುತ್ತೇವೆ. ಕ್ಯಾಮೆರಾ ಮತ್ತು ಜನರನ್ನು ತುಂಬಿರುವ ಕ್ರಿಕೆಟ್ ಕ್ರೀಡಾಂಗಣಕ್ಕೆ ಅಂಗದ್‌ನನ್ನು ಕರೆದುಕೊಂಡು ಬರುವುದರ ಪರಿಣಾಮ ಏನು ಎನ್ನುವುದು ಗೊತ್ತಿದೆ. ಆದರೆ, ದಯವಿಟ್ಟು ಅರ್ಥಮಾಡಿಕೊಳ್ಳಿ ನಾನು ಮತ್ತು ಅಂಗದ್ ಜಸ್‌ಪ್ರೀತ್‌ಗೆ ಹುರಿದುಂಬಿಸಲು ಬಂದಿದ್ದೆವು’
‘ಒಂದೂವರೆ ವರ್ಷದ ಮಗುವಿಗೆ ಮಾನಸಿಕ ಸಮಸ್ಯೆಯಿದೆ, ಇದು ಆಘಾತಕಾರಿ ಎನ್ನುವ ಮಾತುಗಳನ್ನು ಆಡುವುದು ನಿಜಕ್ಕೂ ಬೇಸರದ ಸಂಗತಿ. ನಮ್ಮ ಮಗುವಿನ ಬಗ್ಗೆಯಾಗಲಿ, ನಮ್ಮ ಜೀವನದ ಬಗ್ಗೆಯಾಗಲಿ ನಿಮಗೆ ಏನೂ ತಿಳಿದಿಲ್ಲ. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಇರಿಸಿಕೊಳ್ಳಿ, ಅದು ನಿಜವಲ್ಲ’ ಎಂದು ಬರೆದುಕೊಂಡಿದ್ದಾರೆ.
ಕ್ರಿಕೆಟಿಗ ಜಸ್‌ಪ್ರೀತ್ ಬೂಮ್ರಾ ಪತ್ನಿ ಸಂಜನಾ ಗಣೇಶನ್ ಹಂಚಿಕೊಂಡಿರುವ ಇನ್‌ಸ್ಟಾಗ್ರಾಂ ಪೋಸ್ಟ್
ಬೂಮ್ರಾ ದಾಖಲೆ
ವಿಶ್ವಶ್ರೇಷ್ಠ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಅವರು, ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಅತಿಹೆಚ್ಚು ವಿಕೆಟ್ ಪಡೆದ ಆಟಗಾರ ಎನಿಸಿಕೊಂಡರು.
ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಏಡನ್ ಮಾರ್ಕ್ರಂ ವಿಕೆಟ್ ಪಡೆಯುವ ಮೂಲಕ ಅವರು ಈ ಸಾಧನೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.