ADVERTISEMENT

ಕ್ರಿಕೆಟ್‌ ಅನ್ನು ರಾಜಕೀಯ–ಸೇನಾ ಸಂಘರ್ಷಗಳಿಂದ ಪ್ರತ್ಯೇಕಿಸಿ ನೋಡಬೇಕು: ಶಶಿ ತರೂರ್

ಏಜೆನ್ಸೀಸ್
Published 25 ಸೆಪ್ಟೆಂಬರ್ 2025, 6:49 IST
Last Updated 25 ಸೆಪ್ಟೆಂಬರ್ 2025, 6:49 IST
<div class="paragraphs"><p>ಟೀಮ್ ಇಂಡಿಯಾ&nbsp;ನಾಯಕ ಸೂರ್ಯಕುಮಾರ್ ಯಾದವ್ ಮತ್ತು&nbsp;ಕಾಂಗ್ರೆಸ್ ಸಂಸದ ಶಶಿ ತರೂರ್</p></div>

ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್

   

ನವದೆಹಲಿ: ಏಷ್ಯಾಕಪ್ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯ ಭಾನುವಾರ ನಡೆಯಲಿದ್ದು, ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಉಭಯ ತಂಡಗಳ ಆಟಗಾರರು ಕೈ ಕುಲುಕುತಾರೋ ಅಥವಾ ನಿರಾಕರಿಸುತ್ತಾರೋ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಟೂರ್ನಿಯಲ್ಲಿ ನಡೆದ ಲೀಗ್ ಹಂತದ ಎರಡು ಪಂದ್ಯಗಳಲ್ಲಿ ಉಭಯ ತಂಡಗಳ ಆಟಗಾರರು ಕೈಕುಲುಕಿರಲಿಲ್ಲ. ಈ ನಡೆ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಇದೇ ವಿಚಾರವಾಗಿ ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ಪಾಕಿಸ್ತಾನದ ವಿರುದ್ಧದ ಭಾವನೆಗಳು ಅರ್ಥವಾಗುವಂತಹದ್ದಾಗಿದ್ದರೂ, ಆಟವನ್ನು ರಾಜಕೀಯ ಮತ್ತು ಸೇನಾ ಸಂಘರ್ಷಗಳಿಂದ ಪ್ರತ್ಯೇಕಿಸಿ ನೋಡಬೇಕು’ ಎಂದು ತರೂರ್ ಹೇಳಿದ್ದಾರೆ.

‘ಪಾಕಿಸ್ತಾನದ ಬಗ್ಗೆ ಅಸಮಾಧಾನದ ಭಾವನೆಗಳಿದ್ದರೆ, ನಮ್ಮ ತಂಡ ಟೂರ್ನಿಯಲ್ಲಿ ಆಡಬಾರದಿತ್ತು ಎಂಬುದು ನನ್ನ ವೈಯಕ್ತಿಕ ಭಾವನೆ. ಆದರೆ, ನಾವು ಅವರೊಂದಿಗೆ ಆಡಲು ಹೋದರೆ, ಸಂಪ್ರದಾಯದಂತೆ ಆಟವನ್ನು ಆಡಬೇಕು. ಎದುರಾಳಿ ತಂಡದ ಆಟಗಾರರೊಂದಿಗೆ ಕೈಕುಲುಕಬೇಕಿತ್ತು’ ಎಂದು ತರೂರ್ ತಿಳಿಸಿದ್ದಾರೆ.

‘1999ರಲ್ಲಿ ನಡೆದ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಇಂತಹದೇ ಸನ್ನಿವೇಶವನ್ನು ನೋಡಿದ್ದೇವೆ. ದೇಶಕ್ಕಾಗಿ ನಮ್ಮ ಯೋಧರು ಹುತಾತ್ಮರಾದ ದಿನದಂದು ನಮ್ಮ ತಂಡ (ಟೀಮ್ ಇಂಡಿಯಾ) ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಆಡುತ್ತಿತ್ತು. ಆಗಲೂ ಉಭಯ ತಂಡಗಳ ಆಟಗಾರರು ಪರಸ್ಪರ ಕೈಕುಲುಕಿದ್ದರು. ಏಕೆಂದರೆ ಆಟವನ್ನು (ಕ್ರಿಕೆಟ್‌) ದೇಶಗಳ ನಡುವಿನ ರಾಜಕೀಯ ಮತ್ತು ಸೇನಾ ಸಂಘರ್ಷಗಳಿಂದ ಭಿನ್ನವಾಗಿ ನೋಡಬೇಕು ಎಂಬುದು ನನ್ನ ಅಭಿಪ್ರಾಯ’ ಎಂದು ಹೇಳಿದ್ದಾರೆ.

ಸೆಪ್ಟೆಂಬರ್ 21ರಂದು ಭಾರತ ವಿರುದ್ಧ ನಡೆದ ಪಂದ್ಯದಲ್ಲಿ ಪಾಕ್ ಕ್ರಿಕೆಟಿಗರಾದ ಸಾಹೀಬ್‌ ಝಾದ ಫರ್ಹಾನ್ ಮತ್ತು ಹ್ಯಾರಿಸ್‌ ರೌಫ್ ಅವರು ಅನುಚಿತ ವರ್ತನೆ ತೋರಿದ್ದು, ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ), ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಗುರುವಾರ ಅಧಿಕೃತವಾಗಿ ದೂರು ದಾಖಲಿಸಿದೆ.

ಟಾಸ್ ಹಾಕುವ ಸಂದರ್ಭದಲ್ಲಿ ಉಭಯ ತಂಡದ ನಾಯಕರು ಪರಸ್ಪರ ಕೈಕುಲುಕಿ ತಮ್ಮ ತಂಡಗಳ ಪಟ್ಟಿಯನ್ನು ವಿನಿಮಯ ಮಾಡಿಕೊಳ್ಳುವುದು ಸಂಪ್ರದಾಯ. ಪಂದ್ಯ ಮುಗಿದ ನಂತರ ಉಭಯ ತಂಡಗಳ ಆಟಗಾರರು ಸಾಲಾಗಿ ಹೋಗಿ ಕೈಕುಲುಕಿ ಹಾರೈಸುವುದು ವಾಡಿಕೆ. ಪಂದ್ಯದ ಫಲಿತಾಂಶಗಳು ಏನೇ ಆಗಿರಲಿ, ಈ ಪದ್ಧತಿಗಳು ಗೌರವದ ಸಂಕೇತಗಳೂ ಹೌದು. ಕ್ರಿಕೆಟ್‌ನಲ್ಲಿರುವ ಹಲವಾರು ಅಲಿಖಿತ ನಿಯಮಗಳಲ್ಲಿ ಇವು ಕೂಡ ರೂಢಿಗತವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.