ಶುಭಮನ್ ಗಿಲ್
ಕೃಪೆ: ಪಿಟಿಐ
ಅಹಮದಾಬಾದ್: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಗೆ ಭಾರತ ತಂಡವನ್ನು ಮುನ್ನಡೆಸುವ ಅವಕಾಶ ತಮಗೆ ಲಭಿಸಿರುವುದು 'ಅತಿದೊಡ್ಡ ಗೌರವ'ವೇ ಸರಿ ಎಂದು ಶುಭಮನ್ ಗಿಲ್ ಬಣ್ಣಿಸಿದ್ದಾರೆ.
ಇದೇ ತಿಂಗಳು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ, ಮೂರು ಏಕದಿನ ಹಾಗೂ ಐದು ಟಿ20 ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ. ಈ ಸರಣಿಗಳಿಗೆ ಬಿಸಿಸಿಐ ಶನಿವಾರ ತಂಡ ಪ್ರಕಟಿಸಿದೆ.
2023ರ ಏಕದಿನ ವಿಶ್ವಕಪ್‌ನಲ್ಲಿ ತಂಡವನ್ನು ಫೈನಲ್‌ವರೆಗೆ ಮುನ್ನಡೆಸಿದ್ದ ಹಾಗೂ ಇದೇ ವರ್ಷ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಟ್ಟಿದ್ದ ರೋಹಿತ್ ಶರ್ಮಾ ಬದಲಿಗೆ ಗಿಲ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 2027ರ ಏಕದಿನ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಯುವ ನಾಯಕನನ್ನು ಆಯ್ಕೆ ಮಾಡಲಾಗಿದೆ.
ಈ ಕುರಿತು ಮಾತನಾಡಿರುವ ಗಿಲ್, 'ಏಕದಿನ ಮಾದರಿಯಲ್ಲಿ ದೇಶವನ್ನು ಮುನ್ನಡೆಸುವ ಅವಕಾಶ ಲಭಿಸುವುದು ಅತಿ ದೊಡ್ಡ ಗೌರವ. ಇದು ನನ್ನ ಪಾಲಿಗೆ ಹೆಮ್ಮೆಯ ಸಂಗತಿ. ಉತ್ತಮವಾಗಿ ಕಾರ್ಯನಿರ್ವಹಿಸುವ ವಿಶ್ವಾಸವಿದೆ' ಎಂದಿದ್ದಾರೆ.
ರೋಹಿತ್, ಕೊಹ್ಲಿಗೆ ಪರೀಕ್ಷೆ
ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ತೆಗೆದುಕೊಂಡಿರುವ ಈ ದಿಟ್ಟ ತೀರ್ಮಾನದಿಂದಾಗಿ, ಅನುಭವಿಗಳಾದ ರೋಹಿತ್ ಮತ್ತು ವಿರಾಟ್ ಕೊಹ್ಲಿ ಅವರಿಗೆ ಪರೀಕ್ಷೆ ಎದುರಾಗಿದೆ.
2027ರ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಬೇಕಾದರೆ, ಆಸ್ಟ್ರೇಲಿಯಾ ಎದುರು ಅತ್ಯುತ್ತಮ ಪ್ರದರ್ಶನ ನೀಡಬೇಕಾದ ಒತ್ತಡ ಸೃಷ್ಟಿಯಾಗಿದೆ.
ಈ ಇಬ್ಬರು ದಿಗ್ಗಜರು ಟೆಸ್ಟ್ ಹಾಗೂ ಟಿ20 ಮಾದರಿಗೆ ಈಗಾಗಲೇ ವಿದಾಯ ಹೇಳಿದ್ದಾರೆ.
ಆಸಿಸ್ ಸರಣಿಗೆ ತಂಡಗಳು ಹೀಗಿವೆ
ಏಕದಿನ ತಂಡ: ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಅಕ್ಷರ್ ಪಟೇಲ್, ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣ, ಮೊಹಮ್ಮದ್ ಸಿರಾಜ್, ಅರ್ಶದೀಪ್ ಸಿಂಗ್, ಪ್ರಸಿದ್ಧ ಕೃಷ್ಣ, ಧ್ರುವ ಜುರೆಲ್, ಯಶಸ್ವಿ ಜೈಸ್ವಾಲ್
ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಶುಭಮನ್ ಗಿಲ್ (ಉಪನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವರುಣ್ ಚಕ್ರವರ್ತಿ, ಜಸ್‌ಪ್ರೀತ್ ಬೂಮ್ರಾ, ಆರ್ಷದೀಪ್ ಸಿಂಗ್, ಸಂಜು ಸ್ಯಾಮ್ಸನ್, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.