
ಕೊಲಂಬೊ: ಪಾಕಿಸ್ತಾನ ಸ್ಪಿನ್ನರ್ ಉಸ್ಮಾನ್ ತಾರಿಕ್ ‘ಔಟ್ ಆಫ್ ಸಿಲಬಸ್ ಕೊಶ್ಚನ್, ಆದರೆ, ನಾವು ಪರೀಕ್ಷೆಯಲ್ಲಿ ಯಾವುದೇ ಪ್ರಶ್ನೆಯನ್ನು ಕೂಡ ಬಿಟ್ಟುಬರಬಾರದು. ಅದಕ್ಕೆ ನಮ್ಮದೇ ಶೈಲಿಯ ಉತ್ತರ ಬರಿಯುತ್ತೇವೆ ಎಂದು ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.
ಟಿ20 ವಿಶ್ವಕಪ್‌ನ ಎ ಗುಂಪಿನ ಲೀಗ್ ಪಂದ್ಯದಲ್ಲಿ ಭಾರತವು ಪಾಕಿಸ್ತಾನ ತಂಡವನ್ನು ಭಾನುವಾರ(ಫೆ.15) ಎದುರಿಸಲಿದೆ. ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ.
ವಿಶ್ವಕಪ್‌ನ ಕಳೆದೆರೆಡು ಪಂದ್ಯಗಳಲ್ಲಿ ನಾವು ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಆದರೆ, ಪಾಕ್ ವಿರುದ್ಧದ ಪಂದ್ಯಕ್ಕೆ ನಾವು ಸಿದ್ಧರಾಗಿದ್ದೇವೆ. ಪಾಕ್ ಬೌಲಿಂಗ್ ಅನ್ನು ಸಮರ್ಥವಾಗಿ ಎದುರಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿವಾದಿತ ಬೌಲಿಂಗ್ ಶೈಲಿಯ ಮೂಲಕ ಸುದ್ದಿಯಲ್ಲಿರುವ ಉಸ್ಮಾನ್ ತಾರಿಕ್ ಕುರಿತ ಪ್ರಶ್ನೆಗೆ ಉತ್ತರಿಸಿದ ಸೂರ್ಯಕುಮಾರ್, ನಮ್ಮ ಬ್ಯಾಟರ್‌ಗಳು ಅದೇ ರೀತಿಯ ಬೌಲರ್‌ಗಳು ಹಾಗೂ ಬೌಲಿಂಗ್ ಶೈಲಿಗೆ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಒಬ್ಬ ಅಥವಾ ಇಬ್ಬರು ಬ್ಯಾಟರ್‌ಗಳು ಪಂದ್ಯವನ್ನು ಗೆಲ್ಲಿಸಬಲ್ಲರು ಎಂದು ಹೇಳಿದ್ದಾರೆ.
ಪಾಕಿಸ್ತಾನ ತಂಡವು ಈಗಾಗಲೇ ಶ್ರೀಲಂಕಾದ ಪಿಚ್‌ಗಳಲ್ಲಿ ವಿಶ್ವಕಪ್ ಪಂದ್ಯಗಳನ್ನು ಆಡಿದೆ. ಆದರೆ, ಭಾರತದ ಆಟಗಾರರಿಗೂ ಇಲ್ಲಿನ ಮೈದಾನಗಳಲ್ಲಿ ಆಡಿ ಅನುಭವವಿದೆ. ಹಾಗಾಗಿ ಇಬ್ಬರಿಗೂ ಪಂದ್ಯ ಗೆಲ್ಲಲು ಸಮನಾದ ಅವಕಾಶವಿದೆ. ನಾವು ಈ ಪಂದ್ಯವನ್ನು ಗೆಲ್ಲುವತ್ತ ಗಮನ ಹರಿಸಿದ್ದೇವೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.