ADVERTISEMENT

ಮತ್ತೆ ಅಬ್ಬರಿಸಿದ ರಹಾನೆ; ಬರೋಡಾ ಮಣಿಸಿದ ಮುಂಬೈ ಫೈನಲ್‌ಗೆ ಲಗ್ಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಡಿಸೆಂಬರ್ 2024, 10:36 IST
Last Updated 13 ಡಿಸೆಂಬರ್ 2024, 10:36 IST
<div class="paragraphs"><p>ಅಜಿಂಕ್ಯ ರಹಾನೆ</p></div>

ಅಜಿಂಕ್ಯ ರಹಾನೆ

   

(ಚಿತ್ರ ಕೃಪೆ: ಬಿಸಿಸಿಐ)

ಬೆಂಗಳೂರು: ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ಬಿರುಸಿನ ಅರ್ಧಶತಕದ (98) ನೆರವಿನಿಂದ ಸೈಯದ್ ಮುಷ್ತಾಕ್ ಅಲಿ ದೇಶೀಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬರೋಡಾ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಆರು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಮುಂಬೈ ಫೈನಲ್‌ಗೆ ಲಗ್ಗೆ ಇಟ್ಟಿದೆ.

ADVERTISEMENT

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಂಡ್ಯ ಬ್ರದರ್ಸ್ ಅವರನ್ನು ಒಳಗೊಂಡ ಬರೋಡಾ ತಂಡವು ಏಳು ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು.

ನಾಯಕ ಕೃಣಾಲ್ ಪಾಂಡ್ಯ 30 ಹಾಗೂ ಹಾರ್ದಿಕ್ ಪಾಂಡ್ಯ ಐದು ರನ್ ಗಳಿಸಿ ಔಟ್ ಆದರು. ಶಿವಲಿಕ್ ಶರ್ಮಾ ಅಜೇಯ 36 ರನ್ ಗಳಿಸಿದರು.

ಈ ಗುರಿ ಬೆನ್ನಟ್ಟಿದ ಮುಂಬೈ ಆರಂಭದಲ್ಲೇ ಆಘಾತಕ್ಕೊಳಗಾಯಿತು. ಪೃಥ್ವಿ ಶಾ ಎಂಟು ರನ್ ಗಳಿಸಿ ಪೆವಿಲಿಯನ್ ಸೇರಿದರು.

ಆದರೆ ನಾಯಕ ಶ್ರೇಯಸ್ ಅಯ್ಯರ್ ಜೊತೆಗೂಡಿದ ರಹಾನೆ ದ್ವಿತೀಯ ವಿಕೆಟ್‌ಗೆ 88 ರನ್‌ಗಳ ಅಮೂಲ್ಯ ಜೊತೆಯಾಟ ಕಟ್ಟಿದರು.

ಬರೋಡಾ ಬೌಲರ್‌ಗಳನ್ನು ಸಮರ್ಥವಾಗಿ ಎದುರುಸಿದ ರಹಾನೆ 56 ಎಸೆತಗಳಲ್ಲಿ 98 ರನ್ ಗಳಿಸಿ ಅಬ್ಬರಿಸಿದರು. ಕೇವಲ ಎರಡು ರನ್‌ಗಳಿಂದ ಶತಕ ವಂಚಿತರಾದ ರಹಾನೆ ಇನಿಂಗ್ಸ್‌ನಲ್ಲಿ 11 ಬೌಂಡರಿ ಹಾಗೂ ಐದು ಸಿಕ್ಸರ್‌ಗಳು ಸೇರಿದ್ದವು.

ರಹಾನೆಗೆ ಉತ್ತಮ ಸಾಥ್ ನೀಡಿದ ಶ್ರೇಯಸ್ 30 ಎಸೆತಗಳಲ್ಲಿ 46 ರನ್ (4 ಬೌಂಡರಿ, 3 ಸಿಕ್ಸರ್) ಗಳಿಸಿದರು. ಈ ನಡುವೆ ಸೂರ್ಯ ಕುಮಾರ್ ಯಾದವ್ ಒಂದು ರನ್ ಗಳಿಸಿ ಔಟ್ ಆದರು.

ಅಂತಿಮವಾಗಿ 17.2 ಓವರ್‌ಗಳಲ್ಲಿ ಮುಂಬೈ ಗೆಲುವು ದಾಖಲಿಸಿತು. ಅಜಿಂಕ್ಯ ರಹಾನೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಮಗದೊಂದು ಸೆಮಿಫೈನಲ್‌ನಲ್ಲಿ ದೆಹಲಿ ಮತ್ತು ಮಧ್ಯಪ್ರದೇಶ ತಂಡಗಳು ಮುಖಾಮುಖಿಯಾಗಲಿವೆ. ಫೈನಲ್ ಪಂದ್ಯವು ಡಿಸೆಂಬರ್ 15, ಭಾನುವಾರ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.