ADVERTISEMENT

IND vs WI T20 Cricket: ಚುಟುಕು ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಗಳಿಸಿದ ರೋಹಿತ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜುಲೈ 2022, 6:48 IST
Last Updated 30 ಜುಲೈ 2022, 6:48 IST
ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ  (ಚಿತ್ರಕೃಪೆ: @BCCI)
ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ (ಚಿತ್ರಕೃಪೆ: @BCCI)   

ಟ್ರಿನಿಡಾಡ್:ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ ಎನಿಸಿದರು.ಶುಕ್ರವಾರ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಅಮೋಘ ಅರ್ಧಶತಕ ಸಿಡಿಸುವ ಮೂಲಕ ಅವರು ಈ ಸಾಧನೆ ಮಾಡಿದರು.

ಅಂತರರಾಷ್ಟ್ರೀಯ ಚುಟುಕು ಕ್ರಿಕೆಟ್‌ನಲ್ಲಿ ಅತಿಹೆಚ್ಚು (4) ಶತಕ ಸಿಡಿಸಿದ ಶ್ರೇಯವನ್ನೂ ಹೊಂದಿರುವ ರೋಹಿತ್‌, ಈ ಮಾದರಿಯಲ್ಲಿ ಇದುವರೆಗೆ 129 ಪಂದ್ಯಗಳ 121 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿದ್ದಾರೆ. ಅವರು 27 ಅರ್ಧಶತಕ ಸಹಿತ ಒಟ್ಟು3,443 ರನ್‌ ಕಲೆ ಹಾಕಿದ್ದಾರೆ.

ನ್ಯೂಜಿಲೆಂಡ್‌ನ ಮಾರ್ಟಿನ್‌ ಗಪ್ಟಿಲ್‌ ನಂತರದ ಸ್ಥಾನದಲ್ಲಿದ್ದು, ಅವರು116 ಪಂದ್ಯಗಳ 112 ಇನಿಂಗ್ಸ್‌ಗಳಲ್ಲಿ 2 ಶತಕ ಹಾಗೂ 20 ಅರ್ಧಶತಕ ಸಹಿತ 3,399 ರನ್‌ ಗಳಿಸಿದ್ದಾರೆ.

ADVERTISEMENT

ಭಾರತದ ಮಾಜಿ ನಾಯಕ ವಿರಾಟ್‌ ಕೊಹ್ಲಿ 99 ಪಂದ್ಯಗಳ 91 ಇನಿಂಗ್ಸ್‌ಗಳಲ್ಲಿ 3,308 ರನ್‌ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಅವರು 30 ಅರ್ಧಶತಕ ಸಿಡಿಸಿದ್ದಾರೆ.

ಭಾರತಕ್ಕೆ68 ರನ್‌ ಜಯ
ಇಲ್ಲಿನಬ್ರಿಯಾನ್‌ಲಾರಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡದ ಪರ ರೋಹಿತ್‌ ಶರ್ಮಾ (64) ಹಾಗೂ ದಿನೇಶ್‌ ಕಾರ್ತಿಕ್‌ (42) ಬಿರುಸಿನ ಬ್ಯಾಟಿಂಗ್‌ ನಡೆಸಿದರು. ಹೀಗಾಗಿ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 190 ರನ್‌ ಕಲೆಹಾಕಿತ್ತು.

ಈ ಗುರಿ ಬೆನ್ನತ್ತಿದ ವಿಂಡೀಸ್‌ ಬ್ಯಾಟರ್‌ಗಳು ಭಾರತದ ಬೌಲರ್‌ಗಳೆದುರು ವೈಫಲ್ಯ ಅನುಭವಿಸಿದರು. ಅರ್ಶದೀಪ್‌ ಸಿಂಗ್‌, ರವಿಚಂದ್ರನ್‌ ಅಶ್ವಿನ್‌ ಹಾಗೂ ರವಿ ಬಿಷ್ಣೋಯಿ ತಲಾ ಎರಡು ವಿಕೆಟ್‌ ಕಿತ್ತರೆ, ಅನುಭವಿಗಳಾದ ಭುವನೇಶ್ವರ್‌ ಕುಮಾರ್‌ ಮತ್ತು ರವೀಂದ್ರ ಜಡೇಜ ಒಂದೊಂದು ವಿಕೆಟ್ ಹಂಚಿಕೊಂಡರು.

ಹೀಗಾಗಿ ವಿಂಡೀಸ್‌ ಪಡೆ ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ಗೆ 122 ರನ್‌ ಗಳಿಸಲಷ್ಟೇ ಶಕ್ತವಾಯಿತು. 68 ರನ್‌ ಅಂತರದ ಗೆಲುವು ಸಾಧಿಸಿದ ಭಾರತ ಐದು ಪಂದ್ಯಗಳ ಸರಣಿಯಲ್ಲಿ 1–0 ಅಂತರದ ಮುನ್ನಡೆ ಸಾಧಿಸಿದೆ.

ಟೂರ್ನಿಯ ಎರಡನೇ ಪಂದ್ಯವು ಆಗಸ್ಟ್‌ 1ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.